Advertisement

ನೀರಾವರಿ ಇಲಾಖೆ ನಿರ್ಲಕ್ಷ್ಯಕ್ಕೆ ಅಸಮಾಧಾನ

03:54 PM Sep 19, 2022 | Team Udayavani |

ಶಿರಹಟ್ಟಿ: ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದ ಅಂಗವಾಗಿ ತಾಲೂಕಿನ ಹೆಬ್ಟಾಳ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಾರ್ವಜನಿಕ ಅಹವಾಲು ಸ್ವೀಕಾರ ಕಾರ್ಯಕ್ರಮ ಜರುಗಿತು.

Advertisement

ಗ್ರಾಮಸ್ಥರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹೊಸ ಆಂಬ್ಯುಲೆನ್ಸ್‌ ವ್ಯವಸ್ಥೆ ಹಾಗೂ ಕಾಯಂ ವೈದ್ಯರ ನಿಯೋಜನೆ, ವೈದ್ಯರಿಲ್ಲದೆ ಬೀಗ ಹಾಕಿರುವ ಪಶು ಆಸ್ಪತ್ರೆ, ಹೆಬ್ಟಾಳ ಗ್ರಾಮಕ್ಕಿರುವ ಸಂಪರ್ಕ ರಸ್ತೆಗಳ ದುರಸ್ತಿ, ಗ್ರಾಮದಲ್ಲಿ ಉತ್ತಮ ರಸ್ತೆಗಳ ನಿರ್ಮಾಣ, ಗ್ರಾಪಂನಲ್ಲಿ ಅವ್ಯವಸ್ಥೆ ಸರಿಪಡಿಸುವಂತೆ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳ ಮೇಲೆ ಆಕ್ರೋಶ ವ್ಯಕ್ತಪಡಿದ್ದನ್ನು ಗಮನಿಸಿದ ಡಿಸಿ, ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಆಯಾ ಇಲಾಖೆಗಳಿಗೆ ಸಂಬಂಧಿಸಿದ ಸಾರ್ವಜನಿಕ ಪ್ರಶ್ನೆಗಳಿಗೆ ಆಯಾ ಇಲಾಖೆ ಅಧಿಕಾರಿಗಳೇ ಉತ್ತರಿಸಲು ಸೂಚಿಸಿದರು.

ನೀರು ಹರಿಸಿ ಇಲ್ಲವೇ ವಿಷ ನೀಡಿ: ಕಳೆದ 11 ವರ್ಷಗಳಿಂದಲೂ ಏತ ನೀರಾವರಿ ಯೋಜನೆಯ ಕಾಲುವೆಯಲ್ಲಿ ಒಂದು ಎಕರೆಗೂ ನೀರು ಹರಿದಿಲ್ಲ. ಆದರೂ ವರ್ಷಕ್ಕೆ 40 ಲಕ್ಷ ನಿರ್ವಹಣೆ ಭರಿಸುತ್ತಾರೆ. ಅಚ್ಚುಕಟ್ಟು ಪ್ರದೇಶವೆಂದು ಅಧಿಕಾರಿಗಳು ಹೇಳುತ್ತಿರುವುದರಿಂದ ಈ ಭಾಗದ ರೈತರಿಗೆ ಕಾಲುವೆಯಲ್ಲಿ ನೀರು ಬರುತ್ತಿಲ್ಲ. ಜೊತೆಗೆ ಇನ್ಸುರೆನ್ಸ್‌ ಪ್ರಿಮಿಯಂ ತುಂಬಿದರೂ ಪರಿಹಾರ ಸಿಗುತ್ತಿಲ್ಲ. ಈ ಬಗ್ಗೆ ಹಲವಾರು ಬಾರಿ ಎಲ್ಲ ಹಂತದ ಅಧಿಕಾರಿಗಳಿಗೂ ಮನವಿ ನೀಡಿದರೂ ಯಾವುದೇ ಪ್ರಯೋಜನವಾಗಿರುವುದಿಲ್ಲ. ಆದ್ದರಿಂದ ನಮ್ಮ ಕಾಲುವೆಗೆ ನೀರು ಹರಿಸಿ ಇಲ್ಲವೇ ವಿಷ ನೀಡಿ ಎಂದು ರೈತರಾದ ಬಸವರಾಜ ಶಾಲಿ, ಹೇಮಂತ ಪುರ್ತಗೇರಿ, ವೀರೇಶರೆಡ್ಡಿ ಕಾಮರಡ್ಡೇರ ಜಿಲ್ಲಾಧಿಕಾರಿಗಳ ಬಳಿ ತಮ್ಮ ಅಳಲನ್ನು ತೋಡಿಕೊಂಡರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ತಹಶೀಲ್ದಾರ್‌ ಮತ್ತು ರೈತರು ಸೇರಿ ಜಂಟಿಯಾಗಿ ಸರ್ವೇ ನಡೆಸಿ ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಮಗೆ 15 ದಿನಗಳಲ್ಲಿ ನೀಡಿ. ಅದನ್ನು ಸರಕಾರಕ್ಕೆ ಕಳುಹಿಸಿ ರೈತರಿಗೆ ಅನುಕೂಲ ಕಲ್ಪಿಸುವುದಾಗಿ ಹೇಳಿದರು.

ಶಾಸಕ ರಾಮಣ್ಣ ಲಮಾಣಿ, ಈ ಬಗ್ಗೆ ಹಲವಾರು ಬಾರಿ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಹೇಳಿದರೂ ಕಾಲುವೆ ದುರಸ್ತಿಗೆ ಮುಂದಾಗಿಲ್ಲ. ಇಲಾಖೆಯಲ್ಲಿ ಅವ್ಯವಹಾರ ಆಗಿದ್ದು, ಬೇಗನೆ ಕಾಲುವೆ ದುರಸ್ತಿ ಮಾಡದೆ ಇದ್ದರೆ ಬೆಂಗಳೂರಿನ ಕಚೇರಿಯಲ್ಲಿ ರೈತರೊಂದಿಗೆ ಸತ್ಯಾಗ್ರಹ ಕೂಡುವುದಾಗಿ ಹೇಳಿದರು.

Advertisement

ಕಾರ್ಯಕ್ರಮದಲ್ಲಿ ಸ್ವೀಕರಿಸಿದ ಅರ್ಜಿ: ಕಂದಾಯ ಇಲಾಖೆ- 167, ಭೂಮಾಪನ-20, ಹೆಸ್ಕಾಂ-11, ಪಿಆರ್‌ಇಡಿ-4, ತೋಟಗಾರಿಕೆ-1, ವಿಕಲಚೇತನ ಇಲಾಖೆ-1, ಆರೋಗ್ಯ ಇಲಾಖೆ-1, ಸಿಡಿಪಿಓ,-02, ಅಂಬೇಡ್ಕರ್‌ ನಿಗಮ-1, ಬಿಎಸ್‌ಎನ್‌ಎಲ್‌-1, ಸಮಾಜ ಕಲ್ಯಾಣ ಇಲಾಖೆ-9, ಗ್ರಾಮ ಪಂಚಾಯತಿ-147, ನೀರಾವರಿ ಇಲಾಖೆ-2, ಕಾರ್ಮಿಕ ಇಲಾಖೆ-1, ಶಿಕ್ಷಣ ಇಲಾಖೆ-8, ಆಹಾರ ಇಲಾಖೆ-21, ಪಿಡಬುÉÂಡಿ-7 ಹೀಗೆ 404ಕ್ಕೂ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, ಎಲ್ಲ ಅರ್ಜಿಗಳ ವಿಲೇವಾರಿಯನ್ನು ಅರ್ಜಿದಾರರ ಸಮಕ್ಷಮ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಂದ ಅದಕ್ಕೆ ಉತ್ತರವನ್ನು ಡಿಸಿ ಅವರು ಪಡೆದು, ಅದರ ಪರಿಹಾರಕ್ಕೆ ಸೂಚಿಸಿದರು.

ಫಲಾನುಭವಿಗಳಿಗೆ ಮಂಜೂರಾತಿ ಆದೇಶ: ವಿವಿಧ ಮಾಸಾಶನಗಳಿಗೆ ಆಯ್ಕೆಯಾದಂತಹ 49 ಅರ್ಹ ಫಲಾನುಭವಿಗಳಿಗೆ ಮಂಜೂರಾತಿ ಆದೇಶ ಪತ್ರ, ತೋಟಗಾರಿಕೆ ಇಲಾಖೆ ವತಿಯಿಂದ 15 ರೈತರಿಗೆ ಬೀಜ ಗೊಬ್ಬರ, ಸರ್ವೇ ಇಲಾಖೆಯಿಂದ 213 ರೈತರಿಗೆ ಪಿಟಿ ಶೀಟ್‌ ಹಾಗೂ ಆರೊಗ್ಯ ಇಲಾಖೆ ವತಿಯಿಂದ ಪೌಷ್ಟಿಕಾಂಶದ ಕಿಟ್‌ಗಳನ್ನು ವಿತರಿಸಲಾಯಿತು.

ಶಾಸಕ ರಾಮಣ್ಣ ಲಮಾಣಿ, ಜಿಪಂ ಸಿಇಒ ಡಾ| ಸುಶೀಲಾ ಬಿ., ಉಪವಿಭಾಗಾಧಿಕಾರಿ ಅನ್ನಪೂರ್ಣ ಮುದಕಮ್ಮನವರ, ತಹಶೀಲ್ದಾರ್‌ ಕೆ.ಆರ್‌. ಪಾಟೀಲ, ಸಿಪಿಐ ವಿಕಾಸ ಲಮಾಣಿ, ಪಿಎಸ್‌ಐ ಪ್ರವೀಣಕುಮಾರ ಗಂಗೋಳ, ಹೆಬ್ಟಾಳ ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರು ಮತ್ತು ಗ್ರಾಮದ ಮುಖಂಡರು, ಜಿಲ್ಲಾ ಹಾಗೂ ತಾಲೂಕು ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next