ಮಾಸ್ತಿ: ಕೋಲಾರ ಜಿಲ್ಲಾಧಿಕಾರಿ ಸಿ.ಸತ್ಯಭಾಮ ಅವರು ಮಾಸ್ತಿ ನಾಡ ಕಚೇರಿಗೆ ಬುಧವಾರ ದಿಢೀರ್ ಭೇಟಿ ನೀಡಿ ಕಚೇರಿಯಲ್ಲಿ ಹಲವಾರು ಕಡತಗಳನ್ನು ಪರೀಶಿಲಿಸಿ, ದಾಖಲೆಗಳನ್ನು ಸರಿಯಾಗಿ ನಿರ್ವಹಣೆ ಮಾಡದಿರುವ ಬಗ್ಗೆ ಕಂಡು ಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ತರಾಟೆ: ಜಿಲ್ಲಾಧಿಕಾರಿ ಸಿ.ಸತ್ಯಭಾಮ ಅವರು ಕಚೇರಿ ಬಳಿ ಬಂದು ವಾಹನ ಇಳಿಯುತ್ತಿದ್ದಂತೆ ಪ್ರತಿಯೊಬ್ಬರು ಮಾಸ್ಕ್ ಧರಿಸುವಂತೆ ಸಾರ್ವಜನಿಕರಿಗೆ ಸೂಚಿಸಿ, ನಂತರ ನಾಡಕಚೇರಿಗೆ ತೆರ ಳಿದ ಅವರು ಕಂದಾಯ ಅಧಿಕಾರಿ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ. ಒಂದು ದಾಖಲೆಯೂ ಸಹ ಸರಿಯಾಗಿ ನಿರ್ವಹಿಸುತ್ತಿಲ್ಲ. ಕಾಟಾಚಾರಕ್ಕೆ ಕಚೇರಿಗೆ ಆಗಮಿಸಿ ಕಾಲಹರಣ ಮಾಡುತ್ತಿದ್ದೀರಿ ಎಂದು ಹರಿಹಾಯ್ದರು. ಈ ಭಾಗದಲ್ಲಿ ಅನಧಿಕೃತವಾಗಿ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದರೂ ಯಾಕೆ ನಿಲ್ಲಿಸಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.
ಸೂಕ್ತ ಕ್ರಮ: ಮುಂದಿನ ವಾರ ಅಥವಾ 15 ದಿನಗಳೊಳಗೆ ಮತ್ತೆ ಭೇಟಿ ನೀಡುತ್ತೇನೆ. ಆ ವೇಳೆ ಪ್ರತಿಯೊಂದು ದಾಖಲೆಗಳನ್ನು ಪರಿಶೀಲಿಸುತ್ತೇನೆ. ಒಂದು ವೇಳೆ ಸರಿಯಾದ ರೀತಿಯಲ್ಲಿ ದಾಖಲೆ ನಿರ್ವಹಣೆ ಮಾಡದಿರುವುದು ಕಂಡು ಬಂದಲ್ಲಿ ಅಂತಹ ಅಧಿಕಾರಿ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಅರ್ಧಕ್ಕೆ ಕಾಮಗಾರಿ: ಮಾಸ್ತಿ ಗ್ರಾಮದಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಕಾಲೇಜು ವಿದ್ಯಾರ್ಥಿನಿ ಲಯದ ಕಟ್ಟಡ ಕಾಮಗಾರಿಯು ಅರ್ಧಕ್ಕೆ ನಿಂತು 10 ವರ್ಷಗಳೇ ಕಳೆದಿದೆ. ಕಟ್ಟಡ ಕಾಮಗಾರಿ ಹೊಣೆ ಹೊತ್ತಿರುವ ಲ್ಯಾಂಡ್ ಆರ್ಮಿ ಅವರುಕಾಮಗಾರಿ ಪೂರ್ಣಗೊಳಿಸದೆ, ಅರ್ಧಕ್ಕೆ ನಿಲ್ಲಿಸಿರುವುದರಿಂದ ಹಾಳು ಕೊಂಪೆಯಾಗಿ ನಿರ್ಮಾಣವಾಗಿದೆ.
ಗಮನ ಹರಿಸಿ, ವಿದ್ಯಾರ್ಥಿ ನಿಲಯವು ಪೂರ್ಣಗೊಳಿಸಲುಕ್ರಮಕೈಗೊಳ್ಳಬೇಕು ಎಂದು ದಲಿತ ಮುಖಂಡರಾದ ಮಾಸ್ತಿ ಬಾಬು ಹಾಗೂ ದೊಡ್ಡಕಲ್ಲಹಳ್ಳಿ ನಾರಾಯಣಸ್ವಾಮಿ ಅವರು ಜಿಲ್ಲಾಧಿಕಾರಿ ಸಿ.ಸತ್ಯಭಾಮ ಅವರಿಗೆ ಮನವಿ ಸಲ್ಲಿಸಿ,ಒಮ್ಮೆ ನಿಲಯದಕಾಮಗಾರಿ ನಡೆದಿರುವ ಸ್ಥಳಕ್ಕೆ ಭೇಟಿ ಕೊಡುವಂತೆ ಮನವಿ ಮಾಡಿದರು.