Advertisement
ಈ ಹಿಂದೆ ತಾಲೂಕಿನ ಶಿಶಿಲ ಗ್ರಾಮದಲ್ಲಿ ದ.ಕ.ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಅವರು ಮೊದಲ ಗ್ರಾಮ ವಾಸ್ತವ್ಯ ಹೂಡಿದ್ದರು. ಇದೀಗ ತಾಲೂಕಿನಲ್ಲಿ ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ 2ನೇ ಗ್ರಾಮ ವಾಸ್ತವ್ಯ ಇದಾಗಿದೆ. ಕಳೆದ ಬಾರಿಗಿಂತ ಈ ಬಾರಿ ಇನ್ನಷ್ಟು ಬೇಡಿಕೆಗಳಿವೆ. ಅರಣ್ಯದಂಚಿನ ಊರಿನಲ್ಲಿ ಕೃಷಿ ಪ್ರಧಾನ ಭೂಮಿಗೆ ಆನೆ ಸಹಿತ ಕಾಡು ಪ್ರಾಣಿಗಳ ಉಪಟಳ ಒಂದೆಡೆಯಾದರೆ, ಅಡಿಕೆ ಬೆಳೆಗೆ ಎಲೆಚುಕ್ಕಿ ರೋಗ ಬಂದು ಕೃಷಿ ಜರ್ಝರಿತವಾಗುತ್ತಿದೆ. ಅತ್ತ ಅಕ್ರಮ ಸಕ್ರಮ, 94 ಸಿ, ಸೇರಿದಂತೆ ಅರಣ್ಯದಂಚಿನಲ್ಲಿ ಬರುವ ರಸ್ತೆಗಳಿಗೆ ಕಾಯಕಲ್ಪ ಬೇಕಿದೆ.
Related Articles
Advertisement
ತಾಲೂಕು ಕಚೇರಿಗೆ ಬರಬೇಕಾದರೆ ಸುತ್ತಿಬಳಸಿ ಬರಬೇಕು. ಇದಕ್ಕಾಗಿ ತಮ್ಮನ್ನು ಚಿಕ್ಕಮಗಳೂರಿಗೆ ಸೇರಿಸಿ ಎಂದು ಕೇಳಿಕೊಂಡರು ತಾಂತ್ರಿಕ ಸಮಸ್ಯೆಯಿಂದ ಸಾಧ್ಯವಾಗಿಲ್ಲ. ಈ ಭಾಗಕ್ಕೆ ದಿಡುಪೆ ಮೂಲಕ ಸಂಸೆಗೆ ರಸ್ತೆ ಕಾಯಕಲ್ಪ ಬೇಕಿದೆ. 10 ಕಿ.ಮೀ. ವ್ಯಾಪ್ತಿಯ ಎಳನೀರು-ಸಂಸೆ ರಸ್ತೆ ಅರಣ್ಯ ಹಾಗೂ ಕಂದಾಯ ಇಲಾಖೆಯ ವ್ಯಾಪ್ತಿಯಲ್ಲಿ ಬರುತ್ತದೆ. ಕಂದಾಯ ಇಲಾಖೆಯ ವ್ಯಾಪ್ತಿಯ 3 ಕಿ.ಮೀ. ರಸ್ತೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ. ಅರಣ್ಯ ವ್ಯಾಪ್ತಿಯ ರಸ್ತೆ ಕುರಿತು ಸಮೀಕ್ಷೆಗಳು ನಡೆದಿವೆ. ಈ ರಸ್ತೆ ನಿರ್ಮಾಣ ಈ ಪ್ರದೇಶದ ಬಹುದೊಡ್ಡ ಬೇಡಿಕೆಯಾಗಿದೆ.
ಪ್ರವಾಸೋದ್ಯಮ ಕನಸು ಚಿಗುರುವುದೇ ?:
ಈ ಗ್ರಾಮದಲ್ಲಿ ಬಂಗಾರಪಲ್ಕೆ, ಎಳನೀರು, ಕಡಮ ಗುಂಡಿ ಸೇರಿದಂತೆ ಜನಾಕರ್ಷಕ ಜಲಪಾತಗಳಿವೆ. ಪ್ರವಾಸಿಗರು ವಿವಿಧೆಡೆಯಿಂದ ಆಗಮಿಸುತ್ತಿದ್ದಾರೆ. ನಿಸರ್ಗದತ್ತ ಜಾಗಕ್ಕೆ ತೆರಳಲು ಅರಣ್ಯ ಇಲಾಖೆಗೆ ಹಣ ಪಾವತಿ ಮಾಡಬೇಕು. ಆದರೆ ಆವಶ್ಯಕ ಸೌಕರ್ಯ ಕಲ್ಪಿಸುತ್ತಿಲ್ಲ. ಗ್ರಾಮದಲ್ಲಿ ಅಭಿವೃದ್ಧಿ ಕಾಮಗಾರಿ ನಡೆಸಲು ಸಾಕಷ್ಟು ಅನುದಾನ ಬೇಕಿದೆ. ಇಲ್ಲಿ ಶಿಥಿಲಾವಸ್ಥೆ ತಲುಪಿ ಬೀಳುವ ಹಂತದಲ್ಲಿರುವ ಮಲೆಕುಡಿಯ ಸಮುದಾಯ ಭವನದ ಸ್ಥಳದ ಕುರಿತ ತಕರಾರು ಇದ್ದು ಇದು ಜಿಲ್ಲಾಧಿಕಾರಿಗಳ ಕಚೇರಿಗೆ ತಲುಪಿದೆ. ಗ್ರಾಮ ವಾಸ್ತವ್ಯದಲ್ಲಿ ಈ ಸಮಸ್ಯೆ ಇತ್ಯರ್ಥವಾಗುವುದು ಬಹು ಮುಖ್ಯವಾಗಿದೆ.
ಊರು ಸೇರಿವೆ ವನ್ಯಜೀವಿಗಳು :
ಮಲವಂತಿಗೆ ಕುದುರೆಮುಖ ರಾಷ್ಟ್ರೀಯ ಉದ್ಯಾನದ ಅಂಚಿನಲ್ಲಿರುವ ಊರು. ಅರಣ್ಯದಲ್ಲಿ ಆಹಾರವಿಲ್ಲ, ಊರಿ ನಲ್ಲಿ ಆಹಾರಕ್ಕೆ ಕೊರತೆಯಿಲ್ಲ, ಹೀಗಾಗಿ ವನ್ಯ ಜೀವಿಗಳು ಕೃಷಿಯನ್ನೇ ಬುಡಮೇಲು ಮಾಡುತ್ತಿವೆ. ಕಾಡಾನೆ, ಹಂದಿ, ನವಿಲು, ಮುಳ್ಳುಹಂದಿ,ಮಂಗಗಳ ಕಾಟಕ್ಕೆ ರೈತರು ಹೈರಾಣಾಗಿದ್ದಾರೆ. ಈಗೀಗ ಚಿರತೆಯ ದಾಳಿಯೂ ಆಗ ತೊಡಗಿದೆ. ಆನೆ ಕಂದಕ, ಆನೆ ಕಾರಿಡಾರ್ ಶಬ್ದ ಕೇಳಿದ್ದು ಹೊರತಾಗಿ ಯಾವುದೇ ಇಲಾಖೆಯಿಂದ ಅನುಷ್ಠಾನಗೊಂಡಿಲ್ಲ.
ನೇತ್ರಾವತಿ ಒಡಲ ಬಗೆವ ಮರಳು ದಂಧೆ :
ಇಲ್ಲಿನ ನೇತ್ರಾವತಿ ಸೇತುವೆ ತಳಭಾಗದಲ್ಲಿ ರಾತ್ರಿ ಹೊತ್ತು ಮರಳು ದಂಧೆ ನಡೆಯುವ ಬಗ್ಗೆ ದೂರುಗಳು ಕೇಳಿಬಂದಿದ್ದವು. ನೇತ್ರಾವತಿ ಒಡಲಲ್ಲಿ ಸಾಧ್ಯವಾದರೆಲ್ಲ ಅಕ್ರಮ ಮರಳುಗಾರಿಕೆ ಎಗ್ಗಿಲ್ಲದೆ ನಡೆಯುತ್ತಿದೆ ಎಂಬುದು ಅನೇಕ ಬಾರಿ ಸಾಬೀತಾದರೂ ಜನ ದಂಧೆಯ ಬೆದರಿಕೆಗೆ ಮೌನ ವಾಗಿದ್ದಾರೆ. ಈ ವಿಚಾರ ಡಿಸಿ ವೇದಿಕೆಯಲ್ಲಿ ಚರ್ಚೆಗೆ ಬರಬಹುದೇ ಎಂಬುದು ಕಾದು ನೋಡಬೇಕಿದೆ.
ಅಡಿಕೆಯನ್ನು ಕೊಳ್ಳೆ ಹೊಡೆದ ಎಲೆಚುಕ್ಕಿ :
ಎಲೆಚುಕ್ಕಿರೋಗ ಮಲವಂತಿಗೆ ಗ್ರಾಮದ ಎಳನೀರು ಭಾಗಕ್ಕೆ ಆವರಿಸಿ 150 ಎಕ್ರೆಯಷ್ಟು ಅಡಿಕೆ ಗಿಡ ನಶಿಸುವ ಹಂತದಲ್ಲಿದೆ. 2019ರಲ್ಲಿ ಆರಂಭವಾದ ಎಲೆ ಚುಕ್ಕಿ ರೋಗ ಪ್ರಸಕ್ತ ಅಲ್ಲಿಂದ ಕೆಳಭಾಗಕ್ಕೆ ಹಬ್ಬಿದೆ. ಇದರ ಸಂಪೂರ್ಣ ನಿರ್ಮೂಲನೆಗೆ ಏನು ಕ್ರಮ ಎಂಬ ಪ್ರಶ್ನೆ ಜಿಲ್ಲಾಧಿಕಾರಿಗೆ ಎದುರಾಗುವುದರಲ್ಲಿ ಅಚ್ಚರಿಯಿಲ್ಲ.
ಅನಧಿಕೃತ ಹೋಂ ಸ್ಟೇಗಳು :
ಇಲ್ಲಿನ ಪ್ರೇಕ್ಷಣೀಯ ಸ್ಥಳ, ಜಲಪಾತಗಳ ವೀಕ್ಷಣೆಗೆ ಪ್ರವಾಸಿಗರು ಆಗಮಿಸುವ ಕಾರಣ ಅನಧಿಕೃತ ಹೋಂ ಸ್ಟೇ ಗಳು ತಲೆ ಎತ್ತುತ್ತಿವೆ. ಪಂಚಾಯತ್‌ನಿಂದ ಕೇವಲ ಎರಡು ಹೋಂ ಸ್ಟೇಗೆ ಮಾತ್ರ ಅನುಮತಿ ನೀಡಲಾಗಿದ್ದು ಇನ್ನೊಂದು ಅರ್ಜಿ ಪರಿಶೀಲನೆ ಹಂತದಲ್ಲಿದೆ ಎಂದು ತಿಳಿದುಬಂದಿದೆ. ಈ ವಿಚಾರದಲ್ಲಿ ಜಿಲ್ಲಾಧಿಕಾರಿಗಳು ಮಧ್ಯ ಪ್ರವೇಶಿಸಬೇಕಿದೆ.
- ಕಜಕ್ಕೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲಾ ಮಟ್ಟದ ಗ್ರಾಮ ವಾಸ್ತವ್ಯ
- 10 ಗಂಟೆಗೆ ಕಾರ್ಯಕ್ರಮ ಉದ್ಘಾಟನೆ
- ಜಿಲ್ಲಾಧಿಕಾರಿಗಳಿಂದ ವಿವಿಧ ಮಾಸಾಶನ ವಿತರಣೆ
- ಸ್ಥಳೀಯ ಶಾಲೆ, ಅಂಗನವಾಡಿ, ನ್ಯಾಯಬೆಲೆ ಅಂಗಡಿ ಭೇಟಿ
- ಕೃಷಿ, ಆಹಾರ, ಆರೋಗ್ಯ ಇಲಾಖೆಯಿಂದ ಸ್ಟಾಲ್ (ಮಾಹಿತಿ , ಆರೋಗ್ಯ ತಪಾಸಣೆ)
- ಸಾರ್ವಜನಿಕರ ತೊಂದರೆಗಳಿಗೆ ಸ್ಥಳದಲ್ಲಿ ಪರಿಹಾರ