ಚಿಕ್ಕಬಳ್ಳಾಪುರ: ಜಿಲ್ಲೆಯ ಗೌರಿಬಿದನೂರು ತಾಲೂಕಿನ ನಾಮಗೊಂಡ್ಲು ಗ್ರಾಪಂ ವ್ಯಾಪ್ತಿಯಲ್ಲಿ ನಿವೇಶನ ರಹಿತ ಪರಿವಾರಕ್ಕೆ ಶೀಘ್ರದಲ್ಲೇ 8 ಎಕರೆ ಜಮೀನನ್ನು ಮಂಜೂರು ಮಾಡಲಾಗುತ್ತದೆ. ಇದರಿಂದ ಸುಮಾರು 400 ಕುಟುಂಬದವರಿಗೆ ಅನುಕೂಲವಾಗಲಿದೆ ಎಂದು ಜಿಲ್ಲಾಧಿಕಾರಿ ಆರ್.ಲತಾ ಅವರು ತಿಳಿಸಿದರು.
ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದ ಅಂಗವಾಗಿ ಶನಿವಾರ ಗೌರಿಬಿದನೂರು ತಾಲೂಕಿನ ನಾಮಗೊಂಡ್ಲು ಗ್ರಾಪಂ ಗುಂಡ್ಲಹಳ್ಳಿ ಗ್ರಾಮದಲ್ಲಿ ನಡೆದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ನಿವೇಶನ ರಹಿತ ಕುಟುಂಬದವರಿಗಾಗಿ ಜಿಲ್ಲಾಡಳಿತವು ಸುಮಾರು 1100 ಎಕರೆ ಜಮೀನನ್ನು ಈಗಾಗಲೇ ಮಂಜೂರು ಮಾಡಿದ್ದು, 45 ಸಾವಿರ ನಿವೇಶನ ರಹಿತ ಕುಟುಂಬದವರಿಗೆ ನಿವೇಶನ ಹಂಚಿಕೆ ಮಾಡುವ ಕಾರ್ಯವು ಸಹ ಪ್ರಗತಿಯಲ್ಲಿದೆ ಎಂದರು. ಆರೋಗ್ಯ ಇಲಾಖೆಯಿಂದ ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್ ವಿತರಿಸಲಾಗುತ್ತಿದ್ದು, ಪ್ರತಿಯೊ ಬ್ಬರು ಕಾರ್ಡ್ ಮಾಡಿಸಿಕೊಳ್ಳಬೇಕು. ಅತಿವೃಷ್ಟಿ- ಅನಾವೃಷ್ಟಿಯಿಂದ ಬೆಳೆ ನಾಶವಾದಲ್ಲಿ ಪ್ರಧಾನ ಮಂತ್ರಿ ಫಸಲ್ ಭಿಮಾ ಯೋಜನೆಯಿಂದ ಬೆಳೆ ನಷ್ಟ ಪರಿಹಾರ ನೀಡಲಾಗುತ್ತಿದ್ದು, ಎಲ್ಲ ರೈತರೂ ಕೂಡಲೇ ಬೆಳೆವಿಮೆ ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕು ಎಂದರು.
ನಾಮಗೊಂಡ್ಲು ಗ್ರಾಪಂ ವ್ಯಾಪ್ತಿಯ ಗುಂಡ್ಲಹಳ್ಳಿ, ಗುಟ್ಟೆಹಳ್ಳಿ, ಕಡಬೂರು ಗ್ರಾಮಗಳ ಅರ್ಹ ಫಲಾನುಭ ವಿಗಳಿಗೆ ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್, ಪೌತಿಖಾತೆ, ಪಿಂಚಣಿ ಆದೇಶ ಮಂಜೂರಾತಿ ಪತ್ರಗಳು ಸೇರಿದಂತೆ ವಿವಿಧ ಯೋಜನೆಯಡಿ ಫಲಾನುಭವಿ ಗಳಿಗೆ ಮಂಜೂರಾತಿ ಮತ್ತು ಸವಲತ್ತು ಆದೇಶ ಪತ್ರಗಳನ್ನು ವಿತರಿಸಿದರು.
ತದ ನಂತರ ನಾಮಗೊಂಡ್ಲು ಗ್ರಾಪಂ ವ್ಯಾಪ್ತಿಯಲ್ಲಿ ಘನ ತ್ಯಾಜ್ಯ ಸಂಗ್ರಹಣಾ ವಾಹನದ ಚಾಲಕಿಯಾದ ಎಚ್.ರೂಪಾ ಅವರನ್ನು ಭೇಟಿ ಮಾಡಿ ಜಿಲ್ಲಾಧಿಕಾರಿ ಅಭಿನಂದಿಸಿದರು. ಗ್ರಾಮಸ್ಥರು ಡ್ರೈನೇಜ್ ಸಮಸ್ಯೆ, ಗ್ರಾಮದ ಸ್ಮಶಾನ ಒತ್ತುವರಿ ಬಗ್ಗೆ, ನೀರಿನ ಟ್ಯಾಂಕ್ ಶಿಥಿಲಾವ್ಯವಸ್ಥೆಯನ್ನು ನಿವಾರಿಸಲು ಜಿಲ್ಲಾಧಿಕಾರಿಗೆ ಮನವಿ ಮಾಡಿದರು.
ಅಧಿಕಾರಿಗಳಿಗೆ ಅಗತ್ಯ ಕ್ರಮಕ್ಕೆ ಸೂಚನೆ ನೀಡಿದರು. ಗೌರಿಬಿದನೂರು ತಹಶೀಲ್ದಾರ್ ಶ್ರೀನಿವಾಸ್, ತಾಪಂ ಇಒ ಹರೀಶ್, ಗ್ರಾಪಂ ಅಧ್ಯಕ್ಷರಾದ ನವೀನ್ ಕುಮಾರ್, ಸ್ಥಳೀಯ ಜನಪ್ರತಿನಿಧಿಗಳು, ಗ್ರಾಪಂ ಸದಸ್ಯರಿದ್ದರು.