Advertisement

ಬ್ರಿಮ್ಸ್‌ ಕಟ್ಟಡ ವೀಕ್ಷಿಸಿದ ಡಿಸಿ

01:07 PM Nov 30, 2021 | Team Udayavani |

ಬೀದರ: ಕಟ್ಟಡದ ದುರಸ್ತಿ ಪ್ರಕ್ರಿಯೆ ಪೂರ್ಣವಾಗದೇ ಯಥಾಸ್ಥಿತಿ ಮುಂದುವರಿದಿರುವುದು ಗಮನಕ್ಕೆ ಬಂದ ಹಿನ್ನೆಲೆ ಜಿಲ್ಲಾಧಿಕಾರಿ ರಾಮಚಂದ್ರನ್‌ ಆರ್‌. ಸೋಮವಾರ ಬ್ರಿಮ್ಸ್‌ ಬೋಧಕ ಆಸ್ಪತ್ರೆಗೆ ಭೇಟಿ ನೀಡಿದರು.

Advertisement

ಆಯಾ ಕಡೆಗಳಲ್ಲಿನ ಕಟ್ಟಡದ ದುಸ್ಥಿತಿ ವೀಕ್ಷಿಸಿ ಸೂಕ್ತ ವಿವರಣೆ ನೀಡದ ಸ್ಥಳದಲ್ಲಿದ್ದ ಕೆಲವು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಬ್ರಿಮ್ಸ್‌ ಆಸ್ಪತ್ರೆಗೆ ಆಗಮಿಸುತ್ತಲೇ ಕಟ್ಟಡದ 6ನೇ ಅಂತಸ್ತಿಗೆ ತೆರಳಿ ಅಲ್ಲಿ ಹಾನಿಗೊಳಗಾದ ಸೋಲಾರ್‌ ವಾಟರ್‌ ಹೀಟರ್‌ ನೋಡಿದರು. ಹೀಟ್‌ ಕಂಡಕ್ಟರ್‌ ಇತ್ಯಾದಿ ವಸ್ತುಗಳು ಕಳುವಾಗಿದ್ದಕ್ಕೆ ಪೊಲೀಸರಲ್ಲಿ ದೂರು ದಾಖಲಾಗಿದೆ ಎಂದು ಅಧಿಕಾರಿಗಳು ಪ್ರತಿಕ್ರಿಯಿಸಿದರು.

ವಸ್ತುಗಳು ಕಳುವಾಗಿಲ್ಲ ಎಂಬುದು ಪರಿಶೀಲನೆ ವೇಳೆಯಲ್ಲಿ ತಿಳಿದು ಬಂದಲ್ಲಿ ಕಟ್ಟಡದ ನಾಗಾರ್ಜುನ ಕನ್ರಸ್ಟ್ರಕ್ಷನ್‌ ಕಂಪನಿ (ಎನ್‌ಸಿಸಿ)ಯ ಅಧಿಕಾರಿಗಳನ್ನೇ ಹೊಣೆಯಾಗಿಸಲಾಗುವುದು ಎಂದು ಡಿಸಿ ಎಚ್ಚರಿಸಿದರು.

ಕಟ್ಟಡದ ಕಾರಿಡಾರನಲ್ಲಿ ಎರಡೂ ಬದಿಗೆ ಯುಪಿವಿಸಿ ಸ್ಲೈಡಿಂಗ್‌ ಕಿಟಕಿ ಅಳವಡಿಸಲು ಎನ್‌ಸಿಸಿ ಪ್ರತಿನಿಧಿಗಳಿಗೆ ಹಲವಾರು ಬಾರಿ ತಿಳಿಸಿದಾಗ್ಯೂ ಸಕಾರಾತ್ಮಕ ಸ್ಪಂದನೆ ಸಿಗುತ್ತಿಲ್ಲವೆಂದು ಅಧಿಕಾರಿಗಳು ಡಿಸಿ ಗಮನಕ್ಕೆ ತಂದರು.

ನೀರು ಸೋರುವಿಕೆಗೆ ಕಾರಣ ಏನೆಂಬುದನ್ನು ತ್ವರಿತವಾಗಿ ಪತ್ತೆ ಹಚ್ಚಿ ಕಾಲಮಿತಿಯೊಳಗೆ ದುರಸ್ತಿ ಆಗುವಂತೆ ನೋಡಿಕೊಳ್ಳಬೇಕು ಎಂದು ಪಿಡಬ್ಲೂಡಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

Advertisement

ಲಿಫ್ಟ್‌ ಸಂಖ್ಯೆ.3 ಮತ್ತು 4ರ ಮಷೀನ್‌ ರೂಂ ಮತ್ತು ಹೆಡ್‌ ರೂಂ ಗೂ ತೆರಳಿ ಜಿಲ್ಲಾಧಿಕಾರಿ ಪರಿಶೀಲಿಸಿದರು. ನಿರಂತರ ಶೌಚಾಲಯ ನಿರ್ವಹಣೆ ಇಲ್ಲದ್ದರಿಂದ ಆಸ್ಪತ್ರೆಯಲ್ಲಿ ಸ್ವತ್ಛತೆ ಹದಗೆಟ್ಟಿದೆ ಎಂದು ಇದೆ ವೇಳೆ ಬ್ರಿಮ್ಸ್‌ ನಿರ್ದೇಶಕ ಚಂದ್ರಕಾಂತ ಚಿಲ್ಲರಗಿ ಮತ್ತು ವೈದ್ಯಕೀಯ ಅಧೀಕ್ಷಕ ಶಿವಕುಮಾರ ಶೆಟಕಾರ ಜಿಲ್ಲಾಧಿ ಕಾರಿಗೆ ಮಾಹಿತಿ ನೀಡಿದರು.

ನೆಲ ಮಹಡಿಗೆ ತೆರಳಿ ಕಲುಷಿತ ನೀರು ನಿಂತಿರುವುದನ್ನು ನೋಡಿ ಅಸಮಾಧಾನ ವ್ಯಕ್ತಪಡಿಸಿದರು. ಸೋರುತ್ತಿರುವ ಪೈಪ್‌ಗ್ಳ ಬೆಂಡ್‌ ಕ್ಯಾಂಪ್‌ ಜೋಡಿಸಿ ಹಾಗೂ ಪೈಪ್‌ನಲ್ಲಿ ಸಿಲುಕಿದ ಕಸ-ಕಡ್ಡಿ, ಬಟ್ಟೆ ಮೊದಲಾದ ತ್ಯಾಜ್ಯ ತೆಗೆದು ನೀರು ಸರಾಗವಾಗಿ ಮ್ಯಾನ್‌ ಹೋಲ್‌ಗೆ ಹೋಗುವಂತೆ ಮಾಡಲು ಮತ್ತು ಶೌಚಾಲಯ ನಿರ್ವಹಣೆ ಸರಿಯಾಗಿ ಮಾಡಲು ಕ್ರಮ ವಹಿಸುವಂತೆ ಸಂಬಂಧಿತರಿಗೆ ನಿರ್ದೇಶನ ನೀಡಿದರು.

ಈ ವೇಳೆ ಡಿಯುಡಿಸಿ ಪಿಡಿ ಮೋತಿಲಾಲ್‌ ಲಮಾಣಿ, ಲೋಕೋಪಯೋಗಿ ಇಲಾಖೆ ಇಇ ಲಿಂಗರಾಜ್‌, ಬ್ರಿಮ್ಸ್‌ ವೈದ್ಯಾಧಿಕಾರಿ ಡಾ| ಮಹೇಶ ತೊಂಡಾರೆ, ಸಹಾಯಕ ಅಭಿಯಂತ ಕುಪ್ಪಣ, ಸತೀಶ ವಾಲೆ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next