ಹೈದರಾಬಾದ್: ಆರಂಭಕಾರ ಅಭಿಷೇಕ್ ಶರ್ಮ ಮತ್ತು ವಿಕೆಟ್ ಕೀಪರ್ ಹೆನ್ರಿಚ್ ಕ್ಲಾಸೆನ್ ಅವರ ಅಮೋಘ ಬ್ಯಾಟಿಂಗ್ ಸಹಾಯದಿಂದ ಡೆಲ್ಲಿ ಕ್ಯಾಪಿಟಲ್ಸ್ ಎದುರಿನ ಶನಿವಾರದ ಐಪಿಎಲ್ ಪಂದ್ಯದಲ್ಲಿ ಸನ್‌ರೈಸರ್ ಹೈದರಾಬಾದ್ 6 ವಿಕೆಟಿಗೆ 197 ರನ್ ಗಳಿಸಿದೆ.
ಒಂದು ಹಂತದಲ್ಲಿ ಹೈದರಾಬಾದ್ ನೂರೈವತ್ತರ ಆಸುಪಾಸಿನಲ್ಲಿ ನಿಲ್ಲುವ ಸೂಚನೆ ಇತ್ತು. ತಂಡ ಆರಂಭಿಕ ಕುಸಿತಕ್ಕೆ ಸಿಲುಕಿದಾಗ ಅಭಿಷೇಕ್ ಶರ್ಮ 12ನೇ ಓವರ್ ತನಕ ನಿಂತು ತಂಡವನ್ನು ಆಧರಿಸಿದರು. ಅಭಿಷೇಕ್ ಗಳಿಕೆ 67 ರನ್. 36 ಎಸೆತ ನಿಭಾಯಿಸಿದ ಅವರು 12 ಬೌಂಡರಿ, ಒಂದು ಸಿಕ್ಸರ್ ಬಾರಿಸಿದರು.
ಅಭಿಷೇಕ್ ನಿರ್ಗಮನದ ಬಳಿಕ ಇನ್ನಿಂಗ್ಸ್ ಬೆಳೆಸಿ ತಂಡದ ಮೊತ್ತವನ್ನು ಇನ್ನೂರರ ಗಡಿ ಸಮೀಪ ತಂದು ನಿಲ್ಲಿಸಿದ ಹೆಗ್ಗಳಿಕೆ ಕ್ಲಾಸೆನ್ ಮತ್ತು ಅಬ್ದುಲ್ ಸಮದ್ ಅವರಿಗೆ ಸಲ್ಲುತ್ತದೆ. ಕ್ಲಾಸೆನ್ ಕೊಡುಗೆ ಅಜೇಯ 53 ರನ್. 27 ಎಸೆತ ಎದುರಿಸಿದ ಕ್ಲಾಸೆನ್ 4 ಸಿಕ್ಸರ್ ಜತೆಗೆ 2 ಬೌಂಡರಿ ಬಾರಿಸಿದರು. ಅಬ್ದುಲ್ ಸಮದ್ 21 ಎಸೆತ ನಿಭಾಯಿಸಿ 28 ರನ್ ಮಾಡಿದರು (1 ಬೌಂಡರಿ, 2 ಸಿಕ್ಸರ್). ಕೊನೆಯಲ್ಲಿ ಅಖೀಲ್ ಹುಸೇನ್ ಅವರಿಂದ ಅಜೇಯ 16 ರನ್ ಸಂದಾಯವಾಯಿತು.
ಮಾಯಾಂಕ್ ಅಗರ್ವಾಲ್ (5), ರಾಹುಲ್ ತ್ರಿಪಾಠಿ (10), ನಾಯಕ ಐಡನ್ ಮಾರ್ಕ್‌ರಮ್ (8) ಅವರನ್ನು ಬೇಗನೇ ಕಳೆದುಕೊಂಡ ಹೈದರಾಬಾದ್ ತೀವ್ರ ಒತ್ತಡಕ್ಕೆ ಸಿಲುಕಿತ್ತು. ಆರಂಭಕಾರ ಹ್ಯಾರಿ ಬ್ರೂಕ್ ಅವರನ್ನು 5ನೇ ಕ್ರಮಾಂಕದಲ್ಲಿ ಆಡಲಿಳಿಸಿದ ಪ್ರಯೋಗ ಕ್ಲಿಕ್ ಆಗಲಿಲ್ಲ. ಅವರು ಸೊನ್ನೆ ಸುತ್ತಿ ವಾಪಸಾದರು.
ಡೆಲ್ಲಿ ಪರ ಮಿಚೆಲ್ ಮಾರ್ಷ್ ಘಾತಕ ಬೌಲಿಂಗ್ ದಾಳಿಯೊಂದನ್ನು ಸಂಘಟಿಸಿದರು. ಮಾರ್ಷ್ ಸಾಧನೆ 27ಕ್ಕೆ 4 ವಿಕೆಟ್. ಒಂದು ಓವರ್ ಮೇಡನ್ ಮಾಡುವ ಮೂಲವೂ ಮಾರ್ಷ್ ಗಮನ ಸೆಳೆದರು.