ಚಿಕ್ಕಬಳ್ಳಾಪುರ: ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಅನಿರುದ್ಧ್ ಪಿ. ಶ್ರವಣ್‌ರನ್ನು ಜಿಲ್ಲೆ ಯಿಂದ ವರ್ಗಾವಣೆ ಮಾಡಿರುವ ಸರ್ಕಾರದ ಕ್ರಮಕ್ಕೆ ಜಿಲ್ಲೆಯ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು , ಡೀಸಿ ಅನಿರುದ್ಧ್ರನ್ನು ಜಿಲ್ಲೆಯಲ್ಲಿ ಮುಂದುವರಿಸುವಂತೆ ಆಗ್ರಹಿಸಿ ಜಿಲ್ಲೆಯ ವಿವಿಧ ರೈತಪರ ಹಾಗೂ ಕನ್ನಡಪರ ಸಂಘಟನೆಗಳು ಶನಿವಾರ ರಾಷ್ಟ್ರೀಯ ಹೆದ್ದಾರಿ ಬಂದ್‌ಗೆ ನಡೆಸಲು ಮುಂದಾಗಿವೆ.
ಜಿಲ್ಲೆಗೆ ಆಗಮಿಸಿ ವರ್ಷ ಮುಗಿಯುವುದರೊಳಗೆ ಜಿಲ್ಲಾಧಿಕಾರಿಯನ್ನು ವರ್ಗಾ ವಣೆ ಮಾಡಿರುವುದು ಸರಿಯಲ್ಲ. ಅವರನ್ನು ಜಿಲ್ಲೆಯಲ್ಲೇ ಮುಂದುವರಿಸಬೇಕೆಂದು ಹಾಗೂ ಅದೇ ರೀತಿ ಜಿಪಂ ಸಿಇಒರ ವರ್ಗಾವಣೆಯನ್ನು ಸಹ ರದ್ದುಗೊಳಿಸುವಂತೆ ಆಗ್ರಹಿಸಿ ರೈತ ಸಂಘಟನೆಗಳು ಚಿಕ್ಕಬಳ್ಳಾಪುರ ಮೂಲಕ ಹಾದು ಹೋಗುವ ಬೆಂಗಳೂರು-ಹೈದ್ರಾಬಾದ್ ನಡುವಿನ ರಾಷ್ಟ್ರೀಯ ಹೆದ್ದಾರಿ-7 ನ್ನು ಬಂದ್ ಮಾಡಲು ನಿರ್ಧರಿಸಿದ್ದಾರೆ.
ಬೆಳಗ್ಗೆ 11ರಿಂದ ಬಂದ್: ಹೆದ್ದಾರಿ ಬಂದ್‌ಗೆ ಜಿಲ್ಲೆಯ ರೇಷ್ಮೆ ಕೃಷಿ ಹಿತರಕ್ಷಣಾ ವೇದಿಕೆ, ಕೋಡಿಹಳ್ಳಿ ಚಂದ್ರಶೇಖರ್ ಬಣದ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಕನ್ನಡಪರ ಸಂಘಟನೆಗಳ ಒಕ್ಕೂಟ, ರಾಜ್ಯ ರೈತ ಸಂಘ ಸೇರಿದಂತೆ ಅನೇಕ ಪ್ರಗತಿಪರ ಸಂಘಟನೆಗಳು ಹೆದ್ದಾರಿ ಬಂದ್‌ನಲ್ಲಿ ಪಾಲ್ಗೊಳ್ಳಲಿವೆ. ಶನಿವಾರ ಬೆಳಗ್ಗೆ 11ರಿಂದಹೆದ್ದಾರಿ ಬಂದ್‌ಗೊಳಿಸಿ ಪ್ರತಿಭಟನೆ ನಡೆಸುವುದಾಗಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಭೈರೇಗೌಡ ಶುಕ್ರವಾರ ಉದಯವಾಣಿಗೆ ತಿಳಿಸಿದರು.
2 ವರ್ಷ ಇರಬೇಕಿತ್ತು: ಅನಿರುದ್ಧ್ ಪಿ.ಶ್ರವಣ್, ಜಿಲ್ಲೆಗೆ ಜಿಲ್ಲಾಧಿಕಾರಿಯಾಗಿ ಬಂದಾಗಿನಿಂದಲೂ ರೈತರ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸುತ್ತಿದ್ದಾರೆ. ಬರದಿಂದ ಕೂಡಿರುವ ಜಿಲ್ಲೆಯಲ್ಲಿ ರೈತಾಪಿ ಜನಕ್ಕೆ ನರೇಗಾ ಯೋಜನೆ, ಕಲ್ಯಾಣಿಗಳ ಪುನಶ್ಚೇತನ, ಕಂದಾಯ ಇಲಾಖೆಯಿಂದ ರೈತರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಿ ಕೆಲಸ ಮಾಡುತ್ತಿದ್ದಾರೆ. ಜನರ ಬೇಡಿಕೆಗಳಿಗೆ ತಾವೇ ಮುಂದೆ ನಿಂತು ಕೆಲಸ ಮಾಡುತ್ತಿರುವ ಜಿಲ್ಲಾಧಿಕಾರಿಗಳನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿರುವುದು ಸರಿಯಲ್ಲ.
ಕನಿಷ್ಠ 2 ವರ್ಷವಾದರೂ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸಲು ಅವಕಾಶ ಕೊಡಬೇಕಿತ್ತು. ಜಿಲ್ಲೆಯಲ್ಲಿ ಬರಗಾಲ ಆವರಿಸಿದ್ದು, ಯಾವುದೇ ಜಿಲ್ಲಾಧಿಕಾರಿ ಸ್ಪಂದಿಸದಷ್ಟು ಅನಿರುದ್ಧ್ ಶ್ರವಣ್ ರವರು ಜಿಲ್ಲೆಯ ಬಗ್ಗ ಆಸಕ್ತಿ ವಹಿಸಿ ಅಂತರ್ಜಲ ವೃದ್ಧಿಗೆ ಪೂರಕವಾದ ಯೋಜನೆ, ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ ಎಂದರು. ಕಲ್ಯಾಣಿಗಳ ಪುನಶ್ಚೇತನ ಸೇರಿದಂತೆ ಮಳೆ ಕೊಯ್ಲು ಪದ್ಧತಿ ಅನುಷ್ಠಾನದ ಬಗ್ಗೆ ಸಾಕಷ್ಟು ಸಿದ್ಧತೆ ನಡೆಸಿದ್ದರು. ಆದರೆ ಅವರನ್ನು ರಾಜಕೀಯ ಒತ್ತಡಗಳಿಗೆ ಮಣಿದು ಸರ್ಕಾರ ಜಿಲ್ಲೆಯಿಂದ ವರ್ಗಾವಣೆ ಮಾಡಿರುವುದು ಸರಿಯಲ್ಲ ಎಂದು ಜಿಲ್ಲಾ ರೇಷ್ಮೆ ಕೃಷಿ ಹಿತರಕ್ಷಣಾ ವೇದಿಕೆ ಜಿಲ್ಲಾ ಸಂಚಾಲಕ ಯಲುವಹಳ್ಳಿ ಸೊಣ್ಣೇಗೌಡ ತಿಳಿಸಿದರು.
ಬಿಗಿ ಪೊಲೀಸ್ ಭದ್ರತೆ: ಅನಿರುದ್ಧ್ ಶ್ರವಣ್ ವರ್ಗಾವಣೆ ಖಂಡಿಸಿ ವಿವಿಧ ರೈತಪರ , ಕನ್ನಡಪರ ಸಂಘಟನೆಗಳು ರಾಷ್ಟ್ರೀಯ ಹೆದ್ದಾರಿ ಬಂದ್ ನಡೆಸಲು ಮುಂದಾಗಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಪೊಲೀಸ್ ಇಲಾಖೆ ನಗರದ ಹೊರ ವಲಯದ ಚದಲುಪುರ ಕ್ರಾಸ್‌ನಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ.