ಕೋಟ: ಜಿಲ್ಲೆಯ ಎಲ್ಲ ಟೋಲ್ ಪ್ಲಾಜಾಗಳಲ್ಲಿ ಸ್ಥಳೀಯರಿಗೆ ನೀಡಲಾಗುತ್ತಿರುವ ಶುಲ್ಕ ವಿನಾಯಿತಿಯನ್ನು ಹಿಂದಿನಂತೆ ಮುಂದು ವರಿಸಬೇಕು ಎಂದು ಜಿಲ್ಲಾಧಿಕಾರಿ ಡಾ| ವಿದ್ಯಾ ಕುಮಾರಿ ಅವರು ಗುರುವಾರ ಡಿ.ಸಿ.ಕಚೇರಿಯಲ್ಲಿ ಜರಗಿದ ರಾಷ್ಟ್ರೀಯ ಹೆದ್ದಾರಿ ಯೋಜನಾಧಿ ಕಾರಿಗಳು, ಟೋಲ್ ನಿರ್ವಹಣೆ ಉಸ್ತುವಾರಿ ಕಂಪೆನಿ ಪ್ರಮುಖರು ಹಾಗೂ ಸ್ಥಳೀಯ ಹೋರಾಟಗಾರರ ಜಂಟಿ ಸಭೆಯಲ್ಲಿ ಸೂಚನೆ ನೀಡಿದರು.
ಟೋಲ್ ನಿರ್ವಹಣೆಯ ಹೊಣೆ ಯನ್ನು ನವಯುಗದಿಂದ ಹೈವೇ ಕನ್ಸ್‌ಸ್ಟ್ರಕನ್ ಕಂಪೆನಿ ವಹಿಸಿಕೊಂಡಾಗ ಸಾಸ್ತಾನ ಸಹಿತ ಜಿಲ್ಲೆಯ ಟೋಲ್ ಪ್ಲಾಜಾಗಳಲ್ಲಿ ಸ್ಥಳೀಯರಿಂದಲೂ ಟೋಲ್ ಸಂಗ್ರಹಕ್ಕೆ ಮುಂದಾಗಿತ್ತು. ಈ ಬಗ್ಗೆ ವಿರೋಧ ವ್ಯಕ್ತವಾಗಿ ಸಾಸ್ತಾನದಲ್ಲಿ ಪ್ರತಿಭಟನೆಯೂ ನಡೆದಿತ್ತು. ಆಗ ಜಿಲ್ಲಾಧಿಕಾರಿಗಳು ಮಧ್ಯ ಪ್ರವೇಶಿಸಿ ಈ ಬಗ್ಗೆ ಸಭೆ ನಡೆಸಿ ಸೂಕ್ತ ಮಾರ್ಗದರ್ಶನ ನೀಡುವ ಭರವಸೆ ನೀಡಿದ್ದರು. ಅದರಂತೆ ಗುರುವಾರ ಎಲ್ಲ ಪ್ರಮುಖರೊಂದಿಗೆ ಸೇರಿ ಜಂಟಿ ಸಭೆ ನಡೆಸಲಾಯಿತು.
ಸಭೆಯಲ್ಲಿ ಹೋರಾಟ ಸಮಿತಿಯ ಪ್ರಮುಖರು ತಮ್ಮ ವ್ಯಾಪ್ತಿಯ ಸರ್ವಿಸ್ ರಸ್ತೆ, ಚರಂಡಿ, ಬೀದಿ ದೀಪ ಇತ್ಯಾದಿ ಸಮಸ್ಯೆಗಳ ಬಗ್ಗೆ ಗಮನ ಸೆಳೆದಿದ್ದಾರೆ. ಆಗ ಹೆದ್ದಾರಿ ಇಲಾಖೆ ಯೋಜನಾಧಿಕಾರಿಗಳು, ಸ್ಥಳೀಯರಿಗೆ ಶುಲ್ಕ ರಿಯಾಯತಿ ಪಾಸ್ ನೀಡುವುದು ಮತ್ತು ವಾಣಿಜ್ಯ ವಾಹನಗಳು ಕಡ್ಡಾಯವಾಗಿ ಟೋಲ್ ಪಾವತಿಸಬೇಕು ಎಂದು ಬೇಡಿಕೆಯನ್ನು ಮುಂದಿರಿಸಿದರು. ಆದರೆ ಹೋರಾಟಗಾರರು ಈ ಬೇಡಿಕೆಯನ್ನು ತಿರಸ್ಕರಿಸಿದ್ದಾರೆ.
ಎಲ್ಲ ಟೋಲ್‌ಗಳಲ್ಲೂ ಈ ಹಿಂದಿನಂತೆ ವಿನಾಯಿತಿ ಮುಂದುವರಿಸಿ ಯಥಾಸ್ಥಿತಿ ಕಾಯ್ದುಕೊಳ್ಳಬೇಕೆಂದು ಸೂಚನೆ ನೀಡಲಾಗಿದೆ. ಜತೆಗೆ ಬಾಕಿ ಉಳಿದಿರುವ ಕಾಮಗಾರಿಗಳನ್ನು ಶೀಘ್ರವಾಗಿ ಮುಗಿಸುವಂತೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ| ವಿದ್ಯಾ ಕುಮಾರಿ ಪತ್ರಿಕೆಗೆ ತಿಳಿಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ| ಅರುಣ್ ಕುಮಾರ್, ಅಪರ ಜಿಲ್ಲಾಧಿಕಾರಿ ಮಮತಾದೇವಿ, ರಾಷ್ಟ್ರೀಯ ಹೆದ್ದಾರಿ ಯೋಜನಾಧಿಕಾರಿ ಮಹಮ್ಮದ್ ಜಾವಿದ್, ಸಾಸ್ತಾನ ಹೆದ್ದಾರಿ ಜಾಗೃತಿ ಸಮಿತಿಯ ಪ್ರಮುಖರಾದ ಶ್ಯಾಮ್ ಸುಂದರ್ ನಾೖರಿ, ಪ್ರತಾಪ್ ಶೆಟ್ಟಿ, ಅಲ್ವಿನ್ ಅಂದ್ರಾದೆ, ನಾಗರಾಜ್ ಗಾಣಿಗ, ಅಚ್ಯುತ ಪೂಜಾರಿ, ಸಂದೀಪ್ ಕೋಡಿ, ಮಹಾಬಲ ಪೂಜಾರಿ ವಡ್ಡರ್ಸೆ, ಪೊಲೀಸ್ ಇಲಾಖೆಯ ಪ್ರಮುಖರು ಹಾಗೂ ಜಿಲ್ಲೆಯ ವಿವಿಧ ಟೋಲ್‌ಗಳ ಹೋರಾಟ ಸಮಿತಿ ಪ್ರಮುಖರು ಸಭೆಯಲ್ಲಿ ಉಪಸ್ಥಿತರಿದ್ದರು.