ಚಾಮರಾಜನಗರ: ಜಿಲ್ಲೆಯಲ್ಲಿ ಪೂರ್ವ ಮುಂಗಾರು ಆರಂಭಗೊಂಡಿರುವ ಹಿನ್ನೆಲೆಯಲ್ಲಿ ಕೃಷಿ, ತೋಟಗಾರಿಕೆ ಚಟುವಟಿಕೆಗಳಿಗೆ ರೈತರಿಗೆ ತಲುಪಿರುವ ಪೂರಕ ಸೌಲಭ್ಯಗಳು ಹಾಗೂ ಕೈಗೊಂಡಿರುವ ಬಿತ್ತನೆ ಕುರಿತು ಜಿಲ್ಲಾಧಿಕಾರಿ ಡಾ. ಎಂ.ಆರ್.ರವಿ ಜಮೀನುಗಳಿಗೆ ಭೇಟಿ ನೀಡಿದ ವೇಳೆ ನೇಗಿಲು ಹಿಡಿದು ಉಳುಮೆ ಅನುಭವ ಪಡೆದರು.
ಗುಂಡ್ಲುಪೇಟೆ ಭಾಗದ ಹಲವು ಗ್ರಾಮಗಳಿಗೆ ತೆರಳಿದ ಜಿಲ್ಲಾಧಿಕಾರಿ ಹೊಲ, ಗದ್ದೆ, ಜಮೀನುಗಳಿಗೆ ಇಳಿದು ಕೃಷಿ, ತೋಟಗಾರಿಕೆ ಚಟುವಟಿಕೆಗಳನ್ನು ವೀಕ್ಷಿಸಿದರು. ಕಂದೇಗಾಲ, ಶಿಂಡನಪುರದಲ್ಲಿ ಸೂರ್ಯಕಾಂತಿ ಬಿತ್ತನೆ ಮಾಡುವ ರೈತರ ಜೊತೆಯಲ್ಲಿ ಸಾಗಿ ವೀಕ್ಷಿಸಿದರು. ಜಿಲ್ಲಾಧಿಕಾರಿಯವರ ಕುತೂಹಲ ಕಂಡ ರೈತರು ಜಿಲ್ಲಾಧಿಕಾರಿಯವರಿಗೆ ಬಿತ್ತನೆ ಬೀಜ ನೀಡಿ ಹೊಲದಲ್ಲಿ ಹಾಕುವ ವಿಧಾನ ತೋರಿಸಿಕೊಟ್ಟರು. ಹುತ್ತೂರಿನಲ್ಲಿ ಬದನೆಕಾಯಿ, ಕಲ್ಲಂಗಡಿ ಬೆಳೆಯುವ ತೋಟಗಳಿಗೆ ಭೇಟಿ ನೀಡಿ ಬೆಳೆದಿರುವ ಬೆಳೆ, ಮಾರುಕಟ್ಟೆ ಲಭ್ಯತೆ ಬಗ್ಗೆ ವಿವರ ಪಡೆದರು.
ಬಿತ್ತನೆ ಬೀಜ, ರಸಗೊಬ್ಬರ ಸೇರಿದಂತೆ ಕೃಷಿ, ತೋಟಗಾರಿಕೆ ಚಟುವಟಿಕೆಗೆ ಬೇಕಾಗಿರುವ ಪರಿಕರ ಕೊರತೆ ಕಂಡುಬಂದಲ್ಲಿ ಅಧಿಕಾರಿಗಳನ್ನು ಸಂಪರ್ಕಿಸಬೇಕು. ಅಗತ್ಯಕ್ಕೆ ತಕ್ಕಂತೆ ದಾಸ್ತಾನಿಗೆ ಸೂಚಿಸಲಾಗಿದೆ. ಸರ್ಕಾರ ನಿಮ್ಮೊಂದಿಗಿದೆ ಎಂದು ಜಿಲ್ಲಾಧಿಕಾರಿ ಡಾ. ರವಿ ರೈತರಲ್ಲಿ ಆತ್ಮಸ್ಥೈರ್ಯ ತುಂಬಿದರು. ರೈತರು ಬೆಳೆದ ಕೃಷಿ, ತೋಟಗಾರಿಕೆ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ದೊರಕಿಸಿ ಯೋಗ್ಯ ಬೆಲೆ ಸಿಗುವಂತೆ ಮಾಡುವ ನಿಟ್ಟಿನಲ್ಲಿ ಜಿಲ್ಲಾಡಳಿತ ಅಗತ್ಯ ಕ್ರಮ ತೆಗೆದು ಕೊಂಡಿದೆ. ಹೀಗಾಗಿ, ಸೌಲಭ್ಯ, ಅಗತ್ಯಗಳಿಗೆ ಸ್ಪಂದಿಸಲು ಹೊಲ, ಜಮೀನುಗಳಿಗೆ ಭೇಟಿ ನೀಡಲಾಗಿದೆ ಎಂದರು. ತಹಶೀಲ್ದಾರ್ ನಂಜುಂಡಯ್ಯ, ಕೃಷಿ ಉಪನಿರ್ದೇಶ ಮುತ್ತುರಾಜ್, ಸಹಾಯಕ ನಿರ್ದೇಶಕ ವೆಂಕಟೇಶ ಮೂರ್ತಿ, ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇ
ಶಕ ಶಿವಲಿಂಗಪ್ಪ ಇತರರು ಹಾಜರಿದ್ದರು.