Advertisement

ಪ್ರವಾಹ-ವಿಪತ್ತು ಎದುರಿಸಲು ಸನ್ನದ್ಧರಾಗಿ

09:30 PM Jun 02, 2021 | Team Udayavani |

ಹಾವೇರಿ: ಮುಂಗಾರು ಹಂಗಾಮಿನ ಮಳೆಗಾಲದಲ್ಲಿ ಎದುರಾಗಬಹುದಾದ ಪ್ರವಾಹ ಸೇರಿದಂತೆ ವಿಪತ್ತುಗಳನ್ನು ಎದುರಿಸಲು ತಾಲೂಕುವಾರು ವಿಪತ್ತು ನಿರ್ವಹಣೆ ಯೋಜನೆಗಳೊಂದಿಗೆ ಪರಿಸ್ಥಿತಿ ಎದುರಿಸಲು ಸನ್ನದ್ಧರಾಗಿರಬೇಕೆಂದು ತಹಶೀಲ್ದಾರ್‌ ಗಳಿಗೆ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಸೂಚನೆ ನೀಡಿದರು.

Advertisement

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಿಂದ ಮಂಗಳವಾರ ವಿಪತ್ತು ನಿರ್ವಹಣೆ ಸಿದ್ಧತೆ ಕುರಿತು ತಾಲೂಕು ತಹಶೀಲ್ದಾರ್‌ಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಮಾತನಾಡಿದರು. ತಾಲೂಕುವಾರು ಬುಧವಾರದ ಒಳಗಾಗಿ ವಿಪತ್ತು ನಿರ್ವಹಣೆಯ ಕಂಟ್ರೋಲ್‌ ರೂಂಗಳನ್ನು ಆರಂಭಿಸಬೇಕು. ಸಾರ್ವಜನಿಕ ಸಂಪರ್ಕಕ್ಕಾಗಿ ಹೆಲ್ಪಲೈನ್‌ ನಂಬರ್‌ಗಳನ್ನು ಮಾಹಿತಿಗಾಗಿ ಮಾಧ್ಯಮಗಳಲ್ಲಿ ಪ್ರಕಟಿಸುವಂತೆ ನಿರ್ದೇಶನ ನೀಡಿದರು.

ಜಿಲ್ಲೆಯಲ್ಲಿ 141 ಗ್ರಾಮಗಳು ತಗ್ಗು ಪ್ರದೇಶಗಳಲ್ಲಿದ್ದು, ಪ್ರವಾಹದಿಂದ ಮುಳುಗಡೆ ಸಮಸ್ಯೆ ಎದುರಿಸಲಿವೆ ಎಂಬ ಮಾಹಿತಿ ಸಂಗ್ರಹಿಸಲಾಗಿದೆ. ಮತ್ತೂಮ್ಮೆ ಪರಿಶೀಲನೆ ನಡೆಸಿ ವಿಪತ್ತಿಗೆ ತುತ್ತಾಗಬಹುದಾದ ಗ್ರಾಮಗಳ ಪಟ್ಟಿಯನ್ನು ತಾಲೂಕುವಾರು ಸಂಗ್ರಹಿಸಿ ಮಾಹಿತಿ ಇಟ್ಟುಕೊಳ್ಳಬೇಕು. ಅತೀ ಮಳೆ, ಪ್ರವಾಹದಂತಹ ಸಂದರ್ಭದಲ್ಲಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿ ಜನ ಮತ್ತು ಜಾನುವಾರುಗಳ ರಕ್ಷಣೆಗೆ ವ್ಯವಸ್ಥಿತ ಯೋಜನೆಗಳನ್ನು ರೂಪಿಸಬೇಕು ಎಂದು ತಿಳಿಸಿದರು.

ಸಂಕಷ್ಟಕ್ಕೆ ತುತ್ತಾಗುವ ಮುಂಚಿತವಾಗಿಯೇ ಪರ್ಯಾಯವಾಗಿ ಕಾಳಜಿ ಕೇಂದ್ರಗಳನ್ನು ಗುರುತಿಸಿ ಮೂಲಭೂತ ಸೌಕರ್ಯಗಳೊಂದಿಗೆ ಸಿದ್ಧ ಮಾಡಿಕೊಳ್ಳಬೇಕು. ನೋಡೆಲ್‌ ಅಧಿ ಕಾರಿಗಳನ್ನು ನೇಮಿಸಿ ಪ್ರವಾಹ ಇತರ ಸಂಕಷ್ಟಕ್ಕೆ ತುತ್ತಾಗುವ ಮುನ್ನವೇ ಸ್ಥಳಾಂತರಿಸುವ ಕಾರ್ಯ ನಡೆಯಬೇಕು. ಈ ಕುರಿತಂತೆ ಈ ಗ್ರಾಮಗಳ ಜನತೆಗೆ ಮುಂಜಾಗ್ರತೆಯಾಗಿ ಮಾಹಿತಿ ನೀಡಿದರೆ ಸ್ಥಳಾಂತರಗೊಳ್ಳಲು ಮಾನಸಿಕವಾಗಿ ಸಿದ್ಧರಾಗಿರುತ್ತಾರೆ ಎಂದು ಸಲಹೆ ನೀಡಿದರು.

ಜನ-ಜಾನುವಾರುಗಳ ಜೀವಹಾನಿ ಸಂಭವಿಸಿದ 24 ತಾಸಿನಲ್ಲಿ ಎಲ್ಲ ಪ್ರಕ್ರಿಯೆಗಳನ್ನು ಮುಗಿಸಿ ಪರಿಹಾರ ಪಾವತಿಗೆ ತಹಶೀಲ್ದಾರ್‌ ಹಂತದಲ್ಲೇ ಕ್ರಮ ಕೈಗೊಳ್ಳಬೇಕು. ಯಾವುದೇ ಕಾರಣಕ್ಕೂ ವಿಳಂಬವಾಗಬಾರದು. ಬೆಳೆ ಹಾನಿ, ಮನೆ ಹಾನಿಗಳನ್ನು ಈಗಾಗಲೇ ಎನ್‌ಡಿಆರ್‌ಎಫ್‌ ಹಾಗೂ ಎಸ್‌ಡಿಆರ್‌ ಎಫ್‌ ನಿಯಮಾವಳಿಯಂತೆ ಕ್ರಮ ವಹಿಸಬೇಕೆಂದು ಸೂಚನೆ ನೀಡಿದರು. ಶಿಥಿಲಾವ್ಯವಸ್ಥೆಯಲ್ಲಿರುವ ಸರ್ಕಾರಿ ಶಾಲೆ, ಕಾಲೇಜು, ಕಚೇರಿ ಕಟ್ಟಡಗಳು, ಸೇತುವೆಗಳು, ರಸ್ತೆಗಳು, ಕರೆ ದಂಡೆಗಳ ಮಾಹಿತಿ ಸಂಗ್ರಹಿಸಬೇಕು. ಅಪಾಯದ ಸೂಚನೆ ಕಂಡುಬಂದರೆ ತೆರವುಗೊಳಿಸಲು ಕ್ರಮ ವಹಿಸಬೇಕು. ರಸ್ತೆ ಮತ್ತು ಸೇತುವೆ ಶಿಥಿಲಗೊಂಡಿದ್ದರೆ ತಾತ್ಕಾಲಿಕವಾಗಿ ಸಂಚಾರಿ ಮಾರ್ಗ ಬದಲಾಯಿಸಬೇಕು. ಗಾಳಿ, ಮಳೆಗೆ ರಸ್ತೆಯಲ್ಲಿ ಮರ ಬಿದ್ದರೆ ಅರಣ್ಯ ಇಲಾಖೆ ಸಹಯೋಗದೊಂದಿಗೆ ಸ್ಥಳೀಯ ಆಡಳಿತಗಳು ವಿಲೇವಾರಿಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಮಳೆಗಾಲಕ್ಕೂ ಮುನ್ನ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಚರಂಡಿ, ರಾಜಕಾಲುವೆಗಳ ಸ್ವತ್ಛತೆಗೆ ಕ್ರಮ ವಹಿಸಬೇಕು. ಶಿಥಿಲವಾದ ವಿದ್ಯುತ್‌ ಕಂಬ, ಸಡಿಲವಾದ ವಿದ್ಯುತ್‌ ತಂತಿಗಳನ್ನು ದುರಸ್ತಿಗೊಳಿಸಲು, ಬದಲಾಯಿಸುವುದರ ಮೂಲಕ ಅವಘಡಗಳನ್ನು ತಪ್ಪಿಸಲು ಕ್ರಮ ವಹಿಸುವಂತೆ ಸೂಚನೆ ನೀಡಿದರು.

Advertisement

ಮಳೆಗಾಲದಲ್ಲಿ ಕಲುಷಿತ ನೀರಿನಿಂದ ಸಾಂಕ್ರಾಮಿಕ ರೋಗಗಳು ಹರಡುವುದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ನೀರನ್ನು ವೈಜ್ಞಾನಿಕವಾಗಿ ಸ್ವತ್ಛಗೊಳಿಸಿ ಸರಬರಾಜು ಮಾಡಬೇಕು. ನೀರಿನ ಗುಣಮಟ್ಟ ಪರೀಕ್ಷೆ ಮಾಡಬೇಕು. ಶಿಥಿಲಗೊಂಡ ನೀರಿನ ಟ್ಯಾಂಕ್‌ಗಳನ್ನು ತೆರವುಗೊಳಿಸಬೇಕು. ನಗರ ಆಡಳಿತ ಸಂಸ್ಥೆಗಳು ಹಾಗೂ ಗ್ರಾಮೀಣ ಆಡಳಿತ ಸಂಸ್ಥೆಗಳು ಈ ಕುರಿತಂತೆ ಆದ್ಯ ಗಮನ ಹರಿಸಬೇಕು. ಶುದ್ಧ ಕುಡಿಯುವ ನೀರಿನ ಘಟಕ ಸೇರಿದಂತೆ ನೀರು ಸರಬರಾಜು ಘಟಕಗಳಲ್ಲಿ ವಿದ್ಯುತ್‌ ವ್ಯತ್ಯಯ ಉಂಟಾದರೆ ಪರ್ಯಾಯ ವ್ಯವಸ್ಥೆಗಳನ್ನು ಕೈಗೊಳ್ಳಬೇಕೆಂದು ಸಲಹೆ ನೀಡಿದರು.

ಪ್ರವಾಹದಂತಹ ಅವಘಡ ಸಂಭವಿಸಿದ ಸಂದರ್ಭದಲ್ಲಿ ರಕ್ಷಣಾ ಕಾರ್ಯಕ್ಕೆ ಅಗತ್ಯವಾದ ಬೋಟ್‌ಗಳ ವ್ಯವಸ್ಥೆ, ರಕ್ಷಣಾ ಉಪಕರಣಗಳೊಂದಿಗೆ ಸಿದ್ಧವಾಗಿರಬೇಕು. ಈ ಕುರಿತಂತೆ ಎಲ್ಲವನ್ನೂ ಸುಸಜ್ಜಿತಗೊಳಿಸಿಕೊಳ್ಳಲು ಸೂಚನೆ ನೀಡಿದರು.

ಸಭೆಯಲ್ಲಿ ಅಪರ ಜಿಲ್ಲಾಧಿ ಕಾರಿ ಎಸ್‌.ಯೋಗೇಶ್ವರ, ಜಿಲ್ಲಾ ಅರಣ್ಯಾ ಧಿಕಾರಿ ಕ್ರಾಂತಿ, ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾ ಧಿಕಾರಿ ವಿಜಯಕುಮಾರ ಸಂತೋಷ್‌, ಉಪವಿಭಾಗಾಧಿಕಾರಿ ಶಿವಾನಂದ ಉಳ್ಳಾಗಡ್ಡಿ, ಜಂಟಿ ಕೃಷಿ ನಿರ್ದೇಶಕ ಮಂಜುನಾಥ, ತಹಶೀಲ್ದಾರ್‌ ಗಿರೀಶ ಸ್ವಾದಿ, ಜಿಲ್ಲಾ ಯೋಜನಾ ನಿರ್ದೇಶಕ ವಿರಕ್ತಿಮಠ, ಜಿಲ್ಲಾ ವಾರ್ತಾ ಧಿಕಾರಿ ಬಿ.ಆರ್‌.ರಂಗನಾಥ್‌, ಡಿಡಿಪಿಐ ಅಂದಾನೆಪ್ಪ ವಡಗೇರಿ, ಪಶು ಸಂಗೋಪನೆ ಇಲಾಖೆ ಉಪನಿರ್ದೇಶಕ ರಾಜೀವ ಕೂಲೇರ, ಜಿಲ್ಲಾ ಅಗ್ನಿಶಾಮ ಅ ಧಿಕಾರಿ ಸೋಮಶೇಖರ ಅಂಗಡಿ, ಜಿಲ್ಲಾ ಪಂಚಾಯತಿ ಕಾರ್ಯನಿರ್ವಾಹಕ ಎಂಜಿನಿಯರ್‌ ಇತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next