ವಾಮಂಜೂರು: ಆಶ್ರಯ ನಗರದ ಬಳಿ ಕಾರ್ಯಾಚರಿಸುತ್ತಿರುವ ಅಣಬೆ ಫ್ಯಾಕ್ಟರಿಯು ಪ್ರದೇಶದಲ್ಲಿ ವಿಷಕಾರಕ ಮಾಲಿನ್ಯವನ್ನು ಹರಡುತ್ತಿರುವ ವಿರುದ್ಧ ನಡೆಯುತ್ತಿದ್ದ ಪ್ರತಿಭಟನೆಗೆ ಜಯ ದೊರಕಿದೆ.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರವಿಕುಮಾರ್ ಅವರು ತಕ್ಷಣದಿಂದಲೇ ಜಾರಿಗೆ ಬರುವಂತೆ ಅಣಬೆ ಫ್ಯಾಕ್ಟರಿ ಘಟಕವನ್ನು ಮುಚ್ಚಲು ಆದೇಶ ನೀಡಿದ್ದಾರೆ.
ರವಿವಾರ ವಾಮಂಜೂರಿನ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಅವರು ಜನರ ಅಹವಾಲುಗಳನ್ನು ಆಲಿಸಿದರು.
ಶಾಸಕ ಡಾ.ಭರತ್ ಶೆಟ್ಟಿ ವೈ ಅವರು ಸ್ಥಳೀಯ ಜನರಿಗೆ ದುರ್ವಾಸನೆಯಿಂದ ಅನಾರೋಗ್ಯಕರ ವಾತಾವರಣ ನಿರ್ಮಾಣವಾಗಿದ್ದು, ಬದುಕಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಶ್ವಾಸಕೋಶ ನೋವು, ತಲೆನೋವು, ವಾಂತಿ ಸೇರಿದಂತೆ ಹಲವು ಸಮಸ್ಯೆಗಳನ್ನು ಜನರು ಎದುರಿಸುವಂತಾಗಿದೆ. ಜಿಲ್ಲಾಧಿಕಾರಿಯವರು ಘಟಕ ಮುಚ್ಚುವ ಕುರಿತಂತೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಮಾತನಾಡಿ, ಇಲ್ಲಿನ ಪರಿಸ್ಥಿತಿಯನ್ನು ಮನಗಂಡು ಸಾರ್ವಜನಿಕರಿಗೆ ಆಗುತ್ತಿರುವ ಅನಾನುಕೂಲವನ್ನು ಪರಿಗಣಿಸಿ ಘಟಕ ಮುಚ್ಚಲು ಆದೇಶಿಸುವುದಾಗಿ ಘೋಷಿಸಿದರು.
ಜಿಲ್ಲಾಧಿಕಾರಿ ಘೋಷಿಸುತ್ತಿದ್ದಂತೆ ಸ್ಥಳೀಯ ನಿವಾಸಿಗಳು ಸಂಭ್ರಮವನ್ನಾಚರಿಸಿ ಪ್ರತಿಭಟನೆಯಲ್ಲಿ ಭಾಗವಹಿಸಿದ ಶಾಸಕರುಗಳಿಗೆ, ಜನರ ಸಮಸ್ಯೆಗೆ ಪರಿಹಾರ ನೀಡಿದ ಡಿಸಿಯವರಿಗೆ ಕೃತಜ್ಞತೆ ಸಲ್ಲಿಸಿದರು.