ಬಾಗಲಕೋಟೆ: ಗ್ರಾಮೀಣ ಭಾಗದಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳ ತ್ವರಿತ ಪರಿಹಾರಕ್ಕಾಗಿ ರಾಜ್ಯ ಸರ್ಕಾರ, ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆಗೆ ಎಂಬ ವಿನೂತನ ಕಾರ್ಯಕ್ರಮ ಜಾರಿಗೊಳಿಸಿದ್ದು, ಜಿಲ್ಲೆಯ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ|ಕೆ. ರಾಜೇಂದ್ರ, ಫೆ. 20ರಂದು ಜಮಖಂಡಿ ತಾಲೂಕಿನ ಹುಲ್ಯಾಳದಲ್ಲಿ ಇಡೀ ದಿನ ವಾಸ್ತವ್ಯ ಮಾಡಲಿದ್ದಾರೆ.
ಹೌದು, ಈ ಕಾರ್ಯಕ್ರಮದಡಿ ಹಳ್ಳಿಗಳ ಸಮಸ್ಯೆ ಅರಿತು ಅರ್ಜಿ ಪಡೆಯುವ ಜತೆಗೆ ಒಟ್ಟು 25 ಅಂಶಗಳಡಿ ಜನರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ನಿರ್ದೇಶನ ನೀಡಲಾಗಿದೆ. ಜಿಲ್ಲಾಧಿಕಾರಿಗಳ ಜತೆಗೆ ಭೂ ದಾಖಲೆಗಳ ಉಪ ನಿರ್ದೇಶಕರು, ಉಪ ವಿಭಾಗಾಧಿಕಾರಿ ಡಾ| ಸಿದ್ದು ಹುಲ್ಲೊಳ್ಳಿ, ತಹಶೀಲ್ದಾರ್ ಎಸ್.ಬಿ. ಇಂಗಳೆ, ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಾಧಿಕಾರಿಗಳು ಈ ಹಳ್ಳಿ ಕಡೆಗೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಹಳ್ಳಿ ನಡೆಗೆ ರಜತ ಸೂತ್ರಗಳು: ಗ್ರಾಮ ವಾಸ್ತವ್ಯ ಅದ್ಧೂರಿಯಾಗಿ ನಡೆಯಬಾರದು. ಸರಳವಾಗಿ ಕಾರ್ಯಕ್ರಮ ನಡೆಸಿ, ಸರ್ಕಾರದ ಯೋಜನೆಗಳ ಜಾಗೃತಿ ಮೂಡಿಸಬೇಕು. ಅಲ್ಲದೇ ಗ್ರಾಮಸ್ಥರು ಸಲ್ಲಿಸುವ ಎಲ್ಲ ಅರ್ಜಿಗಳನ್ನು ಪಡೆದು, ಸ್ಥಳದಲ್ಲೇ ಪರಿಹರಿಸಲು ಸಾಧ್ಯವಿರುವ ಅರ್ಜಿಗಳನ್ನು ಅಲ್ಲಿಯೇ ವಿಲೇವಾರಿ ಮಾಡಬೇಕು. ಉಳಿದ ಅರ್ಜಿಗಳನ್ನು ಆಯಾ ಇಲಾಖೆಗೆ ನಿರ್ದೇಶನ ನೀಡಬೇಕು. ರೈತರ ಪಹಣಿಯಲ್ಲಿನ ಲೋಪದೋಷ, ಪಹಣಿ ಕಾಲಂ 3 ಮತ್ತು ಅಕಾರ್ ಬಂದ್ ತಾಳೆ ಹೊಂದಿರುವ ಕುರಿತು ಖಚಿತಪಡಿಸಬೇಕು. ಎಲ್ಲ ಪಹಣಿಯಲ್ಲೂ ಕಾಲಂ 3 ಮತ್ತು ಕಾಲಂ 9 ತಾಳೆ ಹೊಂದುವಂತೆ ಆದೇಶ ಹೊರಡಿಸಬೇಕು. ಮದಲ್ಲಿ ಪೌತಿ ಹೊಂದಿದ ಖಾತೆದಾರರ ಹೆಸರನ್ನು ಪಹಣಿಯ ಕಾಲಂ 9ರಿಂದ ತೆಗೆದು, ನೈಜ ವಾರಸುದಾರರ ಸರಿಗೆ ಖಾತಾ ಬದಲಾವಣೆ ಮಾಡಬೇಕು. ಎಲ್ಲಾ ಅರ್ಹ ವ್ಯಕ್ತಿಗಳಿಗೆ ಪಿಂಚಣಿ (ವೃದ್ಧಾಪ್ಯ, ವಿಕಲಚೇತನ, ವಿಧವಾ ಸಹಿತ) ದೊರೆಯುತ್ತಿರುವ ಬಗ್ಗೆ ಖಚಿಪಡಿಸಿಕೊಂಡು, ಬಿಟ್ಟು ಹೋಗಿದ್ದರೆ ಅರ್ಹರಿಗೆ ಸ್ಥಳದಲ್ಲೇ ಪಿಂಚಣಿ ಮಂಜೂರು ಮಾಡಬೇಕು.
ಸ್ಮಶಾನ ಲಭ್ಯತೆ ಕುರಿತು ಪರಿಶೀಲಿಸಬೇಕು. ಸ್ಮಶಾನ ಇಲ್ಲದಿದ್ದರೆ ಸರ್ಕಾರದ ನಿಯಮಾನುಸಾರ ಸ್ಮಶಾನಕ್ಕೆ ವ್ಯವಸ್ಥೆ ಮಾಡಬೇಕು, ಆಶ್ರಯ ಯೋಜನೆಗೆ ಅವಶ್ಯಕತೆ ಇದ್ದಲ್ಲಿ ಲಭ್ಯ ಭೂಮಿ ಕಾಯ್ದಿರಸಲು ಕ್ರಮ ಕೈಗೊಳ್ಳಬೇಕು, ಸರ್ಕಾರಿ ಭೂಮಿ ಒತ್ತುವರಿ ತೆರವುಗೊಳಿಸಬೇಕು, ಆಧಾರ ಕಾರ್ಡ್‌ನ ಅನುಕೂಲತೆ ಕುರಿತು ಅರಿವು ಮೂಡಿಸಬೇಕು, ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಆನ್‌ಲೈನ್ ಮೂಲಕ ನಾಡ ಕಚೇರಿಯಲ್ಲಿ ಅರ್ಜಿ ಸಲ್ಲಿಸುವ ಕುರಿತು ತಿಳವಳಿಕೆ ನೀಡಬೇಕು, ಮತದಾರ ಪಟ್ಟಿ ಪರಿಷ್ಕರಣೆ, ಬರ, ಪ್ರವಾಹ ಇದ್ದಲ್ಲಿ ಪರಿಹಾರ, ಪ್ರವಾಹ ಹಾನಿ ತಡೆಗಟ್ಟಲು ಸಲಹೆ, ಅತಿವೃಷ್ಟಿ, ಅನಾವೃಷ್ಟಿ ಎದುರಿಸಲು ಮುಂಜಾಗೃತೆ, ಹದ್ದುಬಸ್ತು, ಪೋಡಿ, ಪೋಡಿ ಮುಕ್ತಗ್ರಾಮ, ದರಕಾಸ್ತು ಪೋಡಿ, ಕಂದಾಯ ಗ್ರಾಮಗಳ ರಚನೆ, ಎಸ್,ಸಿ, ಎಸ್.ಟಿ, ಬಿಸಿಎಂ ವಸತಿ ನಿಲಯಗಳಿದ್ದಲ್ಲಿ ಭೇಟಿ ನೀಡಿ ಸುಸ್ಥಿತಿ ಕುರಿತು ಪರಿಶೀಲಿಸಬೇಕು, ಶಾಲೆ-ಅಂಗನವಾಡಿಗಳಿಗೆ ಭೇಟಿ ನೀಡಿ, ಆಹಾರ ಮತ್ತು ಕಲಿಕಾ ಕ್ರಮ ಪರಿಶೀಲಿಸಬೇಕು, ಎಲ್ಲ ಅರ್ಹ ಬಡ ಕುಟುಂಬಗಳು ಬಿಪಿಎಲ್ ಕಾರ್ಡ್ ದೊರೆತಿರುವ ಕುರಿತು ಖಾತ್ರಿ ಪಡಿಸಿಕೊಳ್ಳು, ಅನರ್ಹರು ಬಿಪಿಎಲ್ ಕಾರ್ಡ್ ಪಡೆದಿದ್ದರೆ ಅಂಥವರ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನವಿದೆ.
ಗುಡಿಸಲು ಮುಕ್ತಕ್ಕೆ ತಯಾರಿ: ಹಳ್ಳಿ ವಾಸ್ತವ್ಯದ ವೇಳೆ ಪ್ರಮುಖವಾಗಿ ಗುಡಿಸಲು ವಾಸಿಗಳ ಕುರಿತು ಪತ್ತೆ ಮಾಡಬೇಕು. ಯಾವ ಕುಟುಂಬ ಗುಡಿಸಲಿನಲ್ಲಿ ವಾಸವಿದೆಯೋ ಆ ಕುಟುಂಬಕ್ಕೆ ಆಶ್ರಯ ಯೋಜನೆಯಡಿ ಮನೆ ನಿರ್ಮಿಸಿಕೊಳ್ಳಲು ಎಲ್ಲ ರೀತಿಯ ಸಹಕಾರ ನೀಡುವ ಜತೆಗೆ ಸಂಬಂಧಿಸಿದ ಜಿಲ್ಲಾ ಮಟ್ಟದ ಅಧಿಕಾರಿಗೆ ನಿರ್ದೇಶನ ನೀಡಬೇಕು, ಅಧಿಕಾರಿಗಳು ವಾಸ್ತವ್ಯ ಮಾಡಿದ ಗ್ರಾಮವನ್ನು ಗುಡಿಸಲು ಮುಕ್ತ ಮಾಡಲು ಕ್ರಮ ಕೈಗೊಳ್ಳಬೇಕು. ಅಧಿಕಾರಿಗಳ ಗ್ರಾಮ ವಾಸ್ತವ್ಯಕ್ಕೆ ಈ 25 (ರಜತ) ನಿರ್ದೇಶನಗಳು ಸರ್ಕಾರ ನೀಡಿದೆ. ಇದರ ಹೊರತಾಗಿಯೂ ಗ್ರಾಮಸ್ಥರು ಯಾವುದೇ ಸಮಸ್ಯೆಯ ಕುರಿತು ಅಹವಾಲು ಸಲ್ಲಿಸಿದರೂ ಪಡೆದು ಸಂಬಂಧಿಸಿದ ಇಲಾಖೆಗೆ ರವಾನೆ ಮಾಡಬೇಕು ಎಂಬುದು ಸರ್ಕಾರದ ನಿರ್ದೇಶನ.
ಕ್ಯಾಪ್ಟನ್ ನಡೆ ಹುಲ್ಯಾಳ ಕಡೆ: ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಕಂದಾಯ ಸಚಿವ ಆರ್. ಅಶೋಕ ವಿನೂತನ ಕಾರ್ಯಕ್ರಮ ಜಾರಿಗೊಳಿಸಿದ್ದು, ಬಾಗಲಕೋಟೆಯ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ|ಕೆ. ರಾಜೇಂದ್ರ, ಜಮಖಂಡಿ ತಾಲೂಕಿನ ಹುಲ್ಯಾಳ ಗ್ರಾಮ ಆಯ್ಕೆ ಮಾಡಿಕೊಂಡಿದ್ದಾರೆ. ಕಂದಾಯ ಇಲಾಖೆಯ ಅಧಿಕಾರಿಗಳು ಹುಲ್ಯಾಳಕ್ಕೆ ತೆರಳಿ ಬೆಳಗ್ಗೆ 10ರಿಂದ ಸಂಜೆ 5ರ ವರೆಗೆ ವಾಸ್ತವ್ಯ ಮಾಡಲಿದ್ದಾರೆ.
ಸಮಸ್ಯೆ ಹಲವು; ಪರಿಹಾರ ಅಗತ್ಯ: ಕಂದಾಯ ಇಲಾಖೆಗೆ ಸಂಬಂಧಿಸಿದ ವಾಸ್ತವ್ಯ ಇದಾಗಿದ್ದು, ರೈತರಿಗೆ ಫಲಕಾರಿಯಾಗುತ್ತದೆ. ಪಹಣಿ ತಿದ್ದುಪಡಿ, ಖಾತಾ ಬದಲಾವಣೆಯಂತಹ ಅನೇಕ ಸಮಸ್ಯೆಗಳೂ ಹುಲ್ಯಾಳದಲ್ಲಿವೆ. ಇವೆಲ್ಲ ಗ್ರಾಮ ಲೆಕ್ಕಾಧಿಕಾರಿಯಿಂದ ಹಿಡಿದು, ಭೂ ದಾಖಲೆಗಳ ತಾಲೂಕು ಕಚೇರಿಯಲ್ಲೇ ಆಗುವಂತಹದ್ದು. ಅಧಿಕಾರಿಗಳು ಗ್ರಾಮಕ್ಕೆ ಬಂದರೆ, ಇಂತಹ ಸಮಸ್ಯೆ ಹೇಳುವ ಬದಲು, ನಮ್ಮೂರಿಗೆ ರಸ್ತೆ ಇಲ್ಲ, ಕುಡಿಯುವ ನೀರಿನ ವ್ಯವಸ್ಥೆ ಸರಿಯಾಗಿಲ್ಲ, ಸಮುದಾಯ ಭವನ ಇಲ್ಲ, ಶೌಚಾಲಯ ನಿರ್ಮಿಸಿದರೂ ಬಳಕೆಯಾಗುತ್ತಿಲ್ಲ. ಪಂಚಾಯಿತಿಯವರು ಊರಲ್ಲಿ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂಬಿತ್ಯಾದಿ ಸಮಸ್ಯೆ ಹೇಳುತ್ತಾರೆ ಹೊರತು, ಮುಖ್ಯವಾಗಿ ಯಾವ ಕಾರ್ಯಕ್ರಮ, ಅದರ ಲಾಭ ಪಡೆಯುವುದು ಹೇಗೆ ಎಂಬುದರ ಬಗ್ಗೆ ಯೋಚನೆ ಮಾಡುವುದಿಲ್ಲ. ಇದು ಕೇವಲ ಕಂದಾಯ ಇಲಾಖೆಗೆ ಸಂಬಂಧಿಸಿದ ಗ್ರಾಮ ವಾಸ್ತವ್ಯ ಆಗಿದ್ದರಿಂದ ಹುಲ್ಯಾಳದ ಜನರು ಅದಕ್ಕೆ ಸಂಬಂಧಿಸಿದ ಸಮಸ್ಯೆಗಳ ಪರಿಹಾರಕ್ಕೆ ಸದ್ಭಳಕೆ ಮಾಡಿಕೊಳ್ಳಬೇಕು ಎಂಬುದು ಹಲವರ ಅಭಿಪ್ರಾಯ.