Advertisement

ಪಾರದರ್ಶಕ ಸಿಇಟಿ ನಡೆಸಲು ಡಿಸಿ ಪಾಟೀಲ ಕಟ್ಟುನಿಟ್ಟಿನ ಸೂಚನೆ

04:57 PM Jul 25, 2020 | Suhan S |

ವಿಜಯಪುರ: ಜು. 30ರಿಂದ ಆಗಸ್ಟ್‌ 1ರವರೆಗೆ ನಡೆಯಲಿರುವ ಸಾಮಾನ್ಯ ಪ್ರವೇಶ ಪರೀಕ್ಷೆಗಳನ್ನು ಪಾರದರ್ಶಕ ರೀತಿಯಲ್ಲಿ ನಡೆಸಬೇಕು. ಪರೀಕ್ಷೆ ಸಂದರ್ಭದಲ್ಲಿ ಕೋವಿಡ್‌ ಹಿನ್ನೆಲೆ ಅತ್ಯಂತ ಮುಂಜಾಗೃತೆ ವಹಿಸಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ ಸೂಚನೆ ನೀಡಿದ್ದಾರೆ.

Advertisement

ಶುಕ್ರವಾರ ನಗರದ ಸರ್ಕಾರಿ ಬಾಲಕಿಯರ ಪಪೂ ಕಾಲೇಜು ಸಭಾಂಗಣದಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ಜರುಗಿದ ಸಾಮಾನ್ಯ ಪ್ರವೇಶ ಪರೀಕ್ಷೆ ಪೂರ್ವಭಾವಿ ಸಭೆಯಲ್ಲಿ ಪರೀಕ್ಷಾ ಕರ್ತವ್ಯಕ್ಕೆ ನಿಯೋಜಿತ ಅಧಿಕಾರಿಗಳ ಸಭೆಯಲ್ಲಿ ಅವರು ಈ ಸೂಚನೆ ನೀಡಿದರು.

ಸಾಮಾನ್ಯ ಪ್ರವೇಶ ಪರೀಕ್ಷೆಗಳು ಅತ್ಯಂತ ವ್ಯವಸ್ಥಿತ ಹಾಗೂ ಪಾರದರ್ಶಕವಾಗಿ ನಡೆಸಬೇಕು. ಕೋವಿಡ್‌ ಸೋಂಕು ವ್ಯಾಪಕವಾಗಿರುವ ಕಾರಣ ಈ ವಿಷಯದಲ್ಲಿ ಪರೀಕ್ಷಾ ಕೇಂದ್ರಗಳಲ್ಲಿ ಥರ್ಮಲ್‌ ಸ್ಕ್ಯಾನರ್‌, ಸ್ಯಾನಿಟೈಸರ್‌ ಸೌಲಭ್ಯ ಕಲ್ಪಿಸಿಕೊಳ್ಳಬೇಕು. ಸಾಮಾಜಿಕ ಅಂತರಕ್ಕೆ ಆದ್ಯತೆ ನೀಡಬೇಕು ಎಂದು ನಿರ್ದೇಶನ ನೀಡಿದರು.

ಪರೀಕ್ಷೆ ಆರಂಭಕ್ಕೆ ಮುನ್ನ ಔಷಧ ಸಿಂಪಡಣೆ, ಸ್ವಚ್ಛತೆ ಸೇರಿದಂತೆ ಸಕಲ ಸಿದ್ಧತೆ ಮಾಡಿಕೊಂಡು ಶಿಸ್ತುಬದ್ಧ ಹಾಗೂ ಯೋಜನಾ ಬದ್ಧವಾಗಿ ಸಿದ್ಧತೆ ಮಾಡಿಕೊಂಡು ಪರೀಕ್ಷೆ ನಡೆಸಬೇಕು. ಪರೀಕ್ಷಾರ್ಥಿಗಳು ಆತಂಕ ಪಡದಂತೆ ಮುನ್ನೆಚ್ಚರಿಕೆ ವಹಿಸಬೇಕು. ಪ್ರತಿ ಪರೀಕ್ಷಾರ್ಥಿಯ ಕಾಳಜಿಯೊಂದಿಗೆ ಪರೀಕ್ಷೆ ಹಮ್ಮಿಕೊಳ್ಳಬೇಕು. ಯಾವುದೇ ರೀತಿಯ ಆರೋಗ್ಯ ಸಂಬಂಧಿತ ಸಮಸ್ಯೆಗಳಿಗೆ ಆರೋಗ್ಯ ಇಲಾಖೆ, ಇತರೆ ಸಮಸ್ಯೆ ಕಂಡು ಬಂದಲ್ಲಿ ಅಪರ ಜಿಲ್ಲಾಧಿಕಾರಿಗಳನ್ನು ಸಂಪರ್ಕಿಸುವಂತೆ ಸೂಚಿಸಿದರು.

ಜಿಲ್ಲೆಯ 17 ಪರೀಕ್ಷಾ ಕೇಂದ್ರಗಳಲ್ಲಿ ಸಿಇಟಿ ನಡೆಯಲಿದ್ದು, 7992 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಪರೀಕ್ಷೆ ಆರಂಭಕ್ಕೂ ಮುನ್ನ 2-3 ಗಂಟೆ ಮೊದಲು ಸಂಬಂಧಪಟ್ಟ ಸಿಬ್ಬಂ ದಿ ಮತ್ತು ಅಧಿಕಾರಿಗಳು ಹಾಜರಿದ್ದು ಅಗತ್ಯ ಪೂರ್ವಸಿದ್ಧತೆ ಮಾಡಿಕೊಳ್ಳಬೇಕು. ಯಾವುದೇ ಲೋಪಕ್ಕೆ ಅವಕಾಶ ನೀಡದೆ, ಅಪ ಕೀರ್ತಿಗೆ ಕಾರಣವಾಗದೇ ಮಾದರಿಯಾಗಿ ಪರೀಕ್ಷೆ ಹಮ್ಮಿಕೊಳ್ಳಬೇಕು. ವಿವೇಕ ಮತ್ತು ವಿವೇಚನೆ, ಜಾಣತನ, ಚಾಕಚಕ್ಯತೆಯಿಂದ ಕೆಲಸ ಮತ್ತು ಸಣ್ಣ ಪುಟ್ಟ ಸಮಸ್ಯೆಗಳನ್ನು ನಿರ್ವಹಿಸಬೇಕು. ಶಿಕ್ಷಣ, ಆರೋಗ್ಯ, ಕಂದಾಯ, ಪೊಲೀಸ್‌ ಮತ್ತು ಅವಶ್ಯಕ ಇಲಾಖೆಗಳು ಸಮನ್ವಯತೆಯಿಂದ ಕಾರ್ಯ ನಿರ್ವಹಿಸಬೇಕು ಸಲಹೆ ನೀಡಿದರು.

Advertisement

ಪರೀಕ್ಷೆಗೆ ಒಂದು ಕೊಠಡಿಯಲ್ಲಿ 24 ವಿದ್ಯಾರ್ಥಿಗಳಿಗೆ ಕೂಡಲು ಮತ್ತು ಓರ್ವ ಪರೀಕ್ಷಾರ್ಥಿಗೆ ಒಂದು ಬೆಂಚ್‌ ವ್ಯವಸ್ಥೆ ಮಾಡಬೇಕು. ಪರೀಕ್ಷಾ ಕೇಂದ್ರಗಳ ಸುತ್ತಲು ನಿಷೇಧಾಜ್ಞೆ ಜಾರಿ ಇರುತ್ತದೆ. ಹೀಗಾಗಿ ಗುಂಪಾಗಿ ಕೂಡುವ, ಪರೀಕ್ಷೆ ಸುತ್ತಮುತ್ತಲಿನ 200 ಮೀ. ವ್ಯಾಪ್ತಿಯಲ್ಲಿ ಝರಾಕ್ಸ್‌ ಮತ್ತು ಸೆ„ಬರ್‌ ಕೆಫೆಗಳು ಬಂದ್‌ ಮಾಡಬೇಕು. ಸಿಬ್ಬಂದಿ, ಪರೀಕ್ಷಾರ್ಥಿಗಳು ನಿಗದಿತ ಸಮಯಕ್ಕೆ ಹಾಜರಾಗಬೇಕು. ಥರ್ಮಲ್‌ ಸ್ಕ್ಯಾನರ್‌ ಮತ್ತು ಸ್ಯಾನಿಟೈಸರ್‌ಗಾಗಿ ತಲಾ ಇಬ್ಬರು ಸಿಬ್ಬಂದಿ ನೇಮಿಸಲಾಗುತ್ತಿದೆ. ಪ್ರಶ್ನೆ ಪತ್ರಿಕೆ ಮತ್ತು ಉತ್ತರ ಪತ್ರಿಕೆಗಳನ್ನು ವ್ಯವಸ್ಥಿತವಾಗಿ ನಿರ್ವಹಿಸಿ ಪರೀಕ್ಷೆ ಸುಸೂತ್ರವಾಗಿ ನಡೆಯುವಂತೆ ನೋಡಿಕೊಳ್ಳಲು ತಿಳಿಸಿದರು.

ಅಪರ ಜಿಲ್ಲಾ ಧಿಕಾರಿ ಡಾ| ಔದ್ರಾಮ ಮಾತನಾಡಿ, ಪರೀಕ್ಷಾಕೇಂದ್ರಗಳಿಗೆ ವಿಜ್ಞಾನ ಮತ್ತು ಗಣಿತ ವಿಷಯದ ಶಿಕ್ಷಕರನ್ನು ನಿಯೋಜಿಸಬಾರದು. ಅದರಂತೆ ನಿಯೋಜಿಸಿದ ಶಿಕ್ಷಕರ ಮಕ್ಕಳು ಅದೇ ಕೇಂದ್ರದಲ್ಲಿ ಬರದಂತೆ ಮತ್ತು ಕೋವಿಡ್‌ ಮುನ್ನೆಚ್ಚರಿಕೆ ವಹಿಸಿ ಪರೀಕ್ಷೆ ಸೂಲಲಿತವಾಗಿ ನಡೆಯುವಂತೆ ನೋಡಿಕೊಳ್ಳಲು ತಿಳಿಸಿದರು. ಪಪೂ ಶಿಕ್ಷಣ ಇಲಾಖೆ ಉಪ ನಿರ್ದೇಶಕ ರಮೇಶ ದಡ್ಡಿ, ಜಿಲ್ಲೆಯಲ್ಲಿ ಸಿಇಟಿ ಕುರಿತು ಕೈಗೊಂಡಿರುವ ಸಿದ್ಧತೆ ವಿವರ ನೀಡಿ, ವಿಜಯಪುರ ನಗರದಲ್ಲಿ 14, ಇಂಡಿ-1, ಸಿಂದಗಿ-1, ಮುದ್ದೇಬಿಹಾಳ-1 ಸೇರಿದಂತೆ 17 ಪರೀಕ್ಷಾ ಕೇಂದ್ರ ತೆರೆಯಲಾಗಿದೆ. ಅಗತ್ಯ ಪ್ರಮಾಣದ ಮಾರ್ಗಾಧಿಕಾರಿಗಳು, ಅಧೀ ಕ್ಷಕರು, ಮೇಲ್ವಿಚಾರಕರು, ಉಪ ಅಧೀಕ್ಷಕರನ್ನು ನೇಮಿಸಿದ್ದು, ಪ್ರತಿಯೊಬ್ಬರೂ ತಮ್ಮ ಕರ್ತವ್ಯವನ್ನು ಪಾರದರ್ಶಕವಾಗಿ ನಿರ್ವಹಿಸಬೇಕು. ಪರೀಕ್ಷಾ ಕೇಂದ್ರಗಳನ್ನು ಮೂರು ದಿನ ಮೊದಲು ಸೋಂಕು ನಿವಾರಕ ದ್ರಾವಣ ಸಿಂಪಡಿಸಿ ಸ್ವತ್ಛಗೊಳಿಸಬೇಕು. ಪರೀಕ್ಷೆ ಆವರಣಗಳಲ್ಲಿ ಗುಂಪಾಗಿ ಪೋಷಕರು, ಸಾರ್ವಜನಿಕರು ಸೇರದಂತೆ ನೋಡಿಕೊಳ್ಳಬೇಕು. ಪ್ರತಿ ಕೋಠಡಿಯಲ್ಲಿ ಕನಿಷ್ಠ 3 ಅಡಿ ದೈಹಿಕ ಅಂತರ ಕಾಪಾಡಿಕೊಳ್ಳಬೇಕು. ವಿದ್ಯಾರ್ಥಿಗಳ ಆರೋಗ್ಯದ ಮೇಲೆ ನಿಗಾ ಇಡುವಂತೆ ಮತ್ತು 17 ಪರೀಕ್ಷಾ ಕೇಂದ್ರಗಳಿಗೆ ಇಬ್ಬರು ಉಪನ್ಯಾಸಕರನ್ನು ವಿಶೇಷ ಜಾಗೃತ ದಳದ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ ಎಂದು ತಿಳಿಸಿದರು. ತಹಶೀಲ್ದಾರ್‌ ಮೋಹನಕುಮಾರಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next