ವಾಡಿ: ಪಟ್ಟಣ ವ್ಯಾಪ್ತಿಯಲ್ಲಿ ಅಕ್ರಮವಾಗಿ ಗಣಿಗಾರಿಕೆ ನಡೆಯುತ್ತಿದೆ ಎನ್ನುವ ದೂರಿನನ್ವಯ ಸ್ಥಳ ಪರಿಶೀಲನೆಗೆ ಮುಂದಾದ ಜಿಲ್ಲಾ ಧಿಕಾರಿ ಉಜ್ವಲಕುಮಾರ ಘೋಷ್ ಸುಮಾರು ಸುಮಾರು 200 ಕಲ್ಲುಗಣಿಗಳ ವಿದ್ಯುತ್ ಕಡಿತಕ್ಕೆ ಆದೇಶ ನೀಡುವ ಮೂಲಕ ಗಣಿ ಮಾಲೀಕರಿಗೆ ಬಿಸಿ ಮುಟ್ಟಿಸಿದ್ದಾರೆ.
ಪಟ್ಟಣ ಸೇರಿದಂತೆ ಬಳವಡಗಿ, ಕೊಂಚೂರ, ರಾವೂರ, ಮಾಲಗತ್ತಿ, ಲಕ್ಷಿಪುರವಾಡಿ, ಕುಂದನೂರ, ಕಮರವಾಡಿ, ಕಡಬೂರ ಗ್ರಾಮಗಳ ವ್ಯಾಪ್ತಿಯಲ್ಲಿ ನಡೆಯುತ್ತಿರುವ ನೂರಾರು ಅಕ್ರಮ ಕಲ್ಲುಗಣಿಗಳು ಪದೇಪದೆ ವಿದ್ಯುತ್ ಕಡಿತಕ್ಕೆ ತುತ್ತಾಗುತ್ತಿದ್ದವು. ಆದರೆ ಈ ಬಾರಿ ಜಿಲ್ಲಾಧಿಕಾರಿಗಳೇ ರಾವೂರ ವ್ಯಾಪ್ತಿಯ ಕೆಲ ಗಣಿಗಳಿಗೆ ಭೇಟಿ ನೀಡುವ ಮೂಲಕ ಪರವಾನಿಗೆಯಿಲ್ಲದೆ ಗಣಿಗಾರಿಕೆ ನಡೆಸುತ್ತಿದ್ದ ಗಣಿ ಮಾಲೀಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.
ಬಳವಡಗಿ, ಕೊಂಚೂರು ವ್ಯಾಪ್ತಿಯಲ್ಲಿ ನಡೆಯುತ್ತಿರುವ ಗಣಿಗಾರಿಕೆಯ ಬಾಹುಗಳು ಗ್ರಾಮಗಳ ರಸ್ತೆಗಳನ್ನೇ ಕಬಳಿಸಿದರೆ, ರಾವೂರ ಹಾಗೂ ಮಾಲಗತ್ತಿ ಭಾಗದ ಗಣಿಗಳು, ಕಲಬುರಗಿ-ರಾಯಚೂರ ರಾಷ್ಟ್ರೀಯ ಹೆದ್ದಾರಿ-150ಕ್ಕೆ ಧಕ್ಕೆಯುಂಟು ಮಾಡಿವೆ.
ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ರಾಯಲ್ಟಿ ಪಾವತಿಸಿ ಲೀಜ್ ಪಡೆಯಬೇಕಾದ ಗಣಿ ಮಾಲೀಕರು, ಕಾನೂನಿನ ನಿಯಮ ಗಾಳಿಗೆ ತೂರಿ ಅಕ್ರಮ ದಂಧೆಗೆ ಮುಂದಾಗಿರುವುದು ಜಿಲ್ಲಾಧಿಕಾರಿ ಖಡಕ್ ಆದೇಶಕ್ಕೆ ಕಾರಣ ಎನ್ನಲಾಗಿದೆ.
ಪರವಾನಿಗೆ ಪಡೆದುಕೊಳ್ಳುವ ವರೆಗೂ ಗಣಿಗಳಿಗೆ ವಿದ್ಯುತ್ ಸಂಪರ್ಕ ನೀಡಬೇಡಿ ಎಂಬ ಆದೇಶ ಜೆಸ್ಕಾಂ ಅಧಿಕಾರಿಗಳಿಗೆ ನೀಡಿರುವ ಜಿಲ್ಲಾಧಿಕಾರಿ ಉಜ್ವಲಕುಮಾರ ಘೋಷ್, ಅಕ್ರಮ ಗಣಿಗಾರಿಕೆಗೆ ಮುಂದಾದರೆ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ. ಇದರಿಂದ ನೂರಾರು ಗಣಿಗಳಲ್ಲಿ ಕ್ವಾರಿ ಕಟಿಂಗ್ ಕೆಲಸ ಸ್ಥಗಿತಗೊಂಡಿದೆ. ಗಣಿಗಾರಿಕೆಗೆ ಬೀಗ ಬಿದ್ದ ಪರಿಣಾಮ 800ಕ್ಕೂ ಹೆಚ್ಚು ಗಣಿ ಕಾರ್ಮಿಕರು ಮನೆಗಳತ್ತ ಮುಖಮಾಡಿದ್ದಾರೆ.