Advertisement

ಡಿ.5ರೊಳಗೆ ಕಬ್ಬು ಕಟಾವಿಗೆ ಡೀಸಿ ಸೂಚನೆ

09:01 PM Nov 24, 2019 | Lakshmi GovindaRaj |

ಚಾಮರಾನಗರ: ಜಿಲ್ಲೆಯಲ್ಲಿ ರೈತರು ಬೆಳೆದಿರುವ 16, 17 ಹಾಗೂ 18 ತಿಂಗಳ ಅವಧಿಯಾಗಿರುವ (ಜೂನ್‌ ಮತ್ತು ಜುಲೈ) ಕಬ್ಬನ್ನು ಡಿ.5ರೊಳಗೆ ಬಣ್ಣಾರಿ ಸಕ್ಕರೆ ಕಾರ್ಖಾನೆಯವರು ಕಟಾವು ಮಾಡಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಸೂಚಿಸಿದರು.

Advertisement

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಕಬ್ಬು ಬೆಳೆಗಾರರು, ರೈತ ಮುಖಂಡರು ಹಾಗೂ ಕುಂತೂರು ಬಣ್ಣಾರಿ ಅಮ್ಮನ್‌ ಸಕ್ಕರೆ ಕಾರ್ಖಾನೆ ಮಾಲೀಕರ ಪ್ರತಿನಿಧಿಗಳ ಸಭೆಯಲ್ಲಿ ಜಿಲ್ಲಾಧಿಕಾರಿ ಕಾರ್ಖಾನೆ ಮಾಲೀಕರಿಗೆ ಆದೇಶ ನೀಡಿದರು. ಜಿಲ್ಲೆಯಲ್ಲಿ ಬೆಳೆಯಲಾದ ಆಗಸ್ಟ್‌ ತಿಂಗಳ ಕಬ್ಬು ಬೆಳೆಯನ್ನು ಡಿ.25ರೊಳಗಾಗಿ ಕಟಾವು ಮಾಡಿಕೊಳ್ಳಲು ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಯಿತು.

ವೇ ಬ್ರಿಡ್ಜ್ ಅಳವಡಿಸಿ: ರೈತ ಮುಖಂಡರು ಮಾತನಾಡಿ, ರೈತರು ತಂದ ಕಬ್ಬನ್ನು ತೂಕಮಾಡುವ ಸಲುವಾಗಿ ಕಾರ್ಖಾನೆಯ ಹೊರಭಾಗದಲ್ಲಿ ವೇ ಬ್ರಿಡ್ಜ್ (ತೂಕದ ಯಂತ್ರ) ಅಳವಡಿಸುವ ವ್ಯವಸ್ಥೆಯಾಗಬೇಕು. ಕಾರ್ಖಾನೆ ಮಾಲೀಕರಿಂದ ವೇ ಬ್ರಿಡ್ಜ್ ಅಳವಡಿಕೆ ಮಾಡಲು ಸಾಧ್ಯವಾಗದಿದ್ದಲ್ಲಿ ನಾವೇ ಅಳವಡಿಸಿಕೊಳ್ಳಲು ಅನುಮತಿ ಕೊಡಿ ಎಂಬ ಪ್ರಸ್ತಾವವನ್ನು ಮುಂದಿಟ್ಟರು. ಇದಕ್ಕೆ ಪ್ರತಿಕ್ರಿಯಿಸಿದ ಸಕ್ಕರೆ ಕಾರ್ಖಾನೆಯ ಉಪಾಧ್ಯಕ್ಷ ಶರವಣ, ರೈತರೇ ವೇ ಬ್ರಿಡ್ಜ್ ಅಳವಡಿಸಿಕೊಳ್ಳಲು ಕಾರ್ಖಾನೆ ಯಿಂದ ಯಾವುದೇ ಅಭ್ಯಂತರವಿಲ್ಲ ಎಂದು ಹೇಳಿದರು.

ವಹಿವಾಟು ಪಾರದರ್ಶಕವಾಗಿರಲಿ: ಸಕ್ಕರೆ ಕಾರ್ಖಾನೆಯಲ್ಲಿ ನಡೆಯುವ ಆರ್ಥಿಕ ವಹಿವಾಟು ಪಾರದರ್ಶಕವಾಗಿರಬೇಕು. ರೈತರಿಗೂ ಸಹ ವಹಿವಾಟಿನ ಮಾಹಿತಿ ತಿಳಿಯುವಂತಿರಬೇಕು. ರೈತರು ಮತ್ತು ಕಾರ್ಖಾನೆ ನಡುವಿನ ದ್ವಿಪಕ್ಷಿಯ ಒಪ್ಪಂದದ ಕ್ರಮಗಳನ್ನು ಚಾಚೂತಪ್ಪದೇ ಅನುಷ್ಠಾನಗೊಳಿಸಬೇಕೆಂಬ ವಿಷಯಗಳನ್ನು ರೈತ ಮುಖಂಡರು ಸಭೆಯಲ್ಲಿ ತಿಳಿಸಿದರು.

ಆದೇಶ ಪಾಲನೆ ಮಾಡಿ: ರೈತರ ಅಭಿಪ್ರಾಯಗಳಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ, ನಿಗದಿತ ಅವಧಿಯೊಗಳೆ ಕಬ್ಬು ಖರೀದಿಸಿದ ಹಣವನ್ನು ರೈತರಿಗೆ ಪಾವತಿ ಮಾಡಬೇಕು. ಕಬ್ಬು ಕಟಾವು ಕೂಲಿ, ಸಾಗಣೆ ವೆಚ್ಚವನ್ನು ನಿಗದಿಪಡಿಸಿ ಹೊರಡಿಸಲಾಗಿರುವ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಕಬ್ಬು ಬೆಳೆಗಾರರು ಹಾಗೂ ಕಾರ್ಖಾನೆಗಳ ನಡುವೆ ಆಗಿರುವ ಕಾನೂನು ಬದ್ಧ ದ್ವಿಪಕ್ಷೀಯ ಒಪ್ಪಂದ ಪತ್ರದ ಆದೇಶವನ್ನು ಪಾಲನೆ ಮಾಡಬೇಕು. ರೈತರೊಡನೆ ಮಾಡಿಕೊಳ್ಳಲಾಗಿರುವ ಒಪ್ಪಂದ ಪತ್ರಗಳನ್ನು ಮನೆಗಳಿಗೆ ತಲುಪಿಸಬೇಕು ಎಂದು ಸೂಚಿಸಿದರು.

Advertisement

ಸಕಾರಾತ್ಮಕವಾಗಿ ಸ್ಪಂದಿಸಿ: ಜಿಲ್ಲೆಯ ಕಬ್ಬು ಬೆಳೆಗಾರರು ರೈತರಿಗೆ ಯಾವುದೇ ತೊಂದರೆ, ಅನ್ಯಾಯವಾಗಬಾರದು. ಬೆಳಗಾರರು ರೈತರಿಗೆ ಅನುಕೂಲವಾಗುವ ಹಾಗೂ ಅವರ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಬೇಕು. ಜಿಲ್ಲೆಯ ರೈತರು ಬೆಳೆದ ಕಬ್ಬನ್ನು ಆದ್ಯತೆ ಮೇರೆಗೆ ಅರೆಯಲು ಕ್ರಮ ತೆಗೆದುಕೊಳ್ಳುವಂತೆ ಜಿಲ್ಲಾಧಿಕಾರಿ ಕಾರ್ಖಾನೆಯ ಪ್ರತಿನಿಧಿಗಳಿಗೆ ತಿಳಿಸಿದರು.

ಸೌಜನ್ಯದಿಂದ ವರ್ತಿಸಿ: ಕಾರ್ಖಾನೆಯ ಫೀಲ್ಡ್‌ ಆಫೀಸರ್‌ಗಳು ರೈತರ ಜೊತೆ ಸೌಜನ್ಯದಿಂದ ವರ್ತಿಸಬೇಕು. ಒಟ್ಟಾರೆ ರೈತರ ಹಿತ ಕಾಯುವ ಕ್ರಮಗಳಿಗೆ ಸಕ್ಕರೆ ಕಾರ್ಖಾನೆ ಬದ್ಧವಾಗಿರಬೇಕು. ಮಂಡ್ಯದಿಂದ ಕಬ್ಬು ತರಿಸಿಕೊಂಡು ಅರೆಯಲು ಜಿಲ್ಲಾಡಳಿತ ಅನುಮತಿ ನೀಡಿಲ್ಲ. ಹಾಗಾಗಿ ಮಂಡ್ಯ ಕಬ್ಬನ್ನು ಕಟಾವು ಮಾಡಿಸಿಕೊಳ್ಳುವಂತಿಲ್ಲ ಎಂದು ಕಾರ್ಖಾನೆ ಪ್ರತಿನಿಧಿಗಳಿಗೆ ಸೂಚಿಸಿದರು.

ರೈತರ ಒತ್ತಾಯ: 2018-19ನೇ ಸಾಲಿನಲ್ಲಿ ಪ್ರತಿ ಟನ್‌ಗೆ ಬಾಕಿ ಇರುವ 160 ರೂ. ಹಣವನ್ನು ರೈತರಿಗೆ ಪಾವತಿಸಬೇಕು. ಬೆಲ್ಲವನ್ನು ಬೆಂಬಲ ಬೆಲೆ ಯೋಜನೆಗೆ ಸೇರಿಸಬೇಕು. ಮತ್ತೂಂದು ಕಾರ್ಖಾನೆ ಆರಂಭಕ್ಕೆ ಅನುಮತಿ ನೀಡಬೇಕು ಎಂದು ರೈತರು ಒತ್ತಾಯಿಸಿದರು.

ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಹಳ್ಳಿಕೆರೆಹುಂಡಿ ಭ್ಯಾಗರಾಜ್‌, ರೈತ ಸಂಘದ, ವಿಭಾಗೀಯ ಕಾರ್ಯದರ್ಶಿ ಮಹೇಶ್‌ಪ್ರಭು, ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್‌, ಪ್ರುìದರ್ಶಿ ಗುರುಪ್ರಸಾದ್‌, ಬಸವಣ್ಣ ಮತ್ತಿತರ ರೈತ ಮುಖಂಡರು, ಕಬ್ಬು ಬೆಳೆಗಾರರ ಸಂಘದ ಪ್ರತಿನಿಧಿಗಳು, ಆಹಾರ ಇಲಾಖೆಯ ಉಪನಿರ್ದೇಶಕ‌ ಆರ್‌.ರಾಚಪ್ಪ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next