Advertisement

ನಿಖರ ವರದಿ ನೀಡಲು ಡಿಸಿ ಸೂಚನೆ

11:29 AM Jan 10, 2019 | |

ಯಾದಗಿರಿ: ಜಿಲ್ಲೆಯಲ್ಲಿ ಒಟ್ಟು 351 ಕೆರೆಗಳಿದ್ದು, ಶಾಸಕರ ಸಲಹೆ-ಸೂಚನೆಯಂತೆ ಪ್ರಥಮ ಹಂತದಲ್ಲಿ ಪ್ರಾಯೋಗಿಕವಾಗಿ ಹೋಬಳಿಗೊಂದರಂತೆ 16 ಕೆರೆಗಳ ಹೂಳೆತ್ತಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್‌ ತಿಳಿಸಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ಪಂಚಾಯತ್‌ ಮತ್ತು ಸಣ್ಣ ನೀರಾವರಿ ಇಲಾಖೆ ಕೆರೆಗಳ ಹೂಳೆತ್ತುವ ಕುರಿತಂತೆ ಜಿಲ್ಲಾ ಪಂಚಾಯತ್‌ ಅಧ್ಯಕ್ಷರು ಹಾಗೂ ಜಿಲ್ಲೆಯ ಎಲ್ಲಾ ಶಾಸಕರೊಂದಿಗೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಜಿಲ್ಲಾ ಪಂಚಾಯತ್‌ ವ್ಯಾಪ್ತಿಯ ಪಂಚಾಯತ್‌ ರಾಜ್‌ ಇಂಜಿನಿಯರಿಂಗ್‌ ವಿಭಾಗದ ಯಾದಗಿರಿ ತಾಲೂಕಿನಲ್ಲಿ 189 ಕೆರೆಗಳು, ಶಹಾಪುರ ತಾಲೂಕಿನಲ್ಲಿ 60 ಕೆರೆಗಳು, ಸುರಪುರ ತಾಲೂಕಿನಲ್ಲಿ 31 ಕೆರೆಗಳು ಸೇರಿ ಒಟ್ಟು 280 ಕೆರೆಗಳಿವೆ. ಸಣ್ಣ ನೀರಾವರಿ ಇಲಾಖೆ ಯಾದಗಿರಿ 57, ಶಹಾಪುರ 9, ಸುರಪುರ 5 ಕೆರೆಗಳು ಸೇರಿ ಒಟ್ಟು 71 ಕೆರೆಗಳಿವೆ. ಈ ಎಲ್ಲಾ ಕೆರೆಗಳನ್ನು ಹಂತ ಹಂತವಾಗಿ ಹೂಳೆತ್ತಲಾಗುವುದು. ಪ್ರಥಮ ಹಂತದಲ್ಲಿ ಶಾಸಕರು ತಮ್ಮ ವ್ಯಾಪ್ತಿಯಲ್ಲಿ ಹೋಬಳಿಗೊಂದು ಕೆರೆಯಂತೆ ಆಯ್ಕೆ ಮಾಡಿದ ಪಟ್ಟಿ ನೀಡುವಂತೆ ಜಿಲ್ಲೆಯ ಶಾಸಕರನ್ನು ಕೋರಿದರು.

ಜಿಲ್ಲೆಯ ಕೆರೆಗಳ ವಿಸ್ತೀರ್ಣ, ಕೆರೆ ವ್ಯಾಪ್ತಿಯ ರೈತರ ವಿವರ ಸೇರಿದಂತೆ ಇನ್ನಿತರ ದಾಖಲೆಗಳ ನಿಖರ ವರದಿ ನೀಡುವಂತೆ ಪಂಚಾಯತ್‌ ರಾಜ್‌ ಇಂಜಿನಿಯರಿಂಗ್‌ ವಿಭಾಗ, ಸಣ್ಣ ನೀರಾವರಿ ಇಲಾಖೆ, ಕೃಷಿ ಇಲಾಖೆ, ತಹಶೀಲ್ದಾರರು ಹಾಗೂ ವಿವಿಧ ಇಲಾಖೆಗಳಿಗೆ ನಿರ್ದೇಶಿಸಿದ ಜಿಲ್ಲಾಧಿಕಾರಿಗಳು, ಈ ವರದಿಯನ್ನು ಆಧರಿಸಿ ಕೆರೆಗಳ ಹೂಳೆತ್ತಲು ಕ್ರಿಯಾಯೋಜನೆ ಸಿದ್ಧಪಡಿಸುವಂತೆ ಸೂಚಿಸಿದರು.

ಕೆರೆ ಹೂಳೆತ್ತುವ ಕಾರ್ಯದಲ್ಲಿ ಸಾರ್ವಜನಿಕರು, ಮುಖ್ಯವಾಗಿ ರೈತರ ಸಹಕಾರ ಅಗತ್ಯವಾಗಿದೆ. ಮಷಿನ್‌ನಿಂದ ತೆಗೆದುಕೊಟ್ಟ ಕೆರೆಯ ಹೂಳನ್ನು ರೈತರು ತಮ್ಮ ಹೊಲಗಳಿಗೆ ತೆಗೆದುಕೊಂಡು ಹೋಗಲು ಆಸಕ್ತಿ ತೋರಬೇಕು. ಈ ನಿಟ್ಟಿನಲ್ಲಿ ರೈತರಲ್ಲಿ ಜಾಗೃತಿ ಮೂಡಿಸುವ ಸಭೆ-ಸಮಾರಂಭಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

Advertisement

ಬಿ.ಜೆ.ಎಸ್‌ ನೊಂದಿಗೆ ಒಡಂಬಡಿಕೆ: ನೀತಿ ಆಯೋಗ ಗುರುತಿಸಿದ ರಾಜ್ಯದ ಮಹತ್ವಾಕಾಂಕ್ಷೆ ಜಿಲ್ಲೆಗಳಾದ ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳ ಕೆರೆ ಹೂಳೆತ್ತುವ ಸಂಬಂಧ ರಾಜ್ಯ ಸರ್ಕಾರವು ಭಾರತೀಯ ಜೈನ್‌ ಸಂಘಟನಾ (ಬಿಜೆಎಸ್‌)ದೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ. ಕಾಮಗಾರಿಗೆ ರಾಜ್ಯ ಸರ್ಕಾರ ಡೀಸೆಲ್‌ ನೀಡಲಿದ್ದು, ಬಿಜೆಎಸ್‌ ಮಷಿನ್‌ಗಳನ್ನು ಬಳಸಿ ಹೂಳೆತ್ತಿ ಕೊಡಲಿದೆ. ರೈತರು ಈ ಹೂಳನ್ನು ತಮ್ಮ ಹೊಲಗಳಿಗೆ ತೆಗೆದುಕೊಂಡು ಹೋಗಬೇಕು. ಜಿಲ್ಲಾಡಳಿತ ಈ ಕಾರ್ಯದಲ್ಲಿ ಮಾನಿಟರಿಂಗ್‌ ಮಾಡಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಭಾರತೀಯ ಜೈನ್‌ ಸಂಘಟನಾ ಜೊತೆಗೆ ಜಿಲ್ಲೆಯ ಕೆರೆಗಳ ಹೂಳೆತ್ತುವ ಕಾಮಗಾರಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಸ್ಥೆಯು ಕೂಡ ಪಾಲ್ಗೊಳ್ಳಲಿದೆ ಎಂದು ಅವರು ಈ ಸಂದರ್ಭದಲ್ಲಿ ಮಾಹಿತಿ ನೀಡಿದರು.

ಸಭೆಯಲ್ಲಿ ಜಿಪಂ ಅಧ್ಯಕ್ಷ ರಾಜಶೇಖರಗೌಡ ಪಾಟೀಲ ವಜ್ಜಲ್‌ ಹಾಗೂ ಜಿಲ್ಲೆಯ ಶಾಸಕ ವೆಂಕಟರಡ್ಡಿಗೌಡ ಮುದ್ನಾಳ, ಶರಣಬಸಪ್ಪಗೌಡ ದರ್ಶನಾಪುರ, ನರಸಿಂಹ ನಾಯಕ, ನಾಗನಗೌಡ ಕಂದಕೂರ ಅವರು ಸಲಹೆ-ಸೂಚನೆಗಳನ್ನು ನೀಡಿದರು.

ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕವಿತಾ ಎಸ್‌. ಮನ್ನಿಕೇರಿ, ಅಪರ ಜಿಲ್ಲಾಧಿಕಾರಿ ಪ್ರಕಾಶ್‌ ಜಿ. ರಜಪೂತ, ಸಹಾಯಕ ಆಯುಕ್ತ ಡಾ| ಬಿ.ಎಸ್‌. ಮಂಜುನಾಥ ಸ್ವಾಮಿ, ಜಿಪಂ ಉಪ ಕಾರ್ಯದರ್ಶಿ ವಸಂತ ವಿ. ಕುಲಕರ್ಣಿ, ತಹಶೀಲ್ದಾರ್‌ ಚನ್ನಮಲ್ಲಪ್ಪ ಘಂಟಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next