Advertisement

ಕಬ್ಬಿನ ಬಾಕಿ ಹಣ ಪಾವತಿಸಲು ಡಿಸಿ ಸೂಚನೆ 

04:51 PM Jun 30, 2018 | Team Udayavani |

ಬೆಳಗಾವಿ: 2017-18ನೇ ಸಾಲಿನಲ್ಲಿ ಕಬ್ಬಿನ ಬಿಲ್‌ ಬಾಕಿ ಉಳಿಸಿಕೊಂಡಿರುವ ಸಕ್ಕರೆ ಕಾರ್ಖಾನೆಗಳು ತಕ್ಷಣವೇ ಎಫ್‌ಆರ್‌ಪಿ ಪ್ರಕಾರ ರೈತರಿಗೆ ಕಬ್ಬಿನ ಬಿಲ್‌ ಪಾವತಿಸಬೇಕು ಎಂದು ಜಿಲ್ಲಾಧಿಕಾರಿ ಜಿಯಾವುಲ್ಲಾ ಎಸ್‌. ಸೂಚನೆ ನೀಡಿದರು.  ಕಬ್ಬಿನ ಬಿಲ್‌ ಬಾಕಿ ಕುರಿತಂತೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಕ್ಕರೆ ಕಾರ್ಖಾನೆಗಳ ಪ್ರತಿನಿ ಧಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಈಗಾಗಲೇ ಜೂನ್‌ 6, 2018ರಂದು ಒಂದು ಸುತ್ತಿನ ಸಭೆ ನಡೆಸಿ ಬಾಕಿ ಹಣ ಪಾವತಿಸುವಂತೆ ಸೂಚನೆ ನೀಡಲಾಗಿತ್ತು. ಅದಾದ ಬಳಿಕ ಅನೇಕ ಕಾರ್ಖಾನೆಗಳು ಬಾಕಿ ಹಣ ಪಾವತಿಸಿವೆ ಎಂದರು.

Advertisement

ಕಾರ್ಖಾನೆಗಳಿಗೆ ಕಬ್ಬು ಪೂರೈಸಿರುವ ರೈತರು ಸಂಕಷ್ಟದಲ್ಲಿದ್ದು, ಕಾರ್ಖಾನೆಗಳು ಇದನ್ನು ಅರಿತು ಬಾಕಿ ಹಣ ಪಾವತಿಸಬೇಕು. ಇಲ್ಲದಿದ್ದರೆ ಬಾಕಿ ಹಣ ವಸೂಲಿಗೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗುತ್ತದೆ. ಇದಕ್ಕೆ ಆಸ್ಪದ ನೀಡಬಾರದು ಎಂದು ತಿಳಿಸಿದರು.

43,998 ಲಕ್ಷ ರೂ. ಬಾಕಿ ಮೊತ್ತ ಪಾವತಿ: ಜಿಲ್ಲೆಯ 17 ಸಕ್ಕರೆ ಕಾರ್ಖಾನೆಗಳು 6-6-2018ರವರೆಗೆ ಒಟ್ಟು 56,898 ಲಕ್ಷ ರೂ. ಬಾಕಿ ಉಳಿಸಿಕೊಂಡಿದ್ದವು. ಜಿಲ್ಲಾಧಿಕಾರಿ ಎಸ್‌.ಜಿಯಾವುಲ್ಲಾ 6-06-2018ರಂದು ಕಾರ್ಖಾನೆ ಪ್ರತಿನಿ ಗಳು ಹಾಗೂ ರೈತ ಮುಖಂಡರ ಸಭೆ ನಡೆಸಿ, ಬಾಕಿ ಪಾವತಿಗೆ ಗಡುವು ನೀಡಿದ್ದರು. ಇದಾದ ಬಳಿಕ ಅನೇಕ ಕಾರ್ಖಾನೆಗಳು ಕಬ್ಬಿನ ಬಾಕಿ ಬಿಲ್‌ ಪಾವತಿಸುವ ಪ್ರಕ್ರಿಯೆ ಆರಂಭಿಸಿದ್ದು, 17 ಕಾರ್ಖಾನೆಗಳು ಇದುವರೆಗೆ ಒಟ್ಟು 43,998 ಲಕ್ಷ ರೂ. ಬಾಕಿ ಪಾವತಿಸಿವೆ. ಬಾಕಿ ಉಳಿದಿರುವ 12,900 ಲಕ್ಷ ರೂ. ಕಾರ್ಖಾನೆಗಳು ಕೇಳಿರುವ ಕಾಲಮಿತಿಯೊಳಗೆ ಪಾವತಿಸಬೇಕು ಎಂದು ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಕಾಲಮಿತಿಯಲ್ಲಿ ಪಾವತಿಸಿ: ಕಬ್ಬು ಅಭಿವೃದ್ಧಿ ಆಯುಕ್ತಾಲಯವು ಬಾಕಿ ಉಳಿಸಿಕೊಂಡಿರುವ ಜಿಲ್ಲೆಯ 17 ಕಾರ್ಖಾನೆಗಳಿಗೆ ನೋಟಿಸ್‌ ನೀಡಿತ್ತು. ಈ 17 ಕಾರ್ಖಾನೆಗಳ ಪೈಕಿ ಕೆಲವು ಕಾರ್ಖಾನೆಗಳು ಈಗಾಗಲೇ ಎಫ್‌ಆರ್‌ಪಿ ಪ್ರಕಾರ ಬಾಕಿ ಬಿಲ್‌ ಪಾವತಿಸಿವೆ. ಇನ್ನುಳಿದ ಕಾರ್ಖಾನೆಗಳು ತಾವು ಕೇಳಿರುವ ಕಾಲಾವಕಾಶದ ಮಿತಿಯೊಳಗೆ ಬಾಕಿ ಹಣ ಪಾವತಿಸಬೇಕು ಎಂದು ತಿಳಿಸಿದರು. ಸಭೆಯಲ್ಲಿ ಮಾತನಾಡಿದ ಕಾರ್ಖಾನೆಗಳ ಪ್ರತಿನಿಧಿಗಳು, ಈಗಾಗಲೇ ರೈತರಿಗೆ ಬಾಕಿ ಹಣ ಪಾವತಿಸುವ ಪ್ರಕ್ರಿಯೆ ಆರಂಭಿಸಿದ್ದು, ಕಾಲಮಿತಿಯಲ್ಲಿ ಹಣ ಪಾವತಿಸುವುದಾಗಿ ಹೇಳಿದರು. 

ಮುನವಳ್ಳಿಯ ರೇಣುಕಾ ಶುಗರ್ ಪ್ರತಿನಿಧಿ ಮಾತನಾಡಿ, ಕಳೆದ ಸಭೆಯ ಬಳಿಕ ಇದುವರೆಗೆ 64 ಕೋಟಿ ರೂ. ಬಾಕಿ ಹಣ ಪಾವತಿಸಿದ್ದು, ಉಳಿದ ಹಣ ಪಾವತಿಗೆ 15 ದಿನಗಳ ಕಾಲಾವಕಾಶ ಕೋರಿದರು. ಅದೇ ರೀತಿ ಹಾಲಸಿದ್ಧನಾಥ ಕಾರ್ಖಾನೆಯ ಪ್ರತಿನಿಧಿ ಎಂಟು ದಿನದಲ್ಲಿ ಬಾಕಿ ಪಾವತಿಸುವುದಾಗಿ ಸಭೆಯಲ್ಲಿ ತಿಳಿಸಿದರು.

Advertisement

ರೇಣುಕಾ ಶುಗರ್, ಕೊಕಟನೂರ; ಸೋಮೇಶ್ವರ ಸಕ್ಕರೆ ಕಾರ್ಖಾನೆ, ಭಾಗ್ಯಲಕ್ಷ್ಮೀ ಸಕ್ಕರೆ ಕಾರ್ಖಾನೆ, ಶಿರಗುಪ್ಪಿ ಶುಗರ್, ಕೊಳವಿಯ ಗೋಕಾಕ ಶುಗರ್ ಸೇರಿದಂತೆ ಕೆಲವು ಕಾರ್ಖಾನೆಗಳ ಪ್ರತಿನಿ ಧಿಗಳು ಬಾಕಿ ಹಣವನ್ನು ಈಗಾಗಲೇ ಪಾವತಿಸಲಾಗಿದೆ ಹೇಳಿದರು. ಅಥಣಿ ಫಾರ್ಮರ್ಸ್‌ ಲಿಮಿಟೆಡ್‌, ಉಗಾರ್‌ ಶುಗರ್, ಸತೀಶ್‌ ಶುಗರ್, ಘಟಪ್ರಭಾ ಎಸ್‌ ಎಸ್‌ಕೆ ಲಿಮಿಟೆಡ್‌, ಮಲಪ್ರಭಾ ಎಸ್‌ಎಸ್‌ಕೆ ಲಿಮಿಟೆಡ್‌, ಬೆಳಗಾವಿ ಶುಗರ್ ಕಾರ್ಖಾನೆಯ ಪ್ರತಿನಿಧಿಗಳು 8ರಿಂದ 15 ದಿನದೊಳಗೆ ಬಾಕಿ ಹಣ ಪಾವತಿಸುವುದಾಗಿ ತಿಳಿಸಿದರು. ಜಿಪಂ ಸಿಇಒ ರಾಮಚಂದ್ರನ್‌ ಆರ್‌., ಮೊಖಾಶಿ, ಸೈಯದ್‌ ಆಫ್ರಿನ್‌ಬಾನು ಬಳ್ಳಾರಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next