Advertisement

ನೈರ್ಮಲ್ಯ ಕಾಪಾಡಲು ಡಿಸಿ ಸೂಚನೆ

04:46 PM Feb 07, 2018 | |

ರಾಯಚೂರು: ನಗರದಲ್ಲಿ ಸಿಸಿ ರಸ್ತೆ ನಿರ್ಮಾಣ ಮಾಡುವುದಷ್ಟೇ ಅಲ್ಲ, ನೈರ್ಮಲ್ಯಕ್ಕೂ ಅಷ್ಟೇ ಪ್ರಾಧಾನ್ಯತೆ ನೀಡಬೇಕು ಎಂದು ಜಿಲ್ಲಾಧಿಕಾರಿ ಡಾ| ಬಗಾದಿ ಗೌತಮ್‌ ನಗರಸಭೆ ಪೌರಾಯುಕ್ತರಿಗೆ ಸೂಚಿಸಿದರು.

Advertisement

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಜನಸ್ಪಂದನ ಸಭೆಯಲ್ಲಿ ಅವರು ಮಾತನಾಡಿದರು. ನಗರವನ್ನು ಬಯಲು ಶೌಚಮುಕ್ತ ಮಾಡಲು ಕ್ರಮ ಕೈಗೊಳ್ಳಬೇಕು. ಸಾಮೂಹಿಕ ಶೌಚಗೃಹದ ಜತೆಗೆ ವೈಯಕ್ತಿಕ ಶೌಚಗೃಹ ನಿರ್ಮಾಣಕ್ಕೂ ಆದ್ಯತೆ ನೀಡಬೇಕು. ಜನರಿಗೆ ಸ್ವತ್ಛ ಭಾರತ ಯೋಜನೆ ಬಗ್ಗೆ ತಿಳಿವಳಿಕೆ ಮೂಡಿಸಿ ಎಂದರು.

ನಂತರ ವಿವಿಧೆಡೆಯಿಂದ ಬಂದು ಅಹವಾಲು ಸ್ವೀಕರಿಸಿದ ಅವರು, ಕ್ರಮಕ್ಕೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಚಿಕ್ಕಸೂಗೂರು ಗ್ರಾಮದ ರಾಘವೇಂದ್ರ ದೂರು ಸಲ್ಲಿಸಿ, ವೈಟಿಪಿಎಸ್‌ಗೆ ಲಾರಿಗಳಲ್ಲಿ ಕಲ್ಲಿದ್ದಿಲು ಸಾಗಿಸುವಾಗ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ. ಅವೈಜ್ಞಾನಿಕವಾಗಿ ಸಾಗಿಸುತ್ತಿರುವ ಕಾರಣ ರಸ್ತೆಯ ಅಕ್ಕಪಕ್ಕದ ಮನೆಗಳಿಗೆ ಧೂಳು ಬರುತ್ತಿದೆ. ಈ ಕುರಿತು
ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಪರಿಸರ ಮಾಲಿನ್ಯ ನಿಯಂತ್ರಣಾಧಿಕಾರಿಗೆ ಜಿಲ್ಲಾಧಿಕಾರಿ ಸೂಚಿಸಿದರು.

ನಗರದ ಅಂದ್ರೂನ್‌ ಕಿಲ್ಲಾ ವಸತಿ ಪ್ರದೇಶದಲ್ಲಿರುವ ಶಾದಿಮಹಲ್‌ನ್ನು ನಗರಸಭೆಯಿಂದ ಪರವಾನಗಿ ಪಡೆಯದೆ ನಡೆಸಲಾಗುತ್ತಿದೆ ಎಂದು ಸೈಯ್ಯದ್‌ ಶಂಶುದ್ದೀನ್‌ ದೂರು ನೀಡಿದರು. ಜಿಲ್ಲಾಧಿಕಾರಿ ಕಚೇರಿಯಿಂದ ಸೂಚನಾ ಪತ್ರ ನೀಡಿದರೂ ಸೂಕ್ತ ದಾಖಲೆ ಸಲ್ಲಿಸಿರುವುದಿಲ್ಲ ಎಂದು ಜಿಲ್ಲಾ ಧಿಕಾರಿಗೆ ದೂರು ನೀಡಿದರು. ದೂರು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಪೌರಾಯುಕ್ತರಿಗೆ ತಿಳಿಸಿದರು.

ಪರಿಶಿಷ್ಟ ಪಂಗಡ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆಯಡಿ ಟ್ಯಾಕ್ಸಿ ಕಲ್ಪಿಸುವಂತೆ ದೂರುದಾರ ಪರಮೇಶ
ಜಿಲ್ಲಾಧಿಕಾರಿಗೆ ಮನವಿ ಮಾಡಿದರು. ಪ್ರವಾಸೋದ್ಯಮ ಇಲಾಖೆ ಅರ್ಜಿ ಕರೆದಾಗ ಸಲ್ಲಿಸಿ. ಹಿರಿತನ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

Advertisement

ಜವಾಹರ ನಗರದ ನಿವಾಸಿ ನಾರಾಯಣರಾವ್‌ ದೂರು ನೀಡಿ, ಜವಾಹರ ನಗರ ಬಡಾವಣೆಯಲ್ಲಿ ಸ್ವತ್ಛತೆ ಮರೆಯಾಗಿದೆ. ನಗರಸಭೆ ಸ್ವತ್ಛತೆ ಕಾಪಾಡುತ್ತಿಲ್ಲ ಎಂದು ದೂರಿದರು. ಈ ಕುರಿತು ತಕ್ಷಣಕ್ಕೆ ಕ್ರಮ ಕೈಗೊಳ್ಳಲು ನಗರಸಭೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು. ವಿಕಲಚೇತನ ಅನಿಲ್‌ ತಾತ್ಕಾಲಿಕ ಹುದ್ದೆ ಒದಗಿಸುವಂತೆ ಮನವಿ ಮಾಡಿದರು. ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿ ಸರ್ಕಾರಿ ಹುದ್ದೆ ನೇಮಿಸುವಾಗ ಅಂಗವಿಕಲರಿಗೆ ಪ್ರತ್ಯೇಕ ಮೀಸಲಾತಿ ಸೌಲಭ್ಯ ಕಲ್ಪಿಸಲಾಗಿದೆ. ಅರ್ಜಿ ಆಹ್ವಾನಿಸಿದ ವೇಳೆ ಅರ್ಜಿ ಸಲ್ಲಿಸುವಂತೆ ತಿಳಿಸಿದರು.

ಅಪರ ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಯೋಜನಾಧಿಕಾರಿ ಈರಣ್ಣ ಬಿರಾದಾರ, ನಗರಸಭೆ ಪೌರಾಯುಕ್ತ ರಮೇಶ ನಾಯಕ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ|ಕಿರಣಕುಮಾರ, ಜಿಲ್ಲಾ ಆರೋಗ್ಯ ಮತ್ತು ಕಲ್ಯಾಣಾಧಿಕಾರಿ ಡಾ| ಎಂ.ಕೆ.ಎಸ್‌.ನಾಸೀರ್‌, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಮಹ್ಮದ್‌ ಇರ್ಫಾನ್‌ ಸೇರಿ ಇತರರಿದ್ದರು.

ಜನಸ್ಪಂದನ ಸಭೆ ಸಾರ್ವಜನಿಕರಿಗೆ ಉಪಯುಕ್ತವಾಗುವರೀತಿಯಲ್ಲಿ ಅಧಿಕಾರಿಗಳು ಕೆಲಸ ಮಾಡಬೇಕು.
 ಡಾ| ಬಗಾದಿಗೌತಮ್‌, ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next