ಮಂಡ್ಯ: ನಗರಸಭಾ ವ್ಯಾಪ್ತಿಯಲ್ಲಿ ಅಮೃತ್ ಯೋಜನೆಯಡಿ ಅನುಷ್ಠಾನವಾಗುತ್ತಿರುವ ಕುಡಿಯುವ ನೀರು ಕಾಮಗಾರಿಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಲು ಅಧಿಕಾರಿಗಳು ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಡಾ.ಪಿ.ಸಿ.ಜಾಫರ್ ತಿಳಿಸಿದರು.
ಬುಧವಾರ ಅಧಿಕಾರಿಗಳೊಂದಿಗೆ ಅಮೃತ್ ಯೋಜನೆಯ ಕಾಮಗಾರಿಗಳ ಪರೀಶೀಲನೆಗಾಗಿ ನಗರದ ಚಿಕ್ಕೆಗೌಡನ ದೊಡ್ಡಿ 1 ನೇ ಕ್ರಾಸ್, ಸ್ವರ್ಣಸಂದ್ರ, ಬಿ.ಸಿ ದಾಸೇಗೌಡ ರಸ್ತೆ ಮತ್ತು ಸಾಹುಕಾರ್ ಚನ್ನಯ್ಯ ಬಡಾವಣೆಗಳ ಕುಡಿಯುವ ನೀರಿನ ಕಾಮಗಾರಿ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ನಗರಸಭಾ ವ್ಯಾಪ್ತಿಯಲ್ಲಿ ಅಮೃತ್ ಯೋಜನೆಯಡಿ ಅನುಷ್ಠಾನವಾಗುತ್ತಿರುವ ಕುಡಿಯುವ ನೀರು ಕಾಮಗಾರಿಗಳ ಅನುಷ್ಠಾನದಲ್ಲಿ ವಿಳಂಬವಾಗುತ್ತಿದ್ದು, ಇದರಿಂದಾಗಿ ನಗರಸಭಾ ವತಿಯಿಂದ ಅನುಷ್ಠಾನವಾಗುತ್ತಿರುವ ನಗರೋತ್ಥಾನ ಯೋಜನೆ ರಸ್ತೆ ಕಾಮಗಾರಿಗಳ ಕುಡಿಯುವ ನೀರಿನ ಪೈಪ್‌ಲೈನ್ ಕಾಮಗಾರಿ ಶೀಘ್ರ ಪೂರ್ಣಗೊಳಿಸುವಂತೆ ಸೂಚಿಸಿದರು.
ಶೀಘ್ರ ಮುಗಿಸದಿದ್ದರೆ ಮೊಕದ್ದಮೆ: ಅಮೃತ್ ಯೋಜನೆಯ ಕಾಮಗಾರಿಗಳನ್ನು ಶೀಘ್ರದಲ್ಲಿ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಹಾಗೂ ಅಧಿಕಾರಿಗಳಿಗೆ ಸೂಚಿಸಿದರು. ಕಾಮಗಾರಿ ಪ್ರಗತಿಯನ್ನು ಹೆಚ್ಚಿಸಲು ಹೆಚ್ಚುವರಿ ಮಾನವ ಸಂಪನ್ಮೂಲ ಬಳಕೆ ಮಾಡಲು ಅಧಿಕಾರಿಗಳಿಗೆ ಹಾಗೂ ಟೆಂಡರ್‌ದಾರರರಿಗೆ ನಿರ್ದೇಶನ ನೀಡಿದ ಜಿಲ್ಲಾಧಿಕಾರಿಗಳು ಕಾಮಗಾರಿ ವಿಳಂಬ ಮಾಡಿದ್ದಲ್ಲಿ ಗುತ್ತಿಗೆದಾರರ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಆದೇಶಿಸಿದರು.
ರಸ್ತೆಗಳ ಪರಿಶೀಲನೆ: ನಗರದ ನೂರಡಿ ರಸ್ತೆಯಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿ ಪರಿಶೀಲಿಸಿದ ಜಿಲ್ಲಾಧಿಕಾರಿ ಗುತ್ತಿಗೆದರಾದ ಹೆಚ್.ಪಿ.ರವಿಕುಮಾರ್ ಅವರಿಗೆ ಈ ಭಾನುವಾರದ ಅಂತ್ಯದೊಳಗೆ ಒಂದು ಬದಿಯ ರಸ್ತೆಯ ಡಾಂಬರೀಕರಣ ಮಾಡುವಂತೆ ತಿಳಿಸಿದ ಅವರು, ನಗರದ ಮರೀಗೌಡ ಬಡವಾಣೆಯ ಒಂದನೇ ಅಡ್ಡ ರಸ್ತೆಯ ಪರಿಶೀಲಿಸಿ ಎರಡು ದಿನಗಳೊಳಗೆ ಡಾಂಬರೀಕರಣ ಮಾಡುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ನಗರಾಭಿವೃಧ್ಧಿ ಕೋಶದ ಯೋಜನಾ ನಿರ್ದೇಶಕ ಲೋಕನಾಥ್, ನಗರಾಭಿವೃಧ್ಧಿ ಕೋಶದ ಕಾರ್ಯಪಾಲಕ ಅಭಿಯಂತರ ಪ್ರತಾಪ್, ನಗರಸಭೆ ಪೌರಾಯುಕ್ತ ವಿಜಯ್ ಹಾಗೂ ನಗರಸಭೆಯ ನೀರು ಸರಬರಾಜು ಮಂಡಳಿ ಎಂಜಿನಿಯರ್‌ಗಳು ಹಾಜರಿದ್ದರು.