Advertisement

ಮಾವಿನಕೆರೆ ಒತ್ತುವರಿ ತೆರವುಗೊಳಿಸಿ: ಅಭಿವೃದ್ಧಿ ಕುರಿತ ಸಭೆಯಲ್ಲಿ ಡಿಸಿ ಸೂಚನೆ

05:29 PM Sep 16, 2022 | Team Udayavani |

ರಾಯಚೂರು: ಐತಿಹಾಸಿಕ ಮಾವಿನ ಕೆರೆಯನ್ನು ಸಾಕಷ್ಟು ಒತ್ತುವರಿ ಮಾಡಿಕೊಂಡಿದ್ದು, ಕೂಡಲೇ ಸರ್ವೇ ಕೈಗೊಂಡು ತೆರವು ಕಾರ್ಯಾಚರಣೆ ನಡೆಸಬೇಕು ಜಿಲ್ಲಾಧಿಕಾರಿ ಎಲ್‌.ಚಂದ್ರಶೇಖರ್‌ ನಾಯಕ ಸೂಚಿಸಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಮಾವಿನಕೆರೆ ಅಭಿವೃದ್ಧಿ ಕುರಿತು ನಡೆದ ಸಭೆಯಲ್ಲಿ ಮಾತನಾಡಿ, ನಗರಸಭೆ ಮತ್ತು ನಗರಾಭಿವೃದ್ಧಿ ಪ್ರಾಧಿಕಾರ 15 ದಿನಗಳಲ್ಲಿ ಕೆರೆ ಒತ್ತುವರಿ ಮತ್ತು ಹದ್ದುಬಸ್ತು ಮಾಹಿತಿ ನೀಡಬೇಕು. ಅಲ್ಲದೆ, ಒತ್ತುವರಿ ತೆರವು ಕಾರ್ಯಾಚರಣೆಯನ್ನು ಒಟ್ಟಾಗಿಯೇ ಮಾಡಬೇಕು. ರಾಯಚೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು. ಕೆರೆ ಅಭಿವೃದ್ಧಿಗಾಗಿ ಮೀಸಲಿರುವ 9 ಕೋಟಿ ರೂ. ಅನುದಾನ ವೆಚ್ಚಕ್ಕಾಗಿ ಕ್ರಿಯಾ ಯೋಜನೆ ಮತ್ತು ಮಾದರಿ ನೀಲನಕ್ಷೆ ಸಿದ್ಧಪಡಿಸಬೇಕು. ಮೊದಲ ಹಂತದ ಕಾಮಗಾರಿ ಕೈಗೊಳ್ಳುವಂತೆ ಒತ್ತಾಯಿಸಿದರು.

ಕೆರೆ ಪ್ರವೇಶಕ್ಕೆ ಮೂರು ಭಾಗಗಳಲ್ಲಿ ಪ್ರವೇಶ ದ್ವಾರಗಳು, ವಿದ್ಯುದ್ದೀಪಗಳು ಮತ್ತು ಆಕರ್ಷಕವಾಗುವ ರೀತಿಯಲ್ಲಿ ಏನು ಬೇಕು ಎಂಬುದನ್ನು ನೀಲನಕ್ಷೆಯಲ್ಲಿ ಸೇರಿಸಿಕೊಳ್ಳಬೇಕು. ಈ ಬಗ್ಗೆ ಪ್ರಾತ್ಯಕ್ಷಿಕೆ ಸಿದ್ಧಪಡಿಸಿ ವಿವರಿಸುವಂತೆ ತಿಳಿಸಿದರು.

ಪೌರಾಯುಕ್ತ ಗುರುಲಿಂಗಪ್ಪ ಮಾತನಾಡಿ, ಮಾವಿನಕೆರೆ ಒತ್ತುವರಿಯಾಗಿರುವ ಕುರಿತು ಸರ್ವೇ ಮಾಡಿದ್ದು, ಮೊದಲ ಹಂತದಲ್ಲಿ ನಡೆದ ಸರ್ವೇಯಲ್ಲಿ 7.37 ಎಕರೆ ಒತ್ತುವರಿ ಕಂಡು ಬಂದಿದೆ. ಹದ್ದುಬಸ್ತುಗಳನ್ನು ಗುರುತಿಸಲಾಗಿದೆ. ಆದರೆ, ಒತ್ತುವರಿ ತೆರವು ಕಾರ್ಯಾಚರಣೆ ಮಾಡಿರುವುದಿಲ್ಲ. ನಗರಾಭಿವೃದ್ಧಿ ಪ್ರಾಧಿಕಾರದ ಪ್ರಭಾರ ಆಯುಕ್ತ ಜಯಪಾಲರೆಡ್ಡಿ ಮಾತನಾಡಿ, ಮಾವಿನಕೆರೆ ಉದ್ಯಾನವನದಿಂದ ಪ್ರತಿ ವರ್ಷ ಒಂದು ಕೋಟಿ ರೂ. ಶುಲ್ಕ ಸಂಗ್ರಹವಾಗುತ್ತಿದೆ. ಈ ಶುಲ್ಕವನ್ನು ಉದ್ಯಾನವನದ ನಿರ್ವಹಣೆಗೆ ಬಳಸಲಾಗುತ್ತಿದೆ ಎಂದರು.

ನಗರಾಭಿವೃದ್ಧಿ ಕೋಶದ ಯೋಜನಾಧಿ ಕಾರಿ ಮಹೇಂದ್ರ ಕುಮಾರ್‌, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್‌ ಶಫಿ, ವಿವಿಧ ಇಲಾಖೆಗಳ ಅಧಿಕಾರಿಗಳಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next