Advertisement

ರಾಗಿ, ಭತ್ತ ಖರೀದಿ ಕೇಂದ್ರ ಸ್ಥಾಪನೆಗೆ ಡೀಸಿ ಸೂಚನೆ

02:53 PM Dec 07, 2019 | Suhan S |

ರಾಮನಗರ: ಕನಿಷ್ಠ ಬೆಂಬಲ ಬೆಲೆಯೋಜನೆಯಡಿ ಜಿಲ್ಲೆಯಲ್ಲಿ ಬೆಳೆದಿರುವ ರಾಗಿ ಮತ್ತು ಭತ್ತ ಖರೀದಿ ಮಾಡಲು ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಎಂ.ಎಸ್‌. ಅರ್ಚನಾ ಅವರು ಅಧಿಕಾರಿಗಳಿಗೆ ಸೂಚನೆನೀಡಿದರು.

Advertisement

ನಗರದ ಜಿಲ್ಲಾ ಕಚೇರಿಗಳ ಸಂಕಿರ್ಣದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ, ಜಿಲ್ಲಾ ಟಾಸ್ಕ್ ಫೋರ್ಸ್‌ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮಧ್ಯವರ್ತಿಗಳ ಹಾವಳಿ ತಪ್ಪಿಸಿ, ರೈತರಿಗೆ ನೇರವಾಗಿ ಸರ್ಕಾರದ ಸವಲತ್ತು ತಲುಪುವಂತೆ ಎಚ್ಚರವಹಿಸಿ ಎಂದರು.

ಕೇಂದ್ರ ಸರ್ಕಾರ ಒಂದು ಕ್ವಿಂಟಲ್‌ ಸಾಮಾನ್ಯ ಭತ್ತಕ್ಕೆ ರೂ.1,815, ಗ್ರೇಡ್‌ ಎ ಭತ್ತಕ್ಕೆ ರೂ. 1,835 ಹಾಗೂ ರಾಗಿಗೆ ರೂ. 3,150 ನಿಗದಿ ಮಾಡಿದೆ. ರಾಗಿ ಮತ್ತು ಭತ್ತ ಖರೀದಿ ಕೇಂದ್ರಗಳನ್ನು ಜಿಲ್ಲೆಯ ನಾಲ್ಕೂ ತಾಲೂಕು ಕೇಂದ್ರಗಳಲ್ಲಿ ತೆರೆಯುವಂತೆ ಮತ್ತು ಆಯಾ ತಾಲೂಕು ತಹಶೀಲ್ದಾರ್‌ ನೋಡಲ್‌ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುವಂತೆ ಸೂಚಿಸಿದರು. ರಾಗಿ ಮತ್ತು ಭತ್ತ ಖರೀದಿಗೆ ಮೊದಲು ರೈತರಿಂದ ಅವಶ್ಯಕವಿರುವ ಬ್ಯಾಂಕ್‌ ಖಾತೆಗಳ ವಿವರ, ಆರ್‌ಟಿಸಿ, ಬೆಳೆ ದೃಢೀಕರಣ ಪತ್ರ, ಮೊಬೈಲ್‌ ಸಂಖ್ಯೆ ಹಾಗೂ ಇನ್ನಿತರೆ ದಾಖಲೆಗಳನ್ನು ಸಂಬಂಧಿಸಿದ ದಾಕಲೆಗಳನ್ನು ಸಂಗ್ರಹಿಸಿಕೊಳ್ಳಿ ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.

ರೈತರು ತಮ್ಮ ಕಾರ್ಯ ನಿರ್ವಹಿಸುತ್ತಿರುವ ಮೊಬೈಲ್‌ ಸಂಖ್ಯೆ ಕೊಡುವಂತೆ ಅಧಿಕಾರಿಗಳು ತಾಖೀತು ಮಾಡಬೇಕು. ಅವಶ್ಯವಿದ್ದರೆ ರೈತರನ್ನು ಸಂಪರ್ಕಿಸಲು ಮೊಬೈಲ್‌ ಸಂಖ್ಯೆ ಬೇಕಾಗಿದೆ. ಖರೀದಿ ಹಣವನ್ನು ಆರ್‌ಟಿಜಿಎಸ್‌ ಮೂಲಕ ಬ್ಯಾಂಕ್‌ ಖಾತೆಗಳಿಗೆ ವರ್ಗಾಯಿಸಲಾಗುತ್ತದೆ ಎಂಬುದರ ಬಗ್ಗೆಯೂ ರೈತರಿಗೆ ಮಾಹಿತಿ ಕೊಡಿ ಎಂದು ಹೇಳಿದರು.

ಕೂಪನ್‌ ವ್ಯವಸ್ಥೆ: ಆಹಾರ ಇಲಾಖೆಉಪನಿರ್ದೇಶಕ ಕೃಷ್ಣಕುಮಾರ್‌ ಮಾತನಾಡಿ, ಕಳೆದ ಸಾಲಿನಲ್ಲಿ ರೈತರಿಂದ ಬೆಂಬಲ ಬೆಲೆ ಯೋಜನೆಯಡಿ 5,192 ಕ್ವಿಂಟಲ್‌ ಭತ್ತ ಹಾಗೂ 1,20,000 ಕ್ವಿಂಟಲ್‌ ರಾಗಿಯನ್ನು ಖರೀದಿಸಲಾಗಿದೆ. ಈ ಬಾರಿ ರೈತರನ್ನು ಖರೀದಿ ಕೇಂದ್ರದ ಮುಂದೆ ಕಾಯಿಸದೆ ಕೂಪನ್‌ ವ್ಯವಸ್ಥೆ ಮಾಡಲು ಉದ್ದೇಶಿಸಲಾಗಿದೆ. ರೈತರಿಂದ ಭತ್ತ ಹಾಗೂ ರಾಗಿಯ ಸ್ಯಾಂಪಲ್‌ ಪಡೆದು ಅದರ ಗುಣಮಟ್ಟವನ್ನು ಪರೀಕ್ಷಿಸಿ ನಂತರ ಖರೀದಿಸಲಾಗುವುದು ಎಂದರು. ಸಭೆಯಲ್ಲಿ ಜಂಟಿ ಕೃಷಿ ನಿರ್ದೇಶಕರು, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next