Advertisement

ಡೆಂಘೀ ನಿಯಂತ್ರಣಕ್ಕೆ ಡಿಸಿ ಸೂಚನೆ

01:15 PM Aug 05, 2017 | |

ಕಲಬುರಗಿ: ಜಿಲ್ಲೆಯಲ್ಲಿ ಡೆಂಘೀ ಪ್ರಕರಣ ತಗ್ಗಿಸಲು ಸೊಳ್ಳೆಗಳ ಸಂತಾನೋತ್ಪತ್ತಿ, ವಯಸ್ಕ ಸೊಳ್ಳೆಗಳ ನಿಯಂತ್ರಣವೇ ಮಾರ್ಗವಾಗಿದ್ದು, ಮಹಾನಗರ ಪಾಲಿಕೆ ಮತ್ತು ಆರೋಗ್ಯ ಇಲಾಖೆ ಹೆಚ್ಚಿನ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸುವಂತೆ ಜಿಲ್ಲಾಧಿಕಾರಿ ಆರ್‌. ವೆಂಕಟೇಶಕುಮಾರ
ಸೂಚಿಸಿದರು.

Advertisement

ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಡೆಂಘೀ ನಿಯಂತ್ರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸೊಳ್ಳೆಗಳ ಸಂತಾನೋತ್ಪತ್ತಿ ತಡೆಗೆ ಆರೋಗ್ಯ ಇಲಾಖೆ ನಗರದಲ್ಲಿ ಸ್ವತ್ಛತೆ ಮತ್ತು ಜಾಗೃತಿ ಮೂಡಿಸಬೇಕು. ಮಹಾನಗರ ಪಾಲಿಕೆ ಈ ನಿಟ್ಟಿನಲ್ಲಿ ಜವಾಬ್ದಾರಿ ವಹಿಸಬೇಕು ಎಂದು ಹೇಳಿದರು. ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತರು, ಮಹಾನಗರ ಪಾಲಿಕೆ ಸಿಬ್ಬಂದಿಗಳನ್ನೊಳಗೊಂಡ ತಂಡ ರಚಿಸಿ ನಗರದ ಪ್ರತಿ ಮನೆಗೂ ಭೇಟಿ ನೀಡಿ ಸೊಳ್ಳೆಗಳು ಸಂತಾನೋತ್ಪತ್ತಿ ಮಾಡುವ ಸ್ಥಳ ಗುರುತಿಸಿ ಅವುಗಳನ್ನು ನಾಶಪಡಿಸಬೇಕು. ಮನೆಯಲ್ಲಿ ಸಂಗ್ರಹಿಸುವ ಕುಡಿಯುವ ನೀರಿನಲ್ಲಿ ಸೊಳ್ಳೆಗಳು ಉತ್ಪತ್ತಿಯಾಗದಂತೆ ಟೆಮಿಫಾಸ್‌ ಲಾರ್ವಾ ನಾಶಕ  ಸಿಂಪಡಿಸಬೇಕು ಎಂದು ಸಲಹೆ ನೀಡಿದರು.

ವಯಸ್ಕ ಸೊಳ್ಳೆಗಳನ್ನು ನಿಯಂತ್ರಿಸಲು ಮಹಾನಗರ ಪಾಲಿಕೆ ಮತ್ತು ಆರೋಗ್ಯ ಇಲಾಖೆಯಿಂದ ವಾರ್ಡ್‌ವಾರು ಧೂಮೀಕರಣ ಹಮ್ಮಿಕೊಳ್ಳಬೇಕು. ಮಹಾನಗರ ಪಾಲಿಕೆ ನಗರದ ಒಂದೂ ಮನೆ ಬಿಡದೆ ಸ್ವತ್ಛತೆ ಮತ್ತು ಜಾಗೃತಿ ಕೈಗೊಳ್ಳಬೇಕು. ಇದಕ್ಕಾಗಿ ಕ್ರಿಯಾ ಯೋಜನೆ ರೂಪಿಸಬೇಕು. ವೈದ್ಯಕೀಯ, ಎಂ.ಎಸ್‌.ಡಬ್ಲ್ಯೂ, ಪ್ಯಾರಾ ಮೆಡಿಕಲ್‌, ನರ್ಸಿಂಗ್‌ ವಿದ್ಯಾರ್ಥಿಗಳ ಸಹಾಯ ಪಡೆದು ತಂಡಗಳನ್ನು ರಚಿಸಿ ಈ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದು ಸೂಚಿಸಿದರು.

ನಗರದಲ್ಲಿರುವ ಹೋಟೆಲ್‌, ಬೀದಿ ವ್ಯಾಪಾರಿಗಳು ತಮ್ಮ ಪರಿಸರ ಸ್ವತ್ಛವಾಗಿ ಇಟ್ಟುಕೊಳ್ಳಬೇಕು. ಯಾವುದೇ ಕಾರಣಕ್ಕೂ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕು. ಮಹಾನಗರ ಪಾಲಿಕೆಯ ಸ್ವತ್ಛತಾ ತಂಡಗಳು ಭೇಟಿ ನೀಡಿದ ಸಂದರ್ಭದಲ್ಲಿ ಸ್ವತ್ಛತೆ ಕಂಡು ಬರದಿದ್ದರೆ ಅಂಥಹ ಹೋಟೆಲ್‌ ಮತ್ತು ಬೀದಿ ವ್ಯಾಪಾರಿಗಳಿಗೆ ದಂಡ ವಿಧಿ ಸಲಾಗುವುದು. ಕಟ್ಟಡ ನಿರ್ಮಾಣ ಸ್ಥಳಗಳಲ್ಲಿಯೂ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ| ಶಿವರಾಜ ಸಜ್ಜನಶೆಟ್ಟಿ, ಸರ್ವೇಕ್ಷಣಾ  ಅಧಿಕಾರಿ ಡಾ| ಶಿವಶರಣಪ್ಪ, ಜಿಲ್ಲಾ ಮಲೇರಿಯಾ
ಅಧಿಕಾರಿ ಡಾ| ಬಿ.ಎಸ್‌. ಗುಳಗಿ, ನಗರ ಆರೋಗ್ಯ ಕೇಂದ್ರಗಳ ವೈದ್ಯಾಧಿ ಕಾರಿಗಳು, ಮಹಾನಗರ ಪಾಲಿಕೆ ಅಧಿಕಾರಿಗಳು, ಹೋಟೆಲ್‌ ಸಂಘದ ಪದಾಧಿಕಾರಿಗಳು ಹಾಗೂ ಮತ್ತಿತರರು ಹಾಜರಿದ್ದರು.

Advertisement

ಸಹಾಯವಾಣಿಗೆ ಸಂಪರ್ಕಿಸಿ
ಯಾರಿಗಾದರೂ ಜ್ವರ ಕಂಡು ಬಂದಲ್ಲಿ ಅದು ಡೆಂಘೀ ಎಂದು ಭಾವಿಸಿ ಸಾರ್ವಜನಿಕರು ಭಯಭೀತರಾಗಬಾರದು. ಆರೋಗ್ಯ ಇಲಾಖೆಯ ಸರ್ವಲೆನ್ಸ್‌ ಕಚೇರಿಯಲ್ಲಿ ಸ್ಥಾಪಿಸಲಾಗಿರುವ 9449843258 ಸಹಾಯವಾಣಿ ಸಂಖ್ಯೆಗೆ ಸಂಪರ್ಕಿಸಿ. ಅಂಥವರ ರಕ್ತ ತಪಾಸಣೆ ಕೈಗೊಂಡು ಚಿಕಿತ್ಸೆ ನೀಡಲಾಗುವುದು. ನಗರದಲ್ಲಿರುವ ವೈದ್ಯಕೀಯ ಬೋಧನಾ ಆಸ್ಪತ್ರೆಗಳಲ್ಲಿ ದಾಖಲಾಗುವ ಕಡು ಬಡವರಿಗೆ ಪ್ಲೇಟ್‌ ಲೆಟ್‌ ಅವಶ್ಯಕವಾಗಿ ಬೇಕಾದ ಸಂದರ್ಭದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ನೀಡುವ ವ್ಯವಸ್ಥೆ ಮಾಡಲಾಗುವುದು. 
ಆರ್‌. ವೆಂಕಟೇಶಕುಮಾರ, ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next