ಚಿಕ್ಕಮಗಳೂರು: ಪರಿಭಾವಿತ (ಡೀಮ್ಡ್) ಅರಣ್ಯ ಪ್ರದೇಶಗಳ ಸ್ಥಳ ಪರಿಶೀಲಿಸಿ ಸರ್ವೇ ಮಾಡಿ ವರದಿ ಸಲ್ಲಿಸಿ ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೆ.ಎನ್. ರಮೇಶ್ ತಿಳಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದಪರಿಭಾವಿತ (ಡೀಮ್ಡ್) ಅರಣ್ಯ ಪ್ರದೇಶ ಕುರಿತ ವಿಷಯ ಸಲ್ಲಿಕೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಾಜ್ಯ ಸರ್ಕಾರವು ಪರಿಭಾವಿತ (ಡೀಮ್ಡ್) ಅರಣ್ಯಗಳ ಬಗ್ಗೆ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿ ಸಾರ್ವಜನಿಕರ ಹಿತದೃಷ್ಟಿಯಿಂದ ಪರಿಷ್ಕೃತ ವರದಿ ಸಲ್ಲಿಸುವಂತೆ ನಿರ್ದೇಶನ ನೀಡಿದ್ದು, ಜಿಲ್ಲೆಯಲ್ಲಿ ಪರಿಭಾವಿತ (ಡೀಮ್ಡ್) ಅರಣ್ಯ ಪ್ರದೇಶಗಳ ಪಟ್ಟಿಯಲ್ಲಿ ಗೊಂದಲಗಳಿದ್ದಲ್ಲಿ ಶೀಘ್ರವೇ ಬಗೆಹರಿಸಿ ವರದಿ ಸಲ್ಲಿಸಬೇಕು ಎಂದ ಅವರು, ರಾಜ್ಯ ಸರ್ಕಾರವು ಸುಪ್ರೀಂಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಬೇಕಿದ್ದು, ಪರಿಭಾವಿತ ಅರಣ್ಯ-2 ಪಟ್ಟಿಯನ್ನು ಪರಿಶೀಲಿಸಿ ಪರಿಷ್ಕೃತ ವಿವರ ಸಲ್ಲಿಸುವಂತೆ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಚಿಕ್ಕಮಗಳೂರು ವಿಭಾಗದಲ್ಲಿ ಕೆಲವು ಪ್ರದೇಶಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಮ್ಯುಟೇಷನ್ ವಿಚಾರದ ಬಗ್ಗೆ ಚರ್ಚೆ ನಡೆಸಲಾಯಿತು. ಅಪರ ಜಿಲ್ಲಾಧಿಕಾರಿ ಬಿ.ಆರ್. ರೂಪ, ಉಪವಿಭಾಗಾಧಿಕಾರಿ ಡಾ| ಎಚ್.ಎಲ್. ನಾಗರಾಜ್, ತಹಶೀಲ್ದಾರ್ ಡಾ| ಕೆ.ಜೆ. ಕಾಂತರಾಜ್, ಕೊಪ್ಪ ಉಪ ಅರಣ್ಯ ಸಂರಕ್ಷಣಾಧಿಕಾರಿ ನೀಲೇಶ್ ಶಿಂಧೆ ಇತರರು ಇದ್ದರು.