Advertisement

ಗ್ರಾಪಂ ಚುನಾವಣೆ : ನಿಷ್ಪಕ್ಷಪಾತ ಕಾರ್ಯನಿರ್ವಹಿಸಿ

01:34 PM Nov 20, 2020 | Suhan S |

ಚಾಮರಾಜನಗರ: ಮುಂಬರುವ ಗ್ರಾಮ ಪಂಚಾಯಿತಿ ಚುನಾವಣೆಯನ್ನು ಜಿಲ್ಲೆಯಲ್ಲಿ ಪಾರದರ್ಶಕ ಮುಕ್ತ ಹಾಗೂ ನಿಷ್ಪಕ್ಷಪಾತವಾಗಿ ನಿರ್ವಹಿಸಲು ಅಧಿಕಾರಿಗಳು ಸನ್ನದ್ಧರಾಗಬೇಕಿದ್ದು ಅಗತ್ಯ ಪೂರ್ವ ಸಿದ್ಧತಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ ಡಾ.ಎಂ.ಆರ್‌. ರವಿ ಸೂಚಿಸಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗ್ರಾಮ ಪಂಚಾಯಿತಿ ಚುನಾವಣಾ ಸಂಬಂಧ ಪೂರ್ವ ಸಿದ್ಧತಾ ಕ್ರಮಗಳ ಕುರಿತು ಗುರುವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಕೋವಿಡ್‌ ಹಿನ್ನಲೆಯಲ್ಲಿ ಚುನಾವಣೆ ಸಂದರ್ಭದಲ್ಲಿ ಅನುಸರಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಚುನಾವಣಾ ಆಯೋಗವು ಪ್ರಮಾಣಿತಕಾರ್ಯನಿರ್ವಹಣಾ ಪದ್ಧತಿ (ಎಸ್‌ಒಪಿ) ರಚಿಸಿದೆ. ಇದರ ಮಾರ್ಗಸೂಚಿಗಳನ್ನು ಕಡ್ಡಾಯವಾಗಿಪಾಲಿಸಬೇಕು. ಚುನಾವಣಾ ತರಬೇತಿ,ಕಾರ್ಯನಿರ್ವಹಣೆ, ಚುನಾವಣಾ ಪ್ರಚಾರ, ಮಸ್ಟರಿಂಗ್‌, ಡಿ ಮಸ್ಟರಿಂಗ್‌, ಮತದಾನ, ಎಣಿಕಾ ಕೇಂದ್ರ ಸೇರಿದಂತೆ ಹಲವಾರು ಹಂತಗಳಲ್ಲಿ ಕೋವಿಡ್‌ ಮಾರ್ಗಸೂಚಿಗಳನ್ನು ಅನುಸರಿಸಬೇಕು ಎಂದರು.

ನಿರ್ಲಕ್ಷ್ಯ ಬೇಡ: ಚುನಾವಣಾ ಕೆಲಸವನ್ನು ಹಗುರವಾಗಿ ಪರಿಗಣಿಸುವಂತಿಲ್ಲ. ಚುನಾವಣೆ ಘೋಷಣೆಯಾಗಿ  ನಂತರ ಮಾದರಿ ನೀತಿ ಸಂಹಿತೆಯನ್ನು ಅತ್ಯಂತ ಕಟ್ಟುನಿಟ್ಟಾಗಿ ಪಾಲಿಸ ಬೇಕಾಗುತ್ತದೆ. ಚುನಾವಣಾ ಕರ್ತವ್ಯಕ್ಕಾಗಿ ನಿಯೋಜಿತರಾಗಿರುವ ಅಧಿಕಾರಿ ಸಿಬ್ಬಂದಿ ಯಾವುದೇ ನಿರ್ಲಕ್ಷ್ಯ ವಹಿಸಬಾರದು, ಚುನಾವಣಾ ಕೆಲಸಗಳಿಗಾಗಿ ನೀಡಲಾಗುವ ನಿರ್ದೇಶನ, ಸೂಚನೆಗಳನ್ನು ಹೊಣೆಗಾರಿಕೆಯಿಂದ ಅನುಸರಿಸಬೇಕು. ಇಲ್ಲವಾದಲ್ಲಿ ಗಂಭೀರ ಕ್ರಮಕ್ಕೆ ಗುರಿಯಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಮೂಲಸೌಕರ್ಯ: ಜಿಲ್ಲೆಯಲ್ಲಿ ಸ್ಥಾಪಿಸಲಾಗುತ್ತಿರುವ ಮತಗಟ್ಟೆಗಳಿಗೆ ತಹಶೀಲ್ದಾರರು, ತಾಲೂಕು ಪಂಚಾಯತಿ ಇಒ, ಆಯಾ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗಳೊಂದಿಗೆ ಭೇಟಿ ನೀಡಿ ಅಲ್ಲಿನ ಮೂಲ ಸೌಕರ್ಯ ಬಗ್ಗೆ ಪರಿಶೀಲಿಸಬೇಕು. ಮತಗಟ್ಟೆಯಲ್ಲಿ ವಿದ್ಯುತ್‌, ಕುಡಿಯುವ ನೀರು, ಶೌಚಾಲಯ, ಇತರೆ ಅಗತ್ಯ ಸೌಕರ್ಯಗಳು ಪೂರ್ಣಪ್ರಮಾಣದಲ್ಲಿ ಲಭ್ಯವಿದೆಯೇ ಎಂಬ ಬಗ್ಗೆ ಪರಿಶೀಲಿಸಿ ಖಾತರಿಪಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.

ಮತಗಟ್ಟೆ ಅಧಿಕಾರಿ, ಸಿಬ್ಬಂದಿಗೆ ಎರಡನೇ ಹಂತದ ಚುನಾವಣಾ ಕುರಿತ ತರಬೇತಿ ನೀಡಬೇಕು. ಮಸ್ಟರಿಂಗ್‌ ಡಿ ಮಸ್ಟರಿಂಗ್‌ ಕೇಂದ್ರಗಳು, ಮತ ಎಣಿಕೆ ಕೇಂದ್ರಗಳು, ಮತಗಟ್ಟೆಗಳಲ್ಲಿ ಕೋವಿಡ್‌ ಮುಂಜಾಗ್ರತಾ ಕ್ರಮವಾಗಿ ಸ್ಯಾನಿಟೈಸ್‌, ಮಾಸ್ಕ್ ಧರಿಸುವಿಕೆ, ಭೌತಿಕ ಅಂತರ ಕಾಪಾಡು ಕೊಳ್ಳುವಿಕೆ ಯಂತಹ ಪ್ರಮುಖ ಜವಾಬ್ದಾರಿಗಳೂ ಸೇರಿದಂತೆ ಇತರೆ ಅಗತ್ಯ ಸಿದ್ಧತೆಗಳನ್ನು ಯಾವುದೇ ಲೋಪಕ್ಕೆ ಅವಕಾಶವಾಗದಂತೆಕೈಗೊಳ್ಳಬೇಕೆಂದು ಡಾ. ರವಿ ತಿಳಿಸಿದರು.

Advertisement

ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್‌. ಆನಂದ್‌, ಉಪವಿಭಾಗಾಧಿಕಾರಿ ಡಾ. ಗಿರೀಶ್‌ ದಿಲೀಪ್‌ ಬಡೋಲೆ, ಡಿವೈಎಸ್‌ಪಿ ಪ್ರಿಯದರ್ಶಿನಿ, ಜಿಲ್ಲಾ ಲಸಿಕಾ ಅಧಿಕಾರಿ ವಿಶ್ವೇಶ್ವರಯ್ಯ, ಜಿಪಂ ಉಪ ‌ ಕಾರ್ಯದರ್ಶಿ ಧರಣೇಶ್‌, ತಹಶೀಲ್ದಾರರಾದ ನಂಜುಂಡಯ್ಯ, ಸುದರ್ಶನ್‌, ಕೆ. ಕುನಾಲ್‌, ಚಿದಾನಂದ ‌ ಗುರುಸ್ವಾಮಿ, ಚುನಾವಣಾ ಕಾರ್ಯಕ್ಕಾಗಿ ನಿಯೋಜನೆಗೊಂಡಿರುವ ನೋಡಲ್‌ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ಪ್ರತ್ಯೇಕ ಕಂಟ್ರೋಲ್‌ ರೂಂ ತೆರೆಯಿರಿ :  ಜಿಲ್ಲೆ ಮತ್ತು ತಾಲೂಕಿನಲ್ಲಿ ಪ್ರತ್ಯೇಕವಾಗಿ ಕಂಟ್ರೋಲ್‌ ರೂಂ ತೆರೆಯಬೇಕು. ಸೂಕ್ಷ್ಮ ಅತಿಸೂಕ್ಷ್ಮ ಮತಗಟ್ಟೆ ಗುರುತಿಸಿ ಪೊಲೀಸ್‌ ಇಲಾಖೆ ಬಂದೋಬಸ್ತ್ ತಯಾರಿ ಮಾಡಿ ಕೊಳ್ಳಬೇಕು. ನಿರ್ಭೀತಿಯಿಂದ ಚುನಾವಣೆ ನಡೆಯಲು ಎಲ್ಲಾ ರೀತಿಯ ಅಗತ್ಯ ಕ್ರಮ ಕೈಗೊಳ್ಳ ಬೇಕು. ಅಕ್ರಮ ಮದ್ಯ ಮಾರಾಟ, ಹಂಚಿಕೆ, ಸಾಗಣೆಗೆ ಅವಕಾಶವಾಗದಂತೆ ಅಬಕಾರಿ ಇಲಾಖೆ ಅಧಿಕಾರಿಗಳು ಕಂಟ್ರೋಲ್‌ ರೂಂ ಸ್ಥಾಪನೆ ಸಿಬ್ಬಂದಿ ನಿಯೋಜಿಸಬೇಕು ಎಂದು ಡಾ. ರವಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next