ಮಂಡ್ಯ: ಅಂತಿಮ ವರ್ಷದ ಪದವಿ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಲ್ಲಿ ಯಾರಿಗಾದರೂ ಕೋವಿಡ್ ಕಂಡು ಬಂದರೆ ಮನೆಯಲ್ಲಿಯೇ ಆನ್ ಲೈನ್ ಮೂಲಕ ತರಗತಿ ನಡೆಸಲುಕ್ರಮಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಕೋವಿಡ್ ಉಸ್ತುವಾರಿ ಮತ್ತು ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿ, ಭೌತಿಕ ತರಗತಿಗಳು ಪ್ರಾರಂಭವಾಗುವ ಹಿನ್ನೆಲೆಯಲ್ಲಿ ಪ್ರತಿ ಕೊಠಡಿಗಳಿಗೂ ಸ್ಯಾನಿಟೈಸರ್ ಸಿಂಪಡಿಸಿ ಹಾಗೂ ಪ್ರತಿ ವಿದ್ಯಾರ್ಥಿಗಳು ಆರೋಗ್ಯ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವಂತೆ ಅರಿವು ಮೂಡಿಸಿ ಎಂದು ತಿಳಿಸಿದರು.
ಮಾರ್ಗಸೂಚಿ ಬಿಡುಗಡೆ: ಉನ್ನತ ಶಿಕ್ಷಣ ಇಲಾಖೆಯಲ್ಲಿ ನ.17ರಿಂದ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳು ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಭೌತಿಕ ತರಗತಿ ನಡೆಸಲು ಸರ್ಕಾರದ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಆದ್ದರಿಂದ ಕಾಲೇಜಿನ ಹಂತದಲ್ಲಿ ಕೋವಿಡ್ ಬಗ್ಗೆ ಜಾಗೃತಿ ಮೂಡಿಸಲು ವಿದ್ಯಾರ್ಥಿಗಳಲ್ಲಿ3 ರೀತಿಯ ತಂಡವನ್ನು ರಚಿಸಿ, 15 ದಿನಕ್ಕೊಮ್ಮೆ ವಿದ್ಯಾರ್ಥಿಗಳಲ್ಲಿ ಕೆಮ್ಮು, ನೆಗಡಿ ಲಕ್ಷಣಗಳು ಕಂಡು ಬಂದರೆ ಪಿಪಿಇ ಕಿಟ್ ಧರಿಸಿ ಅವರನ್ನು ಪರೀಕ್ಷಿಸುವಂತೆ ಸೂಚಿಸಿದರು.
ವೇಳಾಪಟ್ಟಿ ಸಿದ್ಧಪಡಿಸಿಕೊಳ್ಳಿ: ಭೌತಿಕ ತರಗತಿ ನಡೆಸುವಾಗ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ ಹಾಗೂ ಕಾಲೇಜಿನಲ್ಲಿ ಲಭ್ಯವಿರುವ ಒಟ್ಟು ತರಗತಿ ಕೊಠಡಿಗಳ ಸಂಖ್ಯೆಗೆ ಅನುಗುಣವಾಗಿ ಆರೋಗ್ಯ ಇಲಾಖೆಯಿಂದ ಹೊರಡಿಸಲಾಗಿರುವ ಮತ್ತು ಪ್ರಸ್ತುತ ಮಾರ್ಗಸೂಚಿಗಳ ಪ್ರಕಾರ ದೈಹಿಕ ಅಂತರ ಕಾಪಾಡಿಕೊಂಡು ಸುರಕ್ಷಿತವಾಗಿ ತರಗತಿಗಳನ್ನು ನಡೆ ಸಲು ಅವಶ್ಯವಿರುವಂತೆ ತರಗತಿ ವೇಳಾಪಟ್ಟಿಯನ್ನು ಕಾಲೇಜಿನ ಹಂತದಲ್ಲೇ ಸಿದ್ಧಪಡಿಸಿಕೊಳ್ಳಿ ಎಂದರು.
ವಿದ್ಯಾರ್ಥಿ ನಿಲಯಗಳಲ್ಲಿ, ಸ್ನಾನದ ಕೊಠಡಿಗಳಲ್ಲಿ ಮತ್ತು ಇತರ ಸ್ಥಳಗಳಲ್ಲಿ ಜಾಗೃತಿ ಮೂಡಿಸುವಂಥ ಫಲಕಗಳನ್ನು ಹಾಕಬೇಕು. ವಿದ್ಯಾರ್ಥಿಗಳಲ್ಲಿ ಕೋವಿಡ್ ಕಂಡುಬಂದರೆ ಮನೆಯಲ್ಲೇ ಆನ್‌ಲೈನ್ ತರಗತಿಯಲ್ಲಿ ಹಾಜರಾಗುವಂತೆ ತಿಳಿಸಬೇಕು ಎಂದರು.
ಜಿಪಂ ಉಪಕಾರ್ಯದರ್ಶಿ ಎನ್ .ಡಿ.ಪ್ರಕಾಶ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಸಿದ್ದಲಿಂಗೇಶ್, ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಪುಪ್ಪಲತಾ ಮತ್ತು ಜಿಲ್ಲಾ ಲೀಡ್ ಕಾಲೇಜಿನ ಪ್ರಾಂಶುಪಾಲ ನಟರಾಜ್ ಹಾಜರಿದ್ದರು