Advertisement

ಮಳೆ ಅನಾಹುತ ಘಟಿಸಿದಾಗ ತ್ವರಿತ ಸ್ಪಂದನೆ

10:41 AM May 22, 2018 | Team Udayavani |

ಮಂಗಳೂರು: ಮಳೆಯಿಂದಾಗಿ ಎಲ್ಲೇ ಅನಾಹುತವಾದರೂ ಅಧಿಕಾರಿಗಳು ತ್ವರಿತವಾಗಿ ಸ್ಪಂದಿಸಬೇಕು. ಸ್ಪಂದಿಸದ ದೂರು ಬಂದಲ್ಲಿ ಸೂಕ್ತ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಶಶಿಕಾಂತ ಸೆಂಥಿಲ್‌ ಎಚ್ಚರಿಸಿದ್ದಾರೆ. 

Advertisement

ಸೋಮವಾರ ಮಳೆಗಾಲದ ಸಮಸ್ಯೆ ಎದುರಿಸಲು ಕರೆದ ಪೂರ್ವ ಸಿದ್ಧತೆ ಸಭೆಯಲ್ಲಿ ವಿವಿಧ ಇಲಾಖೆ ಅಧಿಕಾರಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು. 20 ವರ್ಷಗಳ ಇತಿಹಾಸ ಹಾಗೂ ಮಾಹಿತಿಯನ್ನು ಆಧರಿಸಿ ನೆರೆ ಉಂಟಾಗಬಹುದಾದ ಹಾಗೂ ಮುಳುಗಡೆ  ಪ್ರದೇಶಗಳ ಸಂಭವನೀಯ ಪಟ್ಟಿ ರಚಿಸಬೇಕು. ನೆರೆ ಸಂಭವಿಸಿದಲ್ಲಿ ಜನರ ಸುರಕ್ಷಿತ ಸ್ಥಳಾಂತರ ಹಾಗೂ ಗಂಜಿ ಕೇಂದ್ರ ತೆರೆಯಲು ಶಾಲಾ ಕಟ್ಟಡ ಅಥವಾ ಸಮುದಾಯ ಭವನವನ್ನು ಗುರುತಿಸಿ ಸಿದ್ಧತೆ ಮಾಡಬೇಕು. ಗಂಜಿ ಕೇಂದ್ರ ಗಳಲ್ಲಿ ಕುಡಿಯುವ ನೀರು, ಶೌಚಾಲಯ ಹಾಗೂ ರಸ್ತೆ ವ್ಯವಸ್ಥೆ ಇರುವಂತೆ ನೋಡಿಕೊಳ್ಳಬೇಕು. ನೀರು ನಿಲುಗಡೆ, ನೆರೆ ಪ್ರದೇಶಗಳಿಗೆ ಮಕ್ಕಳು ತೆರಳದಂತೆ ಮುಂಜಾಗ್ರತೆ ಕೈಗೊಳ್ಳಿ ಎಂದರು. 

ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಹಾಗೂ ಕಟ್ಟಡ ಕಾಮಗಾರಿ ಗುತ್ತಿಗೆದಾರರಿಗೆ ಸೂಚನೆ ನೀಡಿ, ಸಾಂಕ್ರಾಮಿಕಗಳು ಹರಡದಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ರೋಗ ಬರದಂತೆ ತಡೆಯುವ ಕ್ರಮ ಕೈಗೊಳ್ಳಬೇಕು. ಮುನ್ನೆಚ್ಚರಿಕೆಗಳ ಪಟ್ಟಿ ಮಾಡಿ, ಕರಪತ್ರ ಹಂಚಬೇಕು. ಕಾಮಗಾರಿ ಗುತ್ತಿಗೆ ವಹಿಸಿಕೊಂಡವರು ಕಾಮಗಾರಿ ನಡೆಯುವಲ್ಲಿ ನೀರು ನಿಲ್ಲದಂತೆ ನೋಡಬೇಕು ಎಂದರು. 

ಅಪಾಯಕಾರಿ ಮರ ತೆರವು, ಭೂಕುಸಿತ ಸ್ಥಳ ಗುರುತಿಸಿ 
ಅಪಾಯಕಾರಿ ಮರಗಳಿದ್ದರೆ ಕಡಿಯಲು ಕ್ರಮ ಕೈಗೊಳ್ಳಬೇಕು. ಒಂದು ಮರ ಕಡಿದರೆ 10 ಸಸಿ ನೆಡುವ ಬಗ್ಗೆಯೂ ಗಮನ ಹರಿಸಬೇಕು. ಜೆಸಿಬಿ ನಿರ್ವಾಹಕರ ಸಂಪರ್ಕ ಸಂಖ್ಯೆ ಸಂಗ್ರಹಿಸಿ, ಭೂ ಕುಸಿತದಂಥ ಸಂದರ್ಭಗಳಲ್ಲಿ ಸಹಾಯ ಪಡೆಯಬೇಕು ಎಂದರು. 

ತುರ್ತು ಪರಿಹಾರ ಪಾವತಿಸಿ 
ಮಳೆ, ಗಾಳಿಯಿಂದ ಸೊತ್ತು ಹಾನಿ ಉಂಟಾದರೆ ಸಂಬಂಧಿತ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ತುರ್ತು ಪರಿಹಾರ ನೀಡಬೇಕು. ಜೀವ ಹಾನಿ ಸಂಭವಿಸಿದ್ದಲ್ಲಿ 24 ತಾಸುಗಳೊಳಗೆ ಪರಿಹಾರ ಪಾವತಿಸಬೇಕು ಎಂದರು. 

Advertisement

ಸಮುದ್ರ ಕೊರೆತ
ಸಮುದ್ರ ಕೊರೆತ ಪ್ರದೇಶಗಳ ನಿವಾಸಿಗಳಿಗೆ ಮುನ್ನೆಚ್ಚರಿಕೆ ನೀಡಬೇಕು. ಸಂತ್ರಸ್ತರಿಗೆ ಪರ್ಯಾಯ ಮನೆ, ನಿವೇಶನ ಸ್ಥಳ ಒದಗಿಸಬೇಕು. ಸುರಕ್ಷಿತ ಸ್ಥಳಗಳು, ಹಾನಿಯಾಗ ಬಹುದಾದ ಮನೆಗಳ ಸಮೀಕ್ಷೆ ಮಾಡಬೇಕು ಎಂದರು. 

ಮನಪಾ “ವಾರ್ಡ್‌ ಗ್ಯಾಂಗ್‌’ 
ಪಾಲಿಕೆ ಆಯುಕ್ತ ಮಹಮ್ಮದ್‌ ನಜೀರ್‌ ವಿವರಿಸಿ, ಪ್ರತೀ ವಾರ್ಡ್‌ನಲ್ಲೂ “ವಾರ್ಡ್‌ ಗ್ಯಾಂಗ್‌’ ಸಮಿತಿ ರಚನೆ ಮಾಡಲಾಗಿದೆ ಎಂದರು. ಅಪರ ಜಿಲ್ಲಾಧಿಕಾರಿ ವೈಶಾಲಿ, ಡಿಸಿಪಿ ಹನುಮಂತರಾಯ, ಜಿ.ಪಂ. ಸಿಇಒ ಡಾ| ಎಂ.ಆರ್‌. ರವಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ವಿಪತ್ತು ನಿರ್ವಹಣಾ ಘಟಕ ಕಂಟ್ರೋಲ್‌ ರೂಂ 1077
ಜಿಲ್ಲಾ ವಿಪತ್ತು ನಿರ್ವಹಣಾ ಘಟಕದ ಕಂಟ್ರೋಲ್‌ ರೂಂ ನಂಬರ್‌ 1077 ಆಗಿದ್ದು, ಜಿಲ್ಲೆಯ ಯಾವುದೇ ಭಾಗಗಳಿಂದ ಮಳೆ ಹಾನಿಯ ಕುರಿತಾಗಿನ ವಿಷಯಗಳನ್ನು ಈ ನಂಬರ್‌ಗೆ ಕರೆ ಮಾಡಿ ತಿಳಿಸಿದರೆ, ತುರ್ತು ಕ್ರಮಗಳನ್ನು ಕೈಗೊಳ್ಳಲಾಗುವುದು. ಕಂಟ್ರೋಲ್‌ ರೂಂನಲ್ಲಿದ್ದ ಸಿಬಂದಿ ಕೂಡಲೇ ಸಂಬಂಧಪಟ್ಟವರಿಗೆ ವಿಷಯ ತಿಳಿಸಿ, ಅಗತ್ಯ ಕ್ರಮ ಕೈಗೊಳ್ಳುತ್ತಾರೆ. ಪ್ರತೀ ತಾಲೂಕು ಕೇಂದ್ರಗಳಲ್ಲೂ ತಾಲೂಕು ಸಮಿತಿಗಳನ್ನು ಮಾಡಿ, ಸಮಸ್ಯೆಗಳ ಪರಿಹಾರಕ್ಕೆ ಸ್ಪಂದಿಸಲಾಗುವುದು.

Advertisement

Udayavani is now on Telegram. Click here to join our channel and stay updated with the latest news.

Next