Advertisement

ಬಸ್‌ ಸಂಚಾರವಿಲ್ಲದ ಊರಲ್ಲಿ ಡಿಸಿ ವಾಸ್ತವ್ಯ

04:26 PM Feb 17, 2021 | Team Udayavani |

ದಾವಣಗೆರೆ: ಇದೊಂದು ಪುಟ್ಟ ಊರು. ಜಿಲ್ಲಾ ಕೇಂದ್ರದಿಂದ ಬಲು ದೂರು. ಇನ್ನೂ ಸಾರಿಗೆ ಬಸ್‌ ಕಂಡಿಲ್ಲ ಈ ಊರು. ಇಲ್ಲಿಯ ಜನ ನಡೆಯಲೇ ಬೇಕು ಕನಿಷ್ಟ ಕಿಲೋಮೀಟರ್‌ ಮೂರು. ಮಕ್ಕಳ ಶಿಕ್ಷಣಕ್ಕೆ ತೊಂದರೆ ನೂರಾರು… ಇದು ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಆಯ್ಕೆ ಮಾಡಿಕೊಂಡಿರುವ ಜಗಳೂರು ತಾಲೂಕಿನ ಅಗಸನಹಳ್ಳಿ ಗ್ರಾಮಸ್ಥರ ದೂರು.

Advertisement

ಫೆ. 20ರಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿಯವರು ತಮ್ಮ ಊರಲ್ಲಿ “ಗ್ರಾಮ ವಾಸ್ತವ್ಯ’  ಮಾಡಲಿದ್ದಾರೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಬಸ್‌ ಕಾಣದ ಗ್ರಾಮಕ್ಕೆ ಬಸ್‌ ವ್ಯವಸ್ಥೆಯಾಗಬಹುದು, ಉತ್ತಮ ರಸ್ತೆ ನಿರ್ಮಾಣವಾಗಬಹುದು ಹಾಗೂ ಗ್ರಾಮದ ಮಕ್ಕಳ ಶಿಕ್ಷಣಕ್ಕೆ ವಿಶೇಷ ವ್ಯವಸ್ಥೆಯಾಗಬಹುದು ಎಂಬ ಗ್ರಾಮಸ್ಥರ ನಿರೀಕ್ಷೆಗಳು ಗರಿಗೆದರಿವೆ.

ಅಗಸನಹಳ್ಳಿ ಪರಿಚಯ: ಜಗಳೂರು ತಾಲೂಕು ಬಸವನಕೋಟೆ ಗ್ರಾಪಂ ವ್ಯಾಪ್ತಿಯ ಅಗಸನಹಳ್ಳಿ ಜಿಲ್ಲಾ ಕೇಂದ್ರದಿಂದ ಅಂದಾಜು 75 ಕಿಮೀ ದೂರದಲ್ಲಿರುವ ಗಡಿ ಗ್ರಾಮ. ಇಲ್ಲಿಂದ ತಾಲೂಕು ಕೇಂದ್ರ ಜಗಳೂರು 36 ಕಿಮೀ ದೂರದಲ್ಲಿದೆ. (ಕೇವಲ 20 ಕಿಮೀ ದೂರದಲ್ಲಿ ವಿಜಯನಗರ ಜಿಲ್ಲೆಯ ಕೊಟ್ಟೂರು ಇದೆ). ಅಂದಾಜು ಇಲ್ಲಿ 50-60 ಮನೆಗಳಿದ್ದು ಸರಾಸರಿ 300ರಷ್ಟು ಜನಸಂಖ್ಯೆ ಇದೆ. ಫೆ. 20ರಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿಯವರು ಗ್ರಾಮಕ್ಕೆ ಬರಲಿದ್ದು ಸ್ಥಳೀಯ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ನೂತನ ಯಾತ್ರಿ ನಿವಾಸದಲ್ಲಿ ವಾಸ್ತವ್ಯ ಮಾಡಲಿದ್ದಾರೆ. ಬೆಳಗ್ಗೆ 10 ಗಂಟೆಗೆ ಬಸವನಕೋಟೆ ಗ್ರಾಮ ಪಂಚಾಯಿತಿಯಲ್ಲಿ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಉದ್ಘಾಟನೆ ನಡೆಯಲಿದ್ದು, ಬಳಿಕ ಅಗಸನಹಳ್ಳಿ ಗ್ರಾಮಸ್ಥರ ಸಮಸ್ಯೆ, ಬೇಡಿಕೆಗಳಿಗೆ ಸ್ಪಂದಿಸಲಿದ್ದಾರೆ.

ಬಸ್‌ ಸಮಸ್ಯೆ: ಗ್ರಾಮಸ್ಥರನ್ನು ಕಾಡುತ್ತಿರುವ ಮುಖ್ಯ ಸಮಸ್ಯೆ ಎಂದರೆ ಸಾರಿಗೆ ಬಸ್‌ ಸಮಸ್ಯೆ. ಬಸ್‌ ಇಲ್ಲದೇ ಇರುವುದರಿಂದ ಇಲ್ಲಿಯ ಜನರು ನಿತ್ಯ ಮೂರು ಕಿ.ಮೀ. ದೂರ ನಡೆಯಲೇ ಬೇಕಾಗಿದೆ. ಇಲ್ಲಿಯ ಜನರು ಎಲ್ಲಿಗೇ ಹೋಗಬೇಕೆಂದರೂ ಮೂರು ಕಿಮೀ ದೂರದ ಬಸವನಕೋಟೆಗೆ ಹೋಗಬೇಕು. ಪ್ರಸ್ತುತ ಕೆಲವರು ಓಡಾಟಕ್ಕೆ ಬೈಕ್‌ನಂಥ ಸಣ್ಣ ವಾಹನಗಳನ್ನು ಅವಲಂಬಿಸಿದ್ದರೆ, ಬಡವರು ಸಂಚಾರಕ್ಕೆ ತಮ್ಮ ಕಾಲುಗಳನ್ನೇ ನಂಬಿಕೊಂಡಿದ್ದಾರೆ.

ಮಕ್ಕಳ ಶಿಕ್ಷಣಕ್ಕೆ ಸಮಸ್ಯೆ: ಗ್ರಾಮದಲ್ಲಿ ಕಿರಿಯ ಪ್ರಾಥಮಿಕ ಶಾಲೆ ಮಾತ್ರ ಇದ್ದು ಐದನೇ ತರಗತಿಯಿಂದ ಹಿಡಿದು ಮುಂದಿನ ಶಿಕ್ಷಣ ಪಡೆಯಲು ಇಲ್ಲಿಯ ಮಕ್ಕಳು ದೂರದ ಬಸವನಕೋಟೆ ಗ್ರಾಮಕ್ಕೆ ಹೋಗಬೇಕು. ಗ್ರಾಮದಲ್ಲಿ 25-30ಶಾಲಾ ಮಕ್ಕಳಿದ್ದಾರೆ. ಕೆಲವರು ತಮ್ಮ ಮಕ್ಕಳನ್ನು ಬೇರೆ ಊರಲ್ಲಿರುವ ಸಂಬಂಧಿಕರ ಮನೆಯಲ್ಲಿರಿಸಿ ಓದಿಸುತ್ತಿದ್ದರೆ, ಮತ್ತೆ ಕೆಲವರು ಮಕ್ಕಳಿಗೆ ಹಾಸ್ಟೆಲ್‌ನಲ್ಲಿಟ್ಟು ಓದಿಸುತ್ತಿದ್ದಾರೆ.

Advertisement

ಅನೇಕರು ನಡೆದುಕೊಂಡು ಹೋಗುವ ಕಾರಣ ಕ್ಕಾಗಾಗಿಯೇ ಅರ್ಧಕ್ಕೆ ಶಾಲೆ ಬಿಡುತ್ತಿದ್ದು ಇದರಲ್ಲಿ ಹೆಣ್ಣುಮಕ್ಕಳ ಸಂಖ್ಯೆಯೇ ಅಧಿಕವಾಗಿದೆ. ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ ಕಾರ್ಯಕ್ರಮದಿಂದ ಗ್ರಾಮಕ್ಕೆ ಬಸ್‌ ವ್ಯವಸ್ಥೆಯ ಜತೆಗೆ ಹತ್ತಿರದ ಹಾಸ್ಟೆಲ್‌ ಗಳಲ್ಲಿ ಈ ಗ್ರಾಮದ ಮಕ್ಕಳಿಗೆ ವಿಶೇಷ ಪ್ರವೇಶ ಕಲ್ಪಿಸುವ ವ್ಯವಸ್ಥೆಯಾಗಬಹುದು. ಅಗಸನಕಟ್ಟೆ-ಬಸವಕೋಟೆ-ಕೊಟ್ಟೂರು ನಡುವಿನ ಐದು ಕಿಮೀ ರಸ್ತೆ, ಗ್ರಾಮದೊಳಗಿನ ಮೂರು ಮುಖ್ಯ ರಸ್ತೆಗಳು ಅಭಿವೃದ್ಧಿಯಾಗಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ ಗ್ರಾಮಸ್ಥರು.

Advertisement

Udayavani is now on Telegram. Click here to join our channel and stay updated with the latest news.

Next