Advertisement

ಬಾಕಿ ಕಡತ ಪೂರ್ಣಗೊಳಿಸಲು ಡಿಸಿ ಸೂಚನೆ

01:46 PM Aug 17, 2022 | Team Udayavani |

ಯಡ್ರಾಮಿ: ಗ್ರಾಮೀಣ ಭಾಗದ ಜನರ ಕುಂದು ಕೊರತೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ “ಜಿಲ್ಲಾಧಿ ಕಾರಿಗಳ ನಡೆ ಹಳ್ಳಿಯ ಕಡೆ’ ಕಾರ್ಯಕ್ರಮದ ಪ್ರಯುಕ್ತ ಜಿಲ್ಲಾಧಿಕಾರಿ ಯಶವಂತ ಗುರಕರ್‌ ಪಟ್ಟಣದ ತಹಶೀಲ್ದಾರ್‌ ಕಾರ್ಯಾಲಯದಲ್ಲಿ ಮಂಗಳವಾರ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು.

Advertisement

ಬೆಳಗ್ಗೆ 11ಗಂಟೆಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ 70ಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದು ಬಹುತೇಕ ಕಂದಾಯ ಇಲಾಖೆ, ಗ್ರಾಮೀಣಾಭಿವೃದ್ಧಿ ಇಲಾಖೆ, ಸಾರಿಗೆ ಇಲಾಖೆಗೆ ಸಂಬಂಧಿಸಿದ್ದಾಗಿವೆ. ಕಂದಾಯ ಇಲಾಖೆಯಲ್ಲಿ ಕಡತಗಳ ವಿಲೇವಾರಿ ಮಾಡಲು ಅಲೆದಾಡಿಸುತ್ತಾರೆ ಎನ್ನುವ ಜನರ ಆರೋಪಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು ತಹಶೀಲ್ದಾರ್‌ ಶಾಂತಗೌಡ ಬಿರಾದಾರ ಮೇಲೆ ಸಿಡಿಮಿಡಿಗೊಂಡು ಬಾಕಿ ಇರುವ ಕಡತಗಳನ್ನು ಮೂರು ದಿನದಲ್ಲಿ ಪರಿಹರಿಸಬೇಕೆಂದು ಸೂಚಿಸಿದರು.

ಹಳ್ಳಿಗಳಲಿ ವಿವಿಧ ಸಮುದಾಯಗಳಿಗೆ‌ ಸ್ಮಶಾನ ಭೂಮಿ ಮಂಜೂರು ಮಾಡಲು ಅರ್ಜಿಗಳಿಗೆ ಸಂಬಂಧಿಸಿದಂತೆ ಶೀಘ್ರವೆ ಒಂದು ಸಾರ್ವಜನಿಕ ಸಭೆಯನ್ನು ಮಾಡಿ, ಸಮುದಾಯಗಳಿಗೆ ಪ್ರತ್ಯೇಕವಾಗಿ ಸ್ಮಶಾನ ಭೂಮಿ ಮಂಜೂರು ಮಾಡಲು ಬರುವುದಿಲ್ಲ. ಎಲ್ಲ ಸಮುದಾಯಗಳಿಗೂ ಒಂದೇ ಕಡೆ ಅಗತ್ಯ ಸ್ಥಳವನ್ನು ನೀಡಲಾಗುವುದು ಎಂದು ಅರಿವು ಮೂಡಿಸಲು ತಹಶೀಲ್ದಾರ್‌ಗೆ ತಿಳಿಸಿದರು.

ಹಾಗೆಯೇ ಹಳ್ಳಿಗಳಲ್ಲಿ ನಡೆಯುತ್ತಿರುವ ಜೆಜೆಎಂ ಕಳಪೆ ಕಾಮಗಾರಿ ಸೇರಿದಂತೆ ಶಾಲೆಯ ಕಟ್ಟಡ ದುರಸ್ತಿ ಹಾಗೂ ವಿದ್ಯುತ್‌ ಸೌಲಭ್ಯ, ರಸ್ತೆ ನಿರ್ಮಾಣದ ಬಗ್ಗೆ ದೂರುಗಳು ಬಂದಿವೆ. ಶೀಘ್ರವೆ ಪರಿಹರಿಸಲು ಇಒ ಮಹಾಂತೇಶ ಪುರಾಣಿಕಗೆ ಸೂಚನೆ ನೀಡಿದರು. ಇದೇ ವೇಳೆ, ತಾಲೂಕಿನ ವಿವಿಧ ಸಂಘಟನೆಗಳಿಂದ ನೂತನ ತಾಲೂಕಿಗೆ ಅಗತ್ಯ ಕಚೇರಿಗಳನ್ನು ಕೂಡಲೇ ಪ್ರಾರಂಭಿಸಲು ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗಳಲ್ಲಿ ಕೋರಲಾಯಿತು.

ಜನತೆಯಿಂದ ಕುಂದು ಕೊರತೆಗಳ ಅಹವಾಲುಗಳನ್ನು ಸ್ವೀಕರಿಸಿದ ನಂತರ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿ, ಜಿಲ್ಲೆಯಲ್ಲಿರುವ 127 ತಾಂಡಾಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸುವ ಮಹತ್ತರ ಕಾರ್ಯಕ್ರಮವನ್ನು ರಾಜ್ಯ ಕಂದಾಯ ಸಚಿವರು ಚಾಲನೆ ನೀಡಲಿದ್ದಾರೆ. ಸುಮಾರು 30,040 ಮನೆಗಳಿಗೆ ಹಕ್ಕು ಪತ್ರಗಳನ್ನು ನೀಡುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next