Advertisement

ಜಾತಿ ಪ್ರಮಾಣ ಪತ್ರಕ್ಕಾಗಿ ಡೀಸಿ ಕಾಲಿಗೆ ಬಿದ್ದರು… 

06:56 AM Feb 27, 2019 | |

ಕೋಲಾರ: ಪರಿಶಿಷ್ಟ ಜಾತಿ ಪ್ರಮಾಣ ಪತ್ರಕ್ಕೆ ಆಗ್ರಹಿಸಿ ಬುಡ್ಗ ಜಂಗಮ ಕುಟುಂಬಗಳು ಜಿಲ್ಲಾಧಿಕಾರಿಗೆ ಕಾರಿಗೆ ಅಡ್ಡಲಾಗಿ ಮಲಗಿ ಪ್ರತಿಭಟನೆ ನಡೆಸಿದ ಘಟನೆ ನಗರದ ಹೊರವಲಯದ ಡೀಸಿ ಕಚೇರಿ ಮುಂಭಾಗ ಮಂಗಳವಾರ ಮಧ್ಯಾಹ್ನ ನಡೆದಿದೆ. ಈ ವೇಳೆ ಜಿಲ್ಲಾಧಿಕಾರಿ, ಕಾರಿನಿಂದ ಇಳಿದು ಪೊಲೀಸರ ಕಾವಲಿನಲ್ಲಿ ಕಾರು ಹತ್ತಿ ಹೋಗಬೇಕಾಯಿತು. 

Advertisement

ಪ್ರತಿ ವರ್ಷದಂತೆ ಈ ವರ್ಷವೂ ಬುಡ್ಗಜಂಗಮ ಕುಟುಂಬಗಳ ಪುರುಷರು, ಮಹಿಳೆಯರು, ಮಕ್ಕಳು ಜಾತಿ ಪ್ರಮಾಣ ಪತ್ರಕ್ಕೆ ಆಗ್ರಹಿಸಿ ಅನಿರ್ದಿಷ್ಟ ಪ್ರತಿಭಟನೆ ಹಮ್ಮಿಕೊಂಡಿದ್ದರು. ಆದರೆ, ಜಿಲ್ಲಾಧಿಕಾರಿಗಳು ಕಚೇರಿ ಆವರಣದಲ್ಲಿ ಅನಿರ್ದಿಷ್ಟ ಪ್ರತಿಭಟನೆ ನಡೆಸಲು ಅವಕಾಶ ನೀಡದಿದ್ದರಿಂದ ಕಚೇರಿ ಹೊರಗೆ ರಾಷ್ಟ್ರೀಯ ಹೆದ್ದಾರಿ ಪಕ್ಕದಲಿಯೇ ಪೆಂಡಾಲ್‌ ಹಾಕಿ ಪ್ರತಿಭಟನೆ ನಡೆಸುತ್ತಿದ್ದರು.

ಮಂಗಳವಾರ ಮಧ್ಯಾಹ್ನ ಜಿಲ್ಲಾಧಿಕಾರಿ ಊಟಕ್ಕೆ ತೆರಳಲು ಆಗಮಿಸುತ್ತಿದ್ದಂತೆಯೇ ಅವರ ಕಾರಿನ ಮುಂದೆ ಶವಯಾತ್ರೆ ಪ್ರತಿಭಟನೆ ನಡೆಸಲು ಪ್ರತಿಭಟನಾಕಾರರು ಸಜ್ಜಾಗಿದ್ದರು. ಸ್ಥಳದಲ್ಲಿದ್ದ ಪೊಲೀಸರು ಪ್ರತಿಭಟನಾಕಾರರಿಂದ ಜಿಲ್ಲಾಧಿಕಾರಿ ಕಾರನ್ನು ತೆರವುಗೊಳಿಸುವ ಪ್ರಯತ್ನ ಮಾಡುತ್ತಿದ್ದರು. ಆದರೂ ಲೆಕ್ಕಿಸದ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಾರಿನ ಮುಂದೆ ಮಲಗಿ ಪ್ರತಿಭಟನೆ ನಡೆಸಿದರು. ಇದರಿಂದ ಮಂಜುನಾಥ್‌ ಅನಿವಾರ್ಯವಾಗಿ ಕಾರಿನಿಂದ ಇಳಿಯಬೇಕಾಗಿತ್ತು.

ಜಿಲ್ಲಾಧಿಕಾರಿ ಕಾರಿನಿಂದ ಇಳಿಯುತ್ತಿದ್ದಂತೆಯೇ ಅನೇಕ ಮಂದಿ ಮಹಿಳೆಯರು ಅವರಿಗೆ ಮುತ್ತಿಕೊಂಡು ತಮಗೆ ಜಾತಿ ಪ್ರಮಾಣ ಪತ್ರ ನೀಡುವಂತೆ ಆಗ್ರಹಿಸಿದರು. ಇದೇ ಸಂದರ್ಭದಲ್ಲಿ ಕೆಲವರು ಜಿಲ್ಲಾಧಿಕಾರಿ ಕಾಲಿಗೆ ಬಿದ್ದು ಜಾತಿ ಪ್ರಮಾಣ ಪತ್ರಕ್ಕೆ ಬೇಡಿಕೆ ಇಟ್ಟರು. ಪ್ರತಿಭಟನೆಯಲ್ಲಿ ಮಹಿಳೆಯರು, ಮಕ್ಕಳು, ಪುರುಷರು ಚದುರಿದ್ದರಿಂದ ಪೊಲೀಸರು ಜಿಲ್ಲಾಧಿಕಾರಿಗೆ ರಕ್ಷಣೆ ನೀಡಲು ಪ್ರಯಾಸಪಡಬೇಕಾಯಿತು.

ಕೊನೆಗೆ ಜಿಲ್ಲಾಧಿಕಾರಿ ಪ್ರತಿಭಟನಾಕಾರರಿಂದ ತಪ್ಪಿಸಿಕೊಂಡು ಮುಂದಕ್ಕೆ ತೆರಳಬೇಕಾಯಿತು. ಆಗ ಡಿಸಿಯವರ ಕಾರು ಮತ್ತೂಂದು ಕಡೆಯಿಂದ ಆಗಮಿಸಿದ್ದು ಅವರು ಅದರಲ್ಲಿ ಹತ್ತಿ ಮನೆಗೆ ತೆರಳಿದರು. ಜಿಲ್ಲಾಧಿಕಾರಿ ಹೋಗುತ್ತಿದ್ದಂತೆಯೇ ಪೊಲೀಸರು ಪ್ರತಿಭಟನಾಕಾರರನ್ನು ತಹಬದಿಗೆ ತರುವಲ್ಲಿ ಸಫ‌ಲರಾದರು. 

Advertisement

ಈ ಹಂತದಲ್ಲಿ ಕೆಲವರು ಶವಯಾತ್ರೆಗೆ ತಯಾರು ಮಾಡಿಕೊಂಡಿದ್ದ ಮಡಕೆಯನ್ನು ರಾಷ್ಟ್ರೀಯ ಹೆದ್ದಾರಿಯಲ್ಲಿ ಒಡೆದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಬುಡ್ಗಜಂಗಮರಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡುವ ವಿಚಾರ ಪ್ರತಿ ವರ್ಷವೂ ಪ್ರತಿಭಟನೆ ರೂಪ ಪಡೆದುಕೊಳ್ಳುತ್ತಿದ್ದರೂ ಪರಿಹಾರ ಸಿಗುತ್ತಿಲ್ಲ. ಇದರಿಂದ ಬುಡ್ಗ ಜಂಗಮದ ಕುಟುಂಬಗಳು ತಮ್ಮ ಮಕ್ಕಳ ವಿದ್ಯಾಭ್ಯಾಸ್ಕಕ್ಕೆ ತೊಂದರೆಯಾಗುತ್ತಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಈ ಬಾರಿಯ ಪ್ರತಿಭಟನೆ ಹೈಡ್ರಾಮಾಗೆ ಕಾರಣವಾಗಿತ್ತು. ಇವೆಲ್ಲಾ ಘಟನೆಗಳು ನಡೆದ ನಂತರ ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ಸಂಜೆ ಪ್ರತಿಭಟನಾಕಾರ ಮುಖಂಡರನ್ನು ತಮ್ಮ ಕಚೇರಿಗೆ ಕರೆಸಿ ಜಾತಿ ಪ್ರಮಾಣ ಪತ್ರ ನೀಡುವಲ್ಲಿ ಇರುವ ಕಾನೂನು ತೊಡಕುಗಳ ಕುರಿತಂತೆ ವಿವರಿಸುವ ಪ್ರಯತ್ನ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next