ಸಿಂದಗಿ: ಸಕಾಲದಲ್ಲಿ ಮಳೆ ಬೆಳೆ ಬರಲಿ ಎಂದು ತಾಲೂಕಿನ ಮೋರಟಗಿ ಗ್ರಾಮದಲ್ಲಿ ಗ್ರಾಮದೇವತೆ ದ್ಯಾವಮ್ಮ ದೇವಿ ಜಾತ್ರಾ ಮಹೋತ್ಸವ ನಾಗರ ಅಮಾವಾಸ್ಯೆ ದಿನದಂದು ಸಕಲ ವಾದ್ಯಗಳೊಂದಿಗೆ ಅದ್ಧೂರಿಯಾಗಿ ಜರುಗಿತು. ದ್ಯಾವಮ್ಮದೇವಿ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ನಡೆಯಿತು. ಭಕ್ತಾದಿಗಳು ಪೂಜೆ ಸಲ್ಲಿಸುವ ಮೂಲಕ ಸಕಾಲಕ್ಕೆ ಮಳೆ ಬೆಳೆ ಬರಲಿ ಎಂದು ದೇವಿ ಹತ್ತಿರ ಅರಿಕೆ ಮಾಡಿಕೊಂಡರು.
ಎತ್ತಿನಗಾಡಿಯಲ್ಲಿ ದ್ಯಾವಮ್ಮದೇವಿ ಉತ್ಸವ ಮೂರ್ತಿಯನ್ನು ಮೆರೆಸಿದರು. ರೈತರು, ಮಹಿಳೆಯರು ಎತ್ತಿನ ಗಾಡಿ ಎಳೆದರು. ದೇವಿಯ ಉತ್ಸವ ಮೆರವಣಿಗೆಯಲ್ಲಿ ಪೋತರಾಜರು, ಡೊಳ್ಳು ಕಲಾ ತಂಡಗಳು, ಬಾಜಾ ಭಜಂತ್ರಿ ಕಲಾ ತಂಡಗಳು ಭಾಗವಹಿಸಿ ತಮ್ಮ ಕಲಾ ಪ್ರದರ್ಶನ ಮಾಡಿದರು.
ಮೆರವಣಿಗೆ ಅಗಸಿ ಮಾರ್ಗವಾಗಿ ಬಜಾರದಲ್ಲಿನ ನಡುಲಕ್ಷ್ಮೀ ದೇವಸ್ಥಾನ ತಲುಪಿತು. ನಂತರ ಅಲ್ಲಿ ವಿವಿಧ ಕಾರ್ಯಕ್ರಮಗಳು ಜರುಗಿದವು. ರವಿವಾರ ಬೆಳಗ್ಗೆ ಬಜಾರದಿಂದ ಸಿದ್ದರಾಮೇಶ್ವರ ದೇವಸ್ಥಾನದ ಮಾರ್ಗವಾಗಿ ಮೂಲಸ್ಥಳ ಮೆರವಣಿಗೆ ಮೂಲಕ ಕರೆದುಕೊಂಡು ಹೋಗಲಾಯಿತು.
ಮಲ್ಲಣ್ಣ ಕುಂಬಾರ, ಹಳ್ಳೆಪ್ಪ ಕೆಂಬಾವಿ, ಮುದಕಯ್ಯ ಸಂಗಯ್ಯನಗುಡಿ, ಶರಣು ಅರಳಗುಂಡಗಿ, ಮಿಟ್ಟು ಜಾಲಿಗಿಡ,
ಮಿರಾಸಾಬ ಶಿರಶ್ಯಾಡ, ನಿಂಗಣ್ಣ ಖಾನಾಪುರ, ಸಿದ್ದು ಜಾಡರ್, ಶರಣು ಅನಬಷ್ಠಿ, ನಿಂಗು ದೇಸಾಯಿ, ಅಲ್ಲಾಬಕ್ಷ ಬಾಗವಾನ, ರಸೂಲ ಬಾಸಗಿ, ಬುಡ್ಡಾ ಶಿರ್ಶ್ಯಾಡ ಸೇರಿದಂತೆ ಸಾವಿರಾರು ಭಕ್ತರು ಭಾಗವಹಿಸಿದ್ದರು.