ಸಾಮಾನ್ಯವಾಗಿ ನಾವೆಲ್ಲ ಎಂಟು ದಿಕ್ಕು ಅಂತಾನೋ, ಹತ್ತು ದಿಕ್ಕು ಅಂತಾನೋ ಮಾತಾಡುವುದನ್ನ ಕೇಳಿದ್ದೇವೆ. ಆದರೆ ನಿರ್ದೇಶಕ ದಯಾಳ್ ಪದ್ಮನಾಭನ್ “ಒಂಬತ್ತನೇ ದಿಕ್ಕು’ ಎನ್ನುವ ಹೊಸ ದಿಕ್ಕನ್ನು ಅನ್ವೇಷಿಸಿ ಅದನ್ನು ತೆರೆಮೇಲೆ ಹೇಳಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಹೌದು, ಇತ್ತೀಚೆಗಷ್ಟೇ ನಿರ್ದೇಶಕ ದಯಾಳ್ “ರಂಗನಾಯಕಿ’ ಚಿತ್ರವನ್ನು ಪೂರ್ಣಗೊಳಿಸಿದ್ದಾರೆ. ಇನ್ನೇನು ಆ ಚಿತ್ರ ತೆರೆಗೆ ಬರಲು ರೆಡಿಯಾಗಿ ನಿಂತಿದೆ. ಇದರ ನಡುವೆಯೇ ದಯಾಳ್ ಸದ್ದಿಲ್ಲದೆ ಮತ್ತೂಂದು ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಲು ಹೊರಟಿದ್ದಾರೆ. ಆ ಚಿತ್ರದ ಹೆಸರೇ “ಒಂಬತ್ತನೇ ದಿಕ್ಕು’.
ಇನ್ನು ಇಲ್ಲಿಯವರೆಗೆ ಪ್ರಯೋಗಾತ್ಮಕ ಚಿತ್ರಗಳು, ಕಲಾತ್ಮಕ ಚಿತ್ರಗಳ ಮೂಲಕವೇ ಹೆಚ್ಚು ಗುರುತಿಸಿಕೊಂಡಿರುವ ನಿರ್ದೇಶಕ ದಯಾಳ್ ಪದ್ಮನಾಭನ್ ಈ ಬಾರಿ ಪಕ್ಕಾ ಔಟ್ ಆ್ಯಂಡ್ ಔಟ್ ಕಮರ್ಷಿಯಲ್ ಶೈಲಿಯಲ್ಲಿ “ಒಂಬತ್ತನೇ ದಿಕ್ಕು’ ಚಿತ್ರವನ್ನು ತೆರೆಮೇಲೆ ತರುವ ಪ್ಲಾನ್ ಮಾಡಿಕೊಂಡಿದ್ದಾರೆ. ಇನ್ನು ದಯಾಳ್ ಹೇಳುತ್ತಿರುವ “ಒಂಬತ್ತನೇ ದಿಕ್ಕು’ ಚಿತ್ರದಲ್ಲಿ ಲೂಸ್‌ಮಾದ ಯೋಗಿ ನಾಯಕನಾಗಿ, ಅದಿತಿ ಪ್ರಭುದೇವ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ ರಮೇಶ್ ಭಟ್, ಪ್ರಶಾಂತ್ ಸಿದ್ಧಿ ಮೊದಲಾದವರು ಚಿತ್ರದ ಇತರೆ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಸುಮಾರು ಒಂದೂವರೆ ತಿಂಗಳಿನಿಂದ “ಒಂಬತ್ತನೇ ದಿಕ್ಕು’ ಚಿತ್ರದ ಸ್ಕ್ರಿಪ್ಟ್ ಕೆಲಸಗಳಲ್ಲಿ ನಿರತವಾಗಿದ್ದ ದಯಾಳ್, ಇತ್ತೀಚೆಗೆ ಚಿತ್ರದ ಮುಹೂರ್ತವನ್ನು ನೆರವೇರಿಸಿ ಚಿತ್ರೀಕರಣಕ್ಕೆ ಚಾಲನೆ ನೀಡಿದರು.
ತಮಿಳು ನಟ ಆರ್ಯ “ಒಂಬತ್ತನೇ ದಿಕ್ಕು’ ಚಿತ್ರದ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದರೆ, ನಿರ್ಮಾಪಕ ಸೌಂದರ್ಯ ಜಗದೀಶ್ ಕ್ಯಾಮರಾ ಸ್ವಿಚ್ ಆನ್ ಮಾಡುವ ಮೂಲಕ ಚಿತ್ರೀಕರಣಕ್ಕೆ ಚಾಲನೆ ನೀಡಿದರು.
ಬಳಿಕ ತಮ್ಮ “ಒಂಬತ್ತನೇ ದಿಕ್ಕು’ ಚಿತ್ರದ ಬಗ್ಗೆ ಮಾತಿಗಿಳಿದ ನಿರ್ದೇಶಕ ದಯಾಳ್ ಪದ್ಮನಾಭನ್, “ಇತ್ತೀಚೆಗೆ ನನ್ನ ಚಿತ್ರಗಳೆಲ್ಲವೂ, ಎಕ್ಸ್‌ಪರಿಮೆಂಟಲ್ ಆಗಿದ್ದವು. “ಯಶವಂತ್’ ಚಿತ್ರದ ನಂತರ ನಾನು ಮಾಡುತ್ತಿರುವ ಔಟ್ ಆ್ಯಂಡ್ ಔಟ್ ಕಮರ್ಷಿಯಲ್ ಚಿತ್ರ ಇದು. ನಾನು ಇಲ್ಲಿಯವರೆಗೆ ಮಾಡಿದ ಚಿತ್ರಗಳಿಗಿಂತ ಹೊರತಾಗಿರುವ, ಹೊಸಥರದ ಸಬ್ಜೆಕ್ಟ್ ನ ಚಿತ್ರ ಮಾಡಬೇಕು ಅಂತ ಅಂದುಕೊಳ್ಳುತ್ತಿದ್ದಾಗ ಈ ಚಿತ್ರ ಮಾಡುವ ಐಡಿಯಾ ಬಂತು. ಇದೊಂದು ಇಂದಿನ ಸ್ಟೈಲ್‌ನ ಪಕ್ಕಾ ಕಮರ್ಶಿಯಲ್ ಎಲಿಮೆಂಟ್ಸ್ ಇರುವ ಆ್ಯಕ್ಷನ್ ಕಂ ಕ್ರೈಂ-ಥ್ರಿಲ್ಲರ್ ಸಬ್ಜೆಕ್ಟ್ಈ ಚಿತ್ರದಲ್ಲಿದೆ. ನಮ್ಮ ಕಾನೂನಿನ ಅಡಿಯಲ್ಲಿ ಬರುವ ಸೂಕ್ಷ್ಮವಾದ ವಿಷಯವೊಂದನ್ನು ಹೇಳುತ್ತಿದ್ದೇನೆ. ಅದೇನು ಅಂತ ಈಗಲೇ ಹೇಳಲಾರೆ. ಈ ಚಿತ್ರದಲ್ಲಿ ಹಾಡು, ಕಾಮಿಡಿ, ಆ್ಯಕ್ಷನ್ಸ್, ಎಮೋಶನ್ಸ್ ಎಲ್ಲವೂ ಇರುತ್ತದೆ. ಒಂದು ದಿನ ಬೆಳಿಗ್ಗೆಯಿಂದ ಸಂಜೆಯವರೆಗೆ ನಡೆಯುವ ಕಥೆಯನ್ನ ಸ್ಕ್ರೀನ್ ಮೇಲೆ ಹೇಳುತ್ತಿದ್ದೇವೆ’ ಎಂದು ಚಿತ್ರದ ಬಗ್ಗೆ ವಿವರಣೆ ನೀಡಿದರು.
ಇನ್ನು ಚಿತ್ರದ ನಾಯಕ ಯೋಗಿ ಈ ಚಿತ್ರದಲ್ಲಿ ಟ್ರಾವೆಲ್ ಏಜೆಂಟ್ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ತಮ್ಮ ಪಾತ್ರದ ಬಗ್ಗೆ ಮಾತನಾಡುವ ಯೋಗಿ, “ದಯಾಳ್ ಅವರೊಂದಿಗೆ ಕೆಲಸ ಮಾಡಬೇಕು ಎಂಬ ಆಸೆ ಈ ಚಿತ್ರದ ಮೂಲಕ ಈಡೇರುತ್ತಿದೆ. ಇವತ್ತಿನ ಮಾಮೂಲಿ ಕಮರ್ಶಿಯಲ್ ಎಂಟರ್‌ಟೈನ್ಮೆಂಟ್ ಸಿನಿಮಾದಲ್ಲಿ ಏನೇನು ಇರುತ್ತವೆಯೋ, ಅದೆಲ್ಲವೂ “ಒಂಬತ್ತನೇ ದಿಕ್ಕು’ ಸಿನಿಮಾದಲ್ಲಿದೆ. ನನ್ನ ಪಾತ್ರ ಸಾಕಷ್ಟು ಕುತೂಹಲಭರಿತವಾಗಿರುವುದರಿಂದ, ಪಾತ್ರದ ಬಗ್ಗೆ ಈಗಲೇ ಹೆಚ್ಚೇನು ಹೇಳಲಾರೆ’ ಎಂದರು. ಚಿತ್ರದ ನಾಯಕಿ ಅದಿತಿ ಪ್ರಭುದೇವ ಅವರದ್ದು ಚಿತ್ರದಲ್ಲಿ ಮಧ್ಯಮ ವರ್ಗದ ಕುಟುಂಬದ ಹುಡುಗಿಯ ಪಾತ್ರವಂತೆ. ಉಳಿದಂತೆ ಚಿತ್ರದ ಮತ್ತೆರಡು ಪ್ರಮುಖ ಪಾತ್ರಗಳಿಗೆ ಡೈಲಾಗ್ ಕಿಂಗ್ ಸಾಯಿಕುಮಾರ್ ಮತ್ತು ಟಿ.ಎನ್ ಸೀತಾರಾಮ್ ಅವರನ್ನೂ ಕರೆತರುವ ಯೋಚನೆಯಲ್ಲಿದೆ ಚಿತ್ರತಂಡ.
“ಒಂಬತ್ತನೇ ದಿಕ್ಕು’ ಚಿತ್ರದ ನಿರ್ಮಾಣಕ್ಕೆ ದಯಾಳ್ ಪದ್ಮನಾಭನ್ ಅವರೊಂದಿಗೆ ಮತ್ತೂಬ್ಬ ನಿರ್ದೇಶಕ ಕಂ ನಿರ್ಮಾಪಕ ಗುರು ದೇಶಪಾಂಡೆ ಕೂಡ ಸಾಥ್ ನೀಡುತ್ತಿದ್ದಾರೆ. ಚಿತ್ರದ ಹಾಡುಗಳಿಗೆ ಮಣಿಕಾಂತ್ ಕದ್ರಿ ಸಂಗೀತ ಸಂಯೋಜನೆಯಿದ್ದು, ರಾಕೇಶ್ ಛಾಯಾಗ್ರಹಣ, ಪ್ರೀತಿ ಮೋಹನ್ ಸಂಕಲನವಿದೆ. .
ಕಾರ್ತಿಕ್