ಕರಾಚಿ: ಭಾರತದ ಮೋಸ್ಟ್ ವಾಂಟೆಡ್, ಭೂಗತ ಪಾತಕಿ ದಾವೂದ್ ಇಬ್ರಾಹಿಂಗೆ ತೀವ್ರ ಹೃದಯಾಘಾತವಾಗಿದ್ದು, ಆತನನ್ನು ಕರಾಚಿಯ ಆಸ್ಪತ್ರೆಗೆ ಸೇರಿಸಲಾಗಿದೆ. ಆರೋಗ್ಯದ ಸ್ಥಿತಿ ಗಂಭೀರವಾಗಿದೆ ಎಂದು ಮೂಲಗಳು ಹೇಳಿವೆ. ಆದರೆ ದಾವೂದ್ ಅನಾರೋಗ್ಯದ ವರದಿಯನ್ನು ಮತ್ತೋರ್ವ ಮೋಸ್ಟ್ ವಾಟೆಂಡ್ ಆರೋಪಿ, ದಾವೂದ್ ಬಂಟ ಛೋಟಾ ಶಕೀಲ್ ನಿರಾಕರಿಸಿದ್ದಾನೆ. ರಾಷ್ಟ್ರೀಯ ಸುದ್ದಿವಾಹಿನಿಯೊಂದಕ್ಕೆ ಕರೆ ಮಾಡಿರುವ ಆತ, ದಾವೂದ್ ಆರೋಗ್ಯ ಚೆನ್ನಾಗಿದ್ದು, ಅನಾರೋಗ್ಯದ ವಾರ್ತೆ ಸುಳ್ಳು ಎಂದು ಹೇಳಿದ್ದಾನೆ.
ಆದರೆ ಆತ ಮೃತಪಟ್ಟಿರುವುದಾಗಿಯೂ ಸುದ್ದಿಗಳು ಹರಿದಾಡತೊಡಗಿವೆ. ಭಾರತೀಯ ಗುಪ್ತಚರ ಸಂಸ್ಥೆಗಳ ಮಾಹಿತಿ ಪ್ರಕಾರ ದಾವೂದ್ ಏ.19ರಂದು ಕಡೆಯ ಬಾರಿ ಹೊರಗೆ ಕಾಣಿಸಿಕೊಂಡಿದ್ದ. ಆತ ಕರಾಚಿಯಲ್ಲೇ ಇರುವ ತನ್ನ ಅಳಿಯನ ಮನೆಗೆ ಔತಣಕೂಟಕ್ಕೆ ತೆರಳಿದ್ದ ಎಂದು ಹೇಳಲಾಗಿದೆ.
ಕಳೆದ ಕೆಲ ಸಮಯದಿಂದ ದಾವೂದ್‌ಗೆ ಆರೋಗ್ಯ ಚೆನ್ನಾಗಿಲ್ಲ ಎಂದು ವರದಿಗಳು ಹರಿದಾಡುತ್ತಿದ್ದವು.ಜೊತೆಗೆ ಕಳೆದ ವರ್ಷ ಆತ ಗ್ಯಾಂಗ್ರಿನ್‌ಗೆ ತುತ್ತಾಗಿದ್ದ ಎಂದು ಹೇಳಲಾಗಿತ್ತು. ಇದನ್ನು ಗುಪ್ತಚರ ಅಧಿಕಾರಿಗಳು ಖಚಿತ ಪಡಿಸಿದ್ದರು ಕೂಡ. ಆತನಿಗೆ ಕರಾಚಿಯ ಲಿಖಾಯತ್ ರಾಷ್ಟ್ರೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ದಾವೂದ್ ಸದ್ಯ ಕರಾಚಿಯ ನೂರಾಬಾದ್ ಪ್ರದೇಶದ ಕ್ಲಿಫ್ಟನ್‌ನ ನಂ.20, 30ನೇ ರಸ್ತೆಯಲ್ಲಿರುವ ಬಂಗಲೆಯಲ್ಲಿ ವಾಸವಾಗಿದ್ದಾನೆ ಎನ್ನಲಾಗಿದೆ. ಈ ಪ್ರದೇಶದಲ್ಲಿ ಪಾಕಿಸ್ತಾನ ಸರ್ಕಾರದಿಂದ ದಾವೂದ್‌ಗೆ ಬಿಗಿ ಭದ್ರತೆ ಇರುವುದಾಗಿಯೂ ಹೇಳಲಾಗಿತ್ತು. ಭಾರತೀಯ ಗುಪ್ತಚರ ಸಂಸ್ಥೆಗಳ ಪ್ರಕಾರ, 61 ವಯಸ್ಸಿನ ದಾವೂದ್‌ನ ಇತ್ತೀಚಿನ ಆರೋಗ್ಯ ಸ್ಥಿತಿಯನ್ನು ಪಾಕಿಸ್ತಾನ ಸರ್ಕಾರ ಅತಿ ಗುಪ್ತವಾಗಿಟ್ಟಿದೆ. ಹಿಂದಿನಿಂದಲೂ ಅದು ದಾವೂದ್ ಪಾಕ್ ನಲ್ಲಿಲ್ಲ ಎಂದು ಹೇಳುತ್ತಲೇ ಬಂದಿದೆ.
ಒಂದು ವೇಳೆ ದಾವೂದ್ ಮೃತಪಟ್ಟರೂ ಕೂಡ, ಪಾಕ್ ಸರ್ಕಾರ ಈ ಬಗ್ಗೆ ಯಾವುದೇ ಅಧಿಕೃತ ಘೋಷಣೆಯನ್ನು ಮಾಡದೇ ಸದ್ದಿಲ್ಲದೇ ಅಂತ್ಯಕ್ರಿಯೆ ನೆರವೇರಿಸಲಿದೆ ಎನ್ನಲಾಗಿದೆ. ಕಾರಣ ಒಂದು ವೇಳೆ ಹೀಗೆ ಘೋಷಣೆ ಮಾಡಿದ್ದಲ್ಲಿ ಆತ ಪಾಕ್ ನಲ್ಲಿಯೇ ಇದ್ದ ಎಂದು ಒಪ್ಪಿಕೊಂಡಂತಾಗುತ್ತದೆ ಎಂಬುದು ಲೆಕ್ಕಾಚಾರವಾಗಿದೆ.
1993ರ ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣ ಸೇರಿದಂತೆ ಹಲವು ಉಗ್ರ ಚಟುವಟಿಕೆ, ಕೊಲೆ-ಸುಲಿಗೆ ಪ್ರಕರಣಗಳಲ್ಲಿ ದಾವೂದ್ ಭಾರತದ ತನಿಖಾ ಸಂಸ್ಥೆಗಳಿಗೆ ಬೇಕಾದವನಾಗಿದ್ದಾನೆ. 1980ರಲ್ಲಿ ಮುಂಬೈ ಪೊಲೀಸರು ಭೂಗತ ಲೋಕವನ್ನು ಮಟ್ಟಹಾಕಿದ್ದು, ಬಳಿಕ ಪಾಕ್‌ಗೆ ಆತ ಓಡಿಹೋಗಿದ್ದ. ಕರಾಚಿಗೆ ಹೋಗಿ ಆತ ನೆಲೆಸಿದ ಬಳಿಕ ಅಲ್ಲಿಯೂ ಭೂಗತಲೋಕವನ್ನು ಕಟ್ಟಿದ್ದಾಗಿ ಹೇಳಲಾಗಿದೆ.