ನವದೆಹಲಿ: ಮುಪ್ಪು ಆವರಿಸಿರುವ ಹಿನ್ನೆಲೆಯಲ್ಲಿ ಶರಣಾಗತನಾಗಿ ನವದೆಹಲಿಯ ತಿಹಾರ್ ಜೈಲಲ್ಲಿರುವ ಭೂಗತ ಪಾತಕಿ ಛೋಟಾ ರಾಜನ್‌ನನ್ನು ಕೊಲ್ಲಲು ಭೂಗತ ಪಾತಕಿ ದಾವೂದ್ ಇಬ್ರಾಹಿಂ ಗ್ಯಾಂಗ್ ಯೋಚಿಸಿತ್ತೇ? ಕೇಂದ್ರ ಗುಪ್ತಚರ ಸಂಸ್ಥೆಗಳು ಜೈಲಧಿಕಾರಿಗಳ ಜತೆ ಹಂಚಿಕೊಂಡಿರುವ ಮಾಹಿತಿಯಂತೆ ಈ ವಿಚಾರ ಹೌದು.
ಎರಡು ವಾರಗಳ ಹಿಂದೆ ಇಂಥ ಒಂದು ಸಂಚು ಬಹಿರಂಗವಾಗಿತ್ತು. ಈಗಾಗಲೇ ಜೈಲಲ್ಲಿರುವ ಪಾತಕಿ ನೀರಜ್ ಬವಾನಾ ಎಂಬಾತನ ಮೂಲಕವೇ ಅದನ್ನು ಕಾರ್ಯಗತಗೊಳಿಸುವ ಬಗ್ಗೆ ಯೋಜನೆ ರೂಪಿಸಲಾಗಿತ್ತು ಎಂಬ ಬಗ್ಗೆ ಮಾಹಿತಿ ದೊರೆತಿದೆ.
ಜೈಲಲ್ಲೇ ಕೊಲ್ಲಲು ಚಿಂತನೆ: ಬವಾನಾ ಎಂಬಾತ ಕೂಡ ತಿಹಾರ್ ಜೈಲಲ್ಲಿಯೇ ಇದ್ದಾನೆ. ಆತನ ಭೇಟಿಗಾಗಿ ಸಂದರ್ಶಕನೊಬ್ಬ ಬಂದಿದ್ದ ವೇಳೆ ಈ ಬಗ್ಗೆ ಚರ್ಚೆ ನಡೆದಿತ್ತು. ಅದನ್ನು ಕೇಂದ್ರ ಗುಪ್ತಚರ ಸಂಸ್ಥೆಗಳು ಪತ್ತೆ ಹಚ್ಚಿದ್ದವು. ಈ ಬಗ್ಗೆ ಸುಳಿವು ದೊರೆತ ಕೂಡಲೇ ತಿಹಾರ್ ಜೈಲಿನ ಅಧಿಕಾರಿಗಳು, ಬವಾನಾನನ್ನು ಬಿಗಿ ಭದ್ರತೆಯ ಮತ್ತೂಂದು ಸೆಲ್‌ಗೆ ವರ್ಗಾಯಿಸಿದ್ದಾರೆ. ಈ ಸಂದರ್ಭದಲ್ಲಿ ಆತನ ಬಳಿ ಮೊಬೈಲ್ ಫೋನ್ ಇದ್ದದ್ದೂ ಪತ್ತೆಯಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಜೈಲಧಿ ಕಾರಿಗಳು, ಮುಂಬೈನ ಕಾರಾಗೃಹಕ್ಕಿಂತ ತಿಹಾರ್ ಜೈಲಲ್ಲಿ ಭದ್ರತೆ ಬಿಗಿಯಾಗಿದೆ. ಹೀಗಾಗಿ ದಾವೂದ್ ಸಹಚರರು ಛೋಟಾ ರಾಜನ್‌ನನ್ನು ಟಾರ್ಗೆಟ್ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ. ಇನ್ನು ರಾಜನ್‌ಗೆ ವಿಶೇಷ ಗಾರ್ಡ್‌ಗಳ ಭದ್ರತೆ ನೀಡಲಾಗಿದೆ.
ಯಾರಿದು ಬವಾನಾ?: ಅಂದ ಹಾಗೆ ನೀರಜ್ ಬವಾನಾ ಎಂಬಾತ ನವದೆಹಲಿಯ ಕುಖ್ಯಾತ ಗ್ಯಾಂಗ್ ಸ್ಟರ್. ಅಕ್ರಮವಾಗಿ ಶಸ್ತ್ರಾಸ್ತ್ರ ಇರಿಸಿಕೊಂಡ ಆರೋಪದ ಹಿನ್ನೆಲೆಯಲ್ಲಿ 2016ರ ಸೆಪ್ಟೆಂಬರ್‌ನಲ್ಲಿ ಆತನಿಗೆ ದೆಹಲಿಯ ಸ್ಥಳೀಯ ಕೋರ್ಟೊಂದು ಏಳು ವರ್ಷಗಳ ಕಠಿಣ ಶಿಕ್ಷೆ ವಿಧಿಸಿತ್ತು. ಪಶ್ಚಿಮ ದೆಹಲಿ ನಿವಾಸಿಯಾಗಿರುವ ಆತನ ವಿರುದಟಛಿ ಕೊಲೆ, ಕೊಲೆಯತ್ನ, ಸುಲಿಗೆ ಸೇರಿದಂತೆ ಗುರುತರ ಆರೋಪಗಳು ಇವೆ. ಹಿಂದೆ ಕೂಡ ದಾವೂದ್ ಛೋಟಾ ರಾಜನ್‌ನನ್ನು
ಹತ್ಯೆ ಮಾಡಲು ಸಂಚು ರೂಪಿಸಿ ವಿಫಲನಾಗಿದ್ದ.
ಬೆಳಕಿಗೆ ಬಂದದ್ದು ಹೇಗೆ?
ಜೈಲಲ್ಲಿರುವ ಬವಾನಾ ಎಂಬಾತನ ಸಹಚರನೊಬ್ಬ ನವೆಂಬರ್ ಮಧ್ಯಭಾಗದಲ್ಲಿ ಜಾಮೀನಿನಲ್ಲಿ ಬಿಡುಗಡೆಯಾಗಿದ್ದ. ಆತ ದೆಹಲಿಯಲ್ಲಿ ಕುಖ್ಯಾತ ಗ್ಯಾಂಗ್ ಲೀಡರ್ ಒಬ್ಬನ ಜತೆ ರಾಜನ್‌ನನ್ನು ಮುಗಿಸುವ ಮಾತಾಡಿದ್ದ. ಆತ ಮತ್ತೂಬ್ಬನಿಗೆ ಫೋನ್ ಮಾಡಿದ ಸಂದರ್ಭದಲ್ಲಿ “ದೊಡ್ಡ ಟಾಸ್ಕ್ ಒಂದು ಇದೆ’ ಎಂದು ಹೇಳಿದ್ದನ್ನು ಪತ್ತೆ ಮಾಡಿ ಬೆನ್ನು ಹತ್ತಲಾಗಿತ್ತು.