Advertisement

ದಾವೋಸ್‌ ಪ್ರವಾಸ ಫ‌ಲಪ್ರದ: ಸಿಎಂ ಸಂತಸ

11:53 PM Jan 24, 2020 | Team Udayavani |

ಬೆಂಗಳೂರು: ಸ್ವಿಡ್ಜರ್ಲೆಂಡ್‌ನ‌ ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯ 50ನೇ ವಾರ್ಷಿಕ ಸಭೆಯಲ್ಲಿ ಪಾಲ್ಗೊಂಡು ಐದು ದಿನಗಳ ವಿದೇಶ ಪ್ರವಾಸ ಮುಗಿಸಿ ಶುಕ್ರವಾರ ಬೆಂಗಳೂರಿಗೆ ಹಿಂತಿರುಗಿದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ದಾವೋಸ್‌ ಪ್ರವಾಸ ಫ‌ಲಪ್ರದವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

Advertisement

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಶುಕ್ರವಾರ ಮಧ್ಯಾಹ್ನ ಬಂದಿಳಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಸಚಿವ ಜಗದೀಶ ಶೆಟ್ಟರ್‌, ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ ಭಾಸ್ಕರ್‌ ಸೇರಿ ಉನ್ನತ ಅಧಿಕಾರಿಗಳ ತಂಡದ ವಿಶೇಷ ಪರಿಶ್ರಮದಿಂದ 40ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪೆನಿಗಳೊಂದಿಗೆ ಪ್ರತ್ಯೇಕವಾಗಿ ಅರ್ಧ ಗಂಟೆ ಚರ್ಚಿಸಲು ಅನುಕೂಲವಾಯಿತು ಎಂದು ತಿಳಿಸಿದರು.

ದಾವೋಸ್‌ ಸಭೆಯಲ್ಲಿ ಎಲ್ಲರ ಬಾಯಲ್ಲೂ ಬೆಂಗಳೂರು, ಕರ್ನಾಟಕದ ವಿಚಾರವೇ ಕೇಳಿಬಂತು. ಹಿಂದೆ ಎಸ್‌.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ ದಾವೋಸ್‌ ಪ್ರವಾಸ ಕೈಗೊಂಡಿದ್ದರು. 16 ವರ್ಷಗಳ ಬಳಿಕ ನಾನು ಪ್ರವಾಸ ಹೋಗಿ ಬಂದಿದ್ದೇನೆ. ಬಹಳಷ್ಟು ವಿದೇಶಿ ಕಂಪೆನಿಗಳು ಹೂಡಿಕೆಗೆ ಆಸಕ್ತಿ ತೋರಿದ್ದು, ಎಲ್ಲರೊಂದಿಗೆ ಚರ್ಚಿಸಲಾಗಿದೆ. ನವೆಂಬರ್‌ನಲ್ಲಿ ನಡೆಯುವ ಜಾಗತಿಕ ಹೂಡಿಕೆದಾರರ ಸಮಾವೇಶದ ಪೂರ್ವಭಾವಿ ಸಭೆಯೂ ಉತ್ತಮವಾಗಿ ನಡೆದಿದ್ದು, ಕೇಂದ್ರ ಸಚಿವ ಪಿಯೂಷ್‌ ಗೋಯೆಲ್‌ ಪಾಲ್ಗೊಂಡಿದ್ದರು ಎಂದು ಹೇಳಿದರು.

ಜಾಗತಿಕ ಹೂಡಿಕೆದಾರರ ಸಮಾವೇಶದ ಪೂರ್ವಭಾವಿ ಸಭೆ, ಮುನ್ನೋಟ ಪರಿಚಯವು ಸಾಕಷ್ಟು ಲಾಭ ತಂದು ಕೊಡಲಿದೆ. ದಾವೋಸ್‌ ಸಭೆಯಲ್ಲಿ ಪಾಲ್ಗೊಂಡಿದ್ದರ ಲಾಭ ಮುಂದಿನ 2-3 ವರ್ಷಗಳಲ್ಲಿ ಎಲ್ಲರಿಗೂ ಗೊತ್ತಾಗಲಿದೆ ಎಂದು ಭಾವಿಸಿದ್ದೇನೆ. ಲುಲು ಕಂಪೆನಿ ರಾಜ್ಯದಲ್ಲಿ ಸಾಗಣೆ ಕ್ಷೇತ್ರದಲ್ಲಿ 2000 ಕೋಟಿ ರೂ. ಹೂಡಿಕೆಗೆ ಮುಂದೆ ಬಂದಿದೆ. ಇದರಿಂದ ಹಾಲು, ಹಣ್ಣು, ತರಕಾರಿ ಸಾಗಣೆಗೆ ಅನುಕೂಲ ವಾಗಿ ರೈತರಿಗೆ ನೆರವಾಗುವ ನಿರೀಕ್ಷೆ ಇದೆ. ದಾವೋಸ್‌ ಪ್ರವಾಸದಿಂದ ರಾಜ್ಯದ ಅಭಿವೃದ್ಧಿ ಚುರುಕುಗೊಳ್ಳುವುದಲ್ಲಿ ಯಾವುದೇ ಸಂದೇಹವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಉದ್ಯಮಿಗಳು, ಹೂಡಿಕೆದಾರರು, ಪ್ರತಿಷ್ಠಿತ ಕಂಪೆನಿಗಳೊಂದಿಗೆ ಮಾತುಕತೆ ನಡೆಸಿದ್ದು, ನಿರಂತರವಾಗಿ ಸಂಪರ್ಕ, ಸಮನ್ವಯ ಮುಂದುವರಿಸಬೇಕಿದೆ. ಹೂಡಿಕೆದಾರರು ಕೆಲ ಸಮಸ್ಯೆ, ಕೊರತೆಗಳ ಬಗ್ಗೆಯೂ ಪ್ರಸ್ತಾಪಿಸಿದ್ದು, ಅವುಗಳನ್ನು ನಿವಾರಿಸಲು ಸಿದ್ಧವಿರುವುದಾಗಿ ಭರವಸೆ ನೀಡಿದ್ದೇವೆ. ಒಟ್ಟಾರೆ ದಾವೋಸ್‌ ಪ್ರವಾಸ ಫ‌ಲಪ್ರದವಾಗಿದೆ ಎಂದು ಸಂತಸದಿಂದ ನುಡಿದರು. ಸಚಿವ ಜಗದೀಶ ಶೆಟ್ಟರ್‌, ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ ಭಾಸ್ಕರ್‌ ಇತರರು ಬೆಂಗಳೂರಿಗೆ ಹಿಂತಿರುಗಿದರು.

Advertisement

ಮುಖ್ಯಮಂತ್ರಿ ನೇತೃತ್ವದ ತಂಡ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಶುಕ್ರವಾರ ಮಧ್ಯಾಹ್ನ ಬಂದಿಳಿಯುತ್ತಿದ್ದಂತೆ ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ, ಸಚಿವರಾದ ಬಸವರಾಜ ಬೊಮ್ಮಾಯಿ, ಸಿ.ಸಿ.ಪಾಟೀಲ್‌, ಪ್ರಭು ಚೌಹಾಣ್‌, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಸ್‌.ಆರ್‌.ವಿಶ್ವನಾಥ್‌, ಮಾಜಿ ಸಚಿವ ಮುರುಗೇಶ್‌ ನಿರಾಣಿ, ಸಂಸದ ಭಗವಂತ ಖೂಬಾ ಇತರರು ಆತ್ಮೀಯವಾಗಿ ಬರಮಾಡಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next