Advertisement

ಪಾಕ್‌ ವಿರುದ್ಧ 4-0 ಪರಾಕ್ರಮ

01:25 AM Dec 01, 2019 | Sriram |

ನುರ್‌ ಸುಲ್ತಾನ್‌ (ಕಜಾಕ್‌ಸ್ಥಾನ್‌): ಪಾಕಿಸ್ಥಾನವನ್ನು 4-0 ಅಂತರದಿಂದ ಬಗ್ಗುಬಡಿದ ಭಾರತ, ಮುಂದಿನ ವರ್ಷದ ಡೇವಿಸ್‌ ಕಪ್‌ ಟೆನಿಸ್‌ ಕ್ವಾಲಿಫೈಯರ್ ಸುತ್ತಿಗೆ ತೇರ್ಗಡೆಯಾಗಿದೆ.ಪಾಕಿಸ್ಥಾನ,

Advertisement

ತಟಸ್ಥ ತಾಣ ನುರ್‌ ಸುಲ್ತಾನಲ್ಲಿ ನಡೆದ ಮೊದಲ ದಿನದ ಎರಡೂ ಸಿಂಗಲ್ಸ್‌ ಪಂದ್ಯಗಳನ್ನು ಜಯಿಸಿದ್ದ ಭಾರತ, ಶನಿವಾರದ ಡಬಲ್ಸ್‌ ಮತ್ತು ರಿವರ್ ಸಿಂಗಲ್‌ ಪಂದ್ಯಗಳಲ್ಲೂ ಸುಲಭ ಗೆಲುವು ಸಾಧಿಸಿತು. ಭಾರತವಿನ್ನು ಮುಂದಿನ ಮಾರ್ಚ್‌ನಲ್ಲಿ ವಿಶ್ವದ ನಂ.2 ತಂಡವಾದ ಕ್ರೊವೇಶಿಯಾವನ್ನು ಎದುರಿಸಲಿದೆ.

ಡಬಲ್ಸ್‌ ಪಂದ್ಯದಲ್ಲಿ ಅನುಭವಿ ಲಿಯಾಂಡರ್‌ ಪೇಸ್‌ ಮತ್ತು ಇದೇ ಮೊದಲ ಸಲ ಡೇವಿಸ್‌ ಕಪ್‌ ಆಡಲಿಳಿದ ಜೀವನ್‌ ನೆಡುಂಚೆಜಿಯನ್‌ ಸೇರಿಕೊಂಡು ಪಾಕಿಸ್ಥಾನದ ಯುವ ಆಟಗಾರರಾದ ಮೊಹಮ್ಮದ್‌ ಶೋಯಿಬ್‌-ಹುಫೈಜ ಅಬ್ದುಲ್‌ ರೆಹಮಾನ್‌ ಅವರನ್ನು 6-1, 6-3 ಅಂತರದಿಂದ ಮಣಿಸಿದರು. ಈ ಪಂದ್ಯ 63 ನಿಮಿಷಗಳಲ್ಲಿ ಮುಗಿಯಿತು. ರಿವರ್ ಸಿಂಗಲ್ಸ್‌ನಲ್ಲಿ ಸುಮಿತ್‌ ನಾಗಲ್‌ 6-1, 6-0 ಅಂತರದಿಂದ ಯೂಸುಫ್ ಖಲೀಲ್‌ ಅವರಿಗೆ ಸೋಲುಣಿಸಿದರು.

ಇದರೊಂದಿಗೆ ಭಾರತ 2014ರ ಬಳಿಕ ಡೇವಿಸ್‌ ಕಪ್‌ ಕೂಟದ ಎಲ್ಲ ಪಂದ್ಯಗಳನ್ನು ಜಯಿಸಿದ ಸಾಧನೆಗೈದಿತು. ಅಂದು ಚೈನೀಸ್‌ ತೈಪೆಯನ್ನು 5-0 ಅಂತರದಿಂದ ವೈಟ್‌ವಾಶ್‌ ಮಾಡಿತ್ತು.

ಲಿಯಾಂಡರ್‌ ಪೇಸ್‌ 44 ಗೆಲುವು
ಈ ಜಯದೊಂದಿಗೆ ಲಿಯಾಂಡರ್‌ ಡೇವಿಸ್‌ ಕಪ್‌ ಕೂಟದ ತಮ್ಮ ಸರ್ವಾಧಿಕ ಗೆಲುವಿನ ದಾಖಲೆಯನ್ನು 44 ಪಂದ್ಯ ಗಳಿಗೆ ವಿಸ್ತರಿಸಿದರು. ಕಳೆದ ವರ್ಷ ಅವರು 43ನೇ ಗೆಲುವು ಸಾಧಿಸಿದಾಗ ಇಟಲಿಯ ಖ್ಯಾತ ಟೆನಿಸಿಗ ನಿಕೋಲ ಪೀಟ್ರಾಂಜೆಲಿ ದಾಖಲೆಯನ್ನು ಮುರಿದು ಮುನ್ನುಗ್ಗಿದ್ದರು. 43 ಗೆಲುವಿಗಾಗಿ ಪೇಸ್‌ 56 ಪಂದ್ಯಗಳ ನ್ನಾಡಿದ್ದರೆ, ಪೀಟ್ರಾಂಜೆಲಿ 42 ಗೆಲುವಿಗೆ 66 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದರು.

Advertisement

“ಇದು ನನ್ನ 44ನೇ ಡಬಲ್ಸ್‌ ಗೆಲುವು. ಆದರೆ ಮೊದಲ ಗೆಲುವಿನಂತೆ ಭಾಸವಾ ಗುತ್ತದೆ. ನನ್ನ ಪಾಲಿಗೆ ಎಲ್ಲ ಗೆಲುವುಗಳೂ ವಿಶೇಷವೇ. ನನ್ನಿಂದ ಭಾರತ ಡೇವಿಸ್‌ ಕಪ್‌ ದಾಖಲೆ ಪುಟಗಳನ್ನು ಅಲಂಕರಿಸಿದ್ದಕ್ಕೆ ಬಹಳ ಖುಷಿಯಾಗುತ್ತಿದೆ’ ಎಂದು 18 ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಗಳ ಒಡೆಯ ಲಿಯಾಂಡರ್‌ ಪೇಸ್‌ ಪ್ರತಿಕ್ರಿಯಿಸಿದ್ದಾರೆ.

ದಾಖಲೆಗೆ ಗಂಡಾಂತರವಿಲ್ಲ
ಸದ್ಯ ಲಿಯಾಂಡರ್‌ ಪೇಸ್‌ ಅವರ ಅತ್ಯಧಿಕ ಗೆಲುವಿನ ದಾಖಲೆಯನ್ನು ಮುರಿಯುವ ಯಾವ ಆಟಗಾರನೂ ಕಾಣಿಸುತ್ತಿಲ್ಲ. ಸಮಕಾಲೀನ ಟೆನಿಸ್‌ನಲ್ಲಿ ಅತ್ಯಧಿಕ ಡೇವಿಸ್‌ ಕಪ್‌ ಪಂದ್ಯಗಳನ್ನು ಗೆದ್ದ ಡಬಲ್ಸ್‌ ಆಟಗಾರರ ಟಾಪ್‌-10 ಯಾದಿಯಲ್ಲಿ ಯಾರೂ ಇಲ್ಲ. ಬೆಲರೂಸ್‌ನ ಮ್ಯಾಕ್ಸ್‌ ಮಿರ್ನಿ 36 ಗೆಲುವು ಸಾಧಿಸಿದರೂ 2018ರ ಬಳಿಕ ಯಾವುದೇ ಕೂಟದಲ್ಲಿ ಆಡಿಲ್ಲ.

ಡೇವಿಸ್‌ ಕಪ್‌ ಸೇರಿದಂತೆ ಲಿಯಾಂಡರ್‌ ಪೇಸ್‌ ಒಟ್ಟು 92-35 ಗೆಲುವು- ಸೋಲಿನ ದಾಖಲೆಯೊಂದಿಗೆ 5ನೇ ಸ್ಥಾನಿಯಾಗಿದ್ದಾರೆ. ಇದರಲ್ಲಿ 48 ಸಿಂಗಲ್ಸ್‌ ಗೆಲುವು ಕೂಡ ಸೇರಿದೆ. ಇನ್ನೊಂದು ಪಂದ್ಯ ಗೆದ್ದರೆ ಸ್ಪೇನಿನ ಮ್ಯಾನುಯೆಲ್‌ ಸಂಟಾನ (92-18) ಅವರನ್ನು ಹಿಂದಿಕ್ಕಿ 4ನೇ ಸ್ಥಾನಕ್ಕೆ ಏರಲಿದ್ದಾರೆ.

ಈ ಗೆಲುವನ್ನು ಭಾರತೀಯ ಸೇನೆಗೆ ಹಾಗೂ ಗಡಿಯಲ್ಲಿ ಹುತಾತ್ಮರಾದ ಯೋಧರ ಕುಟುಂಬದವರಿಗೆ ಅರ್ಪಿಸುತ್ತಿದ್ದೇವೆ.
-ರೋಹಿತ್‌ ರಾಜ್‌ಪಾಲ್‌,ನಾಯಕ

Advertisement

Udayavani is now on Telegram. Click here to join our channel and stay updated with the latest news.

Next