Advertisement

Davis Cup Tennis: ಪಾಕಿಸ್ಥಾನ ವಿರುದ್ಧ 2-0 ಮುನ್ನಡೆ

11:48 PM Feb 03, 2024 | Team Udayavani |

ಇಸ್ಲಾಮಾಬಾದ್‌: ಪಾಕಿಸ್ಥಾನ ವಿರುದ್ಧದ ಡೇವಿಸ್‌ ಕಪ್‌ ವರ್ಲ್ಡ್ ಗ್ರೂಪ್‌-1 ಪ್ಲೇ ಆಫ್ ಪಂದ್ಯಾವಳಿಯಲ್ಲಿ ಭಾರತ ಎರಡೂ ಸಿಂಗಲ್ಸ್‌ ಗೆದ್ದು 2-0 ಮುನ್ನಡೆ ಸಾಧಿಸಿದೆ. ರಾಮ್‌ಕುಮಾರ್‌ ರಾಮನಾಥನ್‌ ಮತ್ತು ಎನ್‌. ಶ್ರೀರಾಮ್‌ ಬಾಲಾಜಿ ಆತಿಥೇಯರ ತೀವ್ರ ಪ್ರತಿರೋಧದ ನಡುವೆಯೂ ಗೆದ್ದು ಬಂದರು.

Advertisement

3 ಸೆಟ್‌ಗಳ ಕಾದಾಟ
ಮೊದಲ ಸಿಂಗಲ್ಸ್‌ನಲ್ಲಿ ರಾಮ್‌ಕುಮಾರ್‌ ರಾಮನಾಥನ್‌ ಪಾಕಿಸ್ಥಾನದ ಅನುಭವಿ ಟೆನಿಸಿಗ ಐಸಮ್‌ ಉಲ್‌ ಹಕ್‌ ಕುರೇಶಿ ವಿರುದ್ಧ 3 ಸೆಟ್‌ಗಳ ಜಿದ್ದಾಜಿದ್ದಿ ಹೋರಾಟ ನಡೆಸಬೇಕಾಯಿತು. ಗೆಲುವಿನ ಅಂತರ 6-7 (3), 7-6 (4), 6-0. ಮೊದಲೆರಡು ಸೆಟ್‌ಗಳಲ್ಲಿ ಸ್ಪರ್ಧೆ ಭಾರೀ ಪೈಪೋಟಿಯಿಂದ ಕೂಡಿತ್ತು. ಎರಡೂ ಟೈ ಬ್ರೇಕರ್‌ನಲ್ಲಿ ಇತ್ಯರ್ಥಗೊಂಡಿತು. ಮೊದಲ ಸೆಟ್‌ ಖುರೇಶಿ ಪಾಲಾದರೆ, ದ್ವಿತೀಯ ಸೆಟ್‌ನಲ್ಲಿ ರಾಮ್‌ಕುಮಾರ್‌ ಅದೃಷ್ಟ ಚೆನ್ನಾಗಿತ್ತು. ಇದನ್ನು ವಶಪಡಿಸಿಕೊಂಡ ಅವರು ಪಂದ್ಯವನ್ನು ಸಮಬಲಕ್ಕೆ ತರುವಲ್ಲಿ ಯಶಸ್ವಿಯಾದರು.

ನಿರ್ಣಾಯಕ ಸೆಟ್‌ನಲ್ಲಿ ಖುರೇಶಿ ಆಟ ಸಾಗಲಿಲ್ಲ. ಎಷ್ಟರ ಮಟ್ಟಿಗೆಂದರೆ, ಅವರಿಗೆ ಒಂದೂ ಅಂಕ ಗಳಿಸಲು ಸಾಧ್ಯವಾಗಲಿಲ್ಲ. ರಾಮ್‌ಕುಮಾರ್‌ ಅಮೋಘ ರಿಟರ್ನ್ಗಳ ಮೂಲಕ ಪಾಕ್‌ ಟೆನಿಸಿಗನನ್ನು ಕಟ್ಟಿಹಾಕಿದರು.
ಮಳೆಯಿಂದ ಅಡಚಣೆಗೊಳಗಾದ ದ್ವಿತೀಯ ಸಿಂಗಲ್ಸ್‌ನಲ್ಲಿ ಡಬಲ್‌ ಸ್ಪೆಷಲಿಸ್ಟ್‌ ಎನ್‌. ಶ್ರೀರಾಮ್‌ ಬಾಲಾಜಿ 7-5, 6-3 ಅಂತರದಿಂದ ಅಖೀಲ್‌ ಖಾನ್‌ ಅವರನ್ನು ಪರಾಭವಗೊಳಿಸಿದರು.
ರವಿವಾರ ಡಬಲ್ಸ್‌ ಹಾಗೂ ರಿವರ್ಸ್‌ ಸಿಂಗಲ್ಸ್‌ ನಡೆಯಲಿದ್ದು, ವರ್ಲ್ಡ್ ಗ್ರೂಪ್‌-1ಕ್ಕೆ ಮುನ್ನಡೆಯಲು ಭಾರತಕ್ಕೆ ಒಂದೇ ಗೆಲುವಿನ ಆವಶ್ಯಕತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next