Advertisement

ಡೇವಿಸ್‌ ಕಪ್‌: ಡಬಲ್ಸ್‌ನಲ್ಲಿ ಭಾರತಕ್ಕೆ ಸೋಲು

06:55 AM Sep 18, 2017 | Team Udayavani |

ಎಡ್ಮಂಟನ್‌(ಕೆನಡ): ಭಾರತದ ತಾರಾ ಆಟಗಾರ ರೋಹನ್‌ ಬೋಪಣ್ಣ ಮತ್ತು ಪುರವ್‌ ರಾಜ ಅವರು ಡೇವಿಸ್‌ ಕಪ್‌ ವಿಶ್ವ ಬಣ ಪ್ಲೇ-ಆಫ್ನ ಡಬಲ್ಸ್‌ನಲ್ಲಿ ಕೆನಡ ವಿರುದ್ಧ ಸೋಲುಂಡಿದ್ದಾರೆ. ಇದರಿಂದಾಗಿ ಭಾರತ 1-2 ರಿಂದ ಹಿನ್ನಡೆ ಅನುಭವಿಸಿದೆ. ಹೀಗಾಗಿ ಭಾರತದ ವಿಶ್ವ ಬಣಕ್ಕೆ ತೇರ್ಗಡೆಯ ಕನಸು ತೂಗುಯ್ನಾಲೆಯಲ್ಲಿದೆ.

Advertisement

ಭಾರತದ ರೋಹನ್‌ ಬೋಪಣ್ಣ ಮತ್ತು ಪುರವ್‌ ರಾಜ ಅವರು 5-7, 5-7, 7-5, 3-6 ಸೆಟ್‌ಗಳಿಂದ ಕೆನಡದ ಅನುಭವಿ ಆಟಗಾರರಾದ ಡೇನಿಯಲ್‌ ನೆಸ್ಟರ್‌ ಮತ್ತು ವಾಸೆಕ್‌ ಪಾಸ್ಪಿಸಿಲ್‌ ವಿರುದ್ಧ ಸೋತಿದ್ದಾರೆ. ಈ ಹೋರಾಟ 2 ಗಂಟೆ, 52 ನಿಮಿಷಗಳ ಕಾಲ ನಡೆಯಿತು. ಭಾರತೀಯ ಜೋಡಿ ಸೋತರೂ ಕೂಡ ಭರ್ಜರಿ ಹೋರಾಟ ಪ್ರದರ್ಶಿಸಿತು. 

ಅನುಭವಿ ಆಟಗಾರ ಬೋಪಣ್ಣ ಪ್ರದರ್ಶನ ಪ್ರಬಲವಾಗಿತ್ತು. ಆದರೆ ಪುರವ್‌ ರಾಜ ಅವರಿಂದ ಕೆಲವು ಅನಗತ್ಯ ತಪ್ಪುಗಳು ಮರುಕಳಿಸಿದ್ದು, ಭಾರತ ತಂಡಕ್ಕೆ ಹೊರೆಯಾಯಿತು. ಡಬಲ್ಸ್‌ನಲ್ಲಿ ಸೋತ ಕಾರಣ ಭಾರತ ವಿಶ್ವಬಣಕ್ಕೆ ತೇರ್ಗಡೆಯಾಗುವ ಪ್ರಯತ್ನಕ್ಕೆ ಪ್ರಬಲ ಹೊಡೆತ ಬಿದ್ದಿದೆ. ಮರು ಸಿಂಗಲ್ಸ್‌ನ ಎರಡೂ ಪಂದ್ಯಗಳಲ್ಲಿ ಗೆದ್ದರೆ ಮಾತ್ರ ಭಾರತ 16 ರಾಷ್ಟ್ರಗಳು ಭಾಗವಹಿಸುವ ಎಲೈಟ್‌ ವಿಶ್ವಬಣಕ್ಕೆ ತೇರ್ಗಡೆಯಾಗಲಿದೆ. ಆದರೆ ಕೆನಡ ಒಂದು ಪಂದ್ಯ ಗೆದ್ದರೆ ಸಾಕಾಗುತ್ತದೆ.

ರಿವರ್ಸ್‌ ಸಿಂಗಲ್ಸ್‌ ಮೇಲೆ ಕಣ್ಣು
ರಿವರ್ಸ್‌ ಸಿಂಗಲ್ಸ್‌ನ ಮೊದಲ ಪಂದ್ಯದಲ್ಲಿ ರಾಮ್‌ಕುಮಾರ್‌ ರಾಮನಾಥನ್‌ ಅವರು ವಿಶ್ವದ 51ನೇ ರ್‍ಯಾಂಕಿನ ಡೆನಿಸ್‌ ಶಪೋವಾಲೋವ್‌ ಅವರನ್ನು ಎದುರಿಸಲಿದ್ದಾರೆ. ಅವರಿಬ್ಬರು ಶುಕ್ರವಾರ ನಡೆದ ಮೊದಲ ಸಿಂಗಲ್ಸ್‌ನಲ್ಲಿ ಗೆಲುವು ತಮ್ಮ ಎದುರಾಳಿಯೆದುರು ಜಯ ಸಾಧಿಸಿದ್ದರು. ಒಂದು ವೇಳೆ ಈ ಪಂದ್ಯದಲ್ಲಿ ರಾಮ್‌ಕುಮಾರ್‌ ಗೆಲುವು ಸಾಧಿಸಿದರೆ ಎರಡನೇ ಮರು ಸಿಂಗಲ್ಸ್‌ ಪಂದ್ಯಕ್ಕೆ ಹೆಚ್ಚಿನ ಮಹತ್ವ ಬರಲಿದೆ. ಈ ಪಂದ್ಯದಲ್ಲಿ ಯೂಕಿ ಭಾಂಬ್ರಿ ಅವರು ಬ್ರಾಡನ್‌ ಶೂ°ರ್‌ ಅವರನ್ನು ಎದುರಿಸಲಿದ್ದಾರೆ. ಒಂದು ವೇಳೆ ಶಪೋವಾಲೋವ್‌ ಮರು ಸಿಂಗಲ್ಸ್‌ನಲ್ಲಿ ಸೋತರೆ ಕೆನಡ ತಂಡವು ಶೂ°ರ್‌ ಬದಲಿಗೆ ವಾಸೆಕ್‌ ಪಾಸ್ಪಿಸಿಲ್‌ ಅವರನ್ನು ಕಣಕ್ಕೆ ಇಳಿಸುವ ಸಾಧ್ಯತೆಯಿದೆ.

ಡಬಲ್ಸ್‌ನಲ್ಲಿ ಗೆಲುವು ಸಾಧಿಸಲು ಬೋಪಣ್ಣ ಮತ್ತು ರಾಜ ತೀವ್ರ ಹೋರಾಟ ನಡೆಸಿದರು. ಮೊದಲ ಸೆಟ್‌ನಲ್ಲಿ ಒಂದು ಹಂತದಲ್ಲಿ ಉಭಯ ಜೋಡಿ 5-5 ರಲ್ಲಿ ಸಮಬಲದಲ್ಲಿವು. ಆದರೆ ಆಬಳಿಕ ಕೆನಡ ಜೋಡಿ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾಯಿತು. 2ನೇ ಸೆಟ್‌ ಅನ್ನು ಕೆನಡ ಜೋಡಿ ವಶಪಡಿಸಿಕೊಂಡಿತು. ಆದರೆ ಮೂರನೇ ಸೆಟ್‌ನಲ್ಲಿ ಭಾರತೀಯ ಜೋಡಿ ತಿರುಗೇಟು ನೀಡಿತು. ಇದರಿಂದಾಗಿ ಪಂದ್ಯ ಮತ್ತೆ ರೋಚಕ ಹಂತ ತಲುಪಿತ್ತು. ಅನಂತರ ನಡೆದ 4ನೇ ಸೆಟ್‌ನಲ್ಲಿ ಕೆನಡ ಜೋಡಿ ಮೇಲುಗೈ ಸಾಧಿಸಿ ಪಂದ್ಯವನ್ನು ವಶಪಡಿಸಿಕೊಂಡಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next