ದುಬಾೖ: ಕಳೆದ ಐಪಿಎಲ್ ವೇಳೆ ಮೊದಲು ಸನ್‌ರೈಸರ್ ತಂಡದ ನಾಯಕತ್ವದಿಂದ, ಬಳಿಕ ಆಡುವ ಬಳಗದಿಂದ, ಕೊನೆಗೆ ತಂಡದಿಂದಲೇ ಕೈಬಿಡಲ್ಪಟ್ಟ ಆಸ್ಟ್ರೇಲಿಯದ ಎಡಗೈ ಆರಂಭಕಾರ ಡೇವಿಡ್ ವಾರ್ನರ್ ಅನಂತರ ಜಾಗತಿಕ ಕ್ರಿಕೆಟ್‌ನಲ್ಲಿ ತೋರ್ಪಡಿಸಿದ ಸಾಧನೆ ನಿಜಕ್ಕೂ ಅಮೋಘ. ಟಿ20 ವಿಶ್ವಕಪ್‌ನಲ್ಲಿ ಮಿಂಚಿದ ಬಳಿಕ ಆ್ಯಶಸ್ ಸರಣಿಯ ಬ್ರಿಸ್ಬೇನ್ ಟೆಸ್ಟ್ ಪಂದ್ಯದಲ್ಲೂ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಅವರ ಈ ಸಾಧನೆಗಾಗಿ “ಐಸಿಸಿ ತಿಂಗಳ ಕ್ರಿಕೆಟಿಗ’ ಪ್ರಶಸ್ತಿ ಒಲಿದು ಬಂದಿದೆ.
ನವೆಂಬರ್ ತಿಂಗಳ ವನಿತಾ ವಿಭಾಗದ ಈ ಪ್ರಶಸ್ತಿ ವೆಸ್ಟ್ ಇಂಡೀಸ್‌ನ ಹ್ಯಾಲಿ ಮ್ಯಾಥ್ಯೂಸ್ ಅವರಿಗೆ ಒಲಿದಿದೆ.
ಪ್ರಶಸ್ತಿ ರೇಸ್‌ನಲ್ಲಿ ಡೇವಿಡ್ ವಾರ್ನರ್ ಪಾಕಿಸ್ಥಾನದ ಆರಂಭಕಾರ ಅಬಿದ್ ಅಲಿ ಮತ್ತು ನ್ಯೂಜಿಲ್ಯಾಂಡಿನ ವೇಗಿ ಟಿಮ್ ಸೌಥಿ ಅವರನ್ನು ಹಿಂದಿಕ್ಕಿದರು.
ಟಿ20 ವಿಶ್ವಕಪ್‌ನ 7 ಪಂದ್ಯಗಳಲ್ಲಿ 146.70 ಸ್ಟ್ರೈಕ್‌ರೇಟ್‌ನೊಂದಿಗೆ 289 ರನ್ ಪೇರಿಸಿದ ಹೆಗ್ಗಳಿಕೆ ಡೇವಿಡ್ ವಾರ್ನರ್ ಅವರದಾಗಿತ್ತು. ಇದರಲ್ಲಿ 4 ಪಂದ್ಯಗಳಷ್ಟೇ “ತಿಂಗಳ ಕ್ರಿಕೆಟಿಗ’ ಆಯ್ಕೆಯ ವ್ಯಾಪ್ತಿಗೆ ಒಳಪಟ್ಟಿದ್ದವು. ಇಲ್ಲಿ 151.44 ಸ್ಟ್ರೈಕ್‌ರೇಟ್‌ನೊಂದಿಗೆ 209 ರನ್ ಪೇರಿಸಿದ್ದರು. ಪಾಕಿಸ್ಥಾನ ವಿರುದ್ಧದ ಸೆಮಿಫೈನಲ್‌ನಲ್ಲಿ 49, ನ್ಯೂಜಿಲ್ಯಾಂಡ್ ಎದುರಿನ ಫೈನಲ್‌ನಲ್ಲಿ ಅರ್ಧ ಶತಕ ಬಾರಿಸಿದ ಸಾಧನೆ ವಾರ್ನರ್ ಅವರದಾಗಿತ್ತು. ವೆಸ್ಟ್ ಇಂಡೀಸ್ ಎದುರಿನ ಸೂಪರ್-12 ಮುಖಾಮುಖೀಯಲ್ಲಿ ಅಜೇಯ 89 ರನ್ ಹೊಡೆದು ಪಂದ್ಯಶ್ರೇಷ್ಠ ಗೌರವಕ್ಕೂ ಪಾತ್ರರಾಗಿದ್ದರು.
ಟಿ20 ವಿಶ್ವಕಪ್ ಕೂಟದ ಸರಣಿಶ್ರೇಷ್ಠ ಆಟಗಾರನೆನಿಸಿದ್ದು ವಾರ್ನರ್‌ಗೆ ಸಂದ ಮಹೋನ್ನತ ಗೌರವವಾಗಿದೆ.
ಇದನ್ನೂ ಓದಿ:ಚಿನ್ನ ಗೆದ್ದ ಅಜಯ್ ಸಿಂಗ್ ಕಾಮನ್ವೆಲ್ತ್ ಗೇಮ್ಸ್‌ಗೆ ಆಯ್ಕೆ
ಮ್ಯಾಥ್ಯೂಸ್‌ಗೆ 2ನೇ ಗೌರವ
ಹ್ಯಾಲಿ ಮ್ಯಾಥ್ಯೂಸ್‌ಗೆ ತಿಂಗಳ ಆಟಗಾರ್ತಿ ಪ್ರಶಸ್ತಿ ಲಭಿಸಿದ ಎರಡನೇ ನಿದರ್ಶನ ಇದಾಗಿದೆ. ಅವರಿಗೆ ಕಳೆದ ಜುಲೈಯಲ್ಲಿ ಮೊದಲ ಸಲ ಈ ಪ್ರಶಸ್ತಿ ಒಲಿದಿತ್ತು.
ಈ ಬಾರಿಯ ಪ್ರಶಸ್ತಿ ರೇಸ್‌ನಲ್ಲಿ ಹ್ಯಾಲಿ ಮ್ಯಾಥ್ಯೂಸ್ ಪಾಕಿಸ್ಥಾನದ ಅನಾಮ್ ಅಮಿನ್ ಮತ್ತು ಬಾಂಗ್ಲಾದೇಶದ ನಾಹಿದಾ ಅಖ್ತರ್ ಅವರನ್ನು ಮೀರಿ ನಿಂತರು. ನವೆಂಬರ್ ತಿಂಗಳ 4 ಏಕದಿನ ಪಂದ್ಯಗಳಲ್ಲಿ ಮ್ಯಾಥ್ಯೂಸ್ 141 ರನ್ ಜತೆಗೆ 9 ವಿಕೆಟ್ ಸಂಪಾದಿಸಿದ್ದರು.