Advertisement

ಭವಿಷ್ಯದಲ್ಲಿ ವಿದ್ಯುತ್‌ ಚಾಲಿತ ವಾಹನಗಳೇ ಪರ್ಯಾಯ

05:58 PM Mar 07, 2020 | Team Udayavani |

ದಾವಣಗೆರೆ: ಮುಂದಿನ ದಿನಗಳಲ್ಲಿ ಪೆಟ್ರೋಲ್‌, ಡೀಸೆಲ್‌, ಇತರೆ ತೈಲಗಳು ಸಿಗದಂತಾಗಲಿದ್ದು, ಆಗ ಪರ್ಯಾಯ ವ್ಯವಸ್ಥೆಯಾಗಿ ನಮಗೆ ವಿದ್ಯುಚ್ಚಾಲಿತ ವಾಹನಗಳು ಸಹಾಯಕ್ಕೆ ಬರಲಿವೆ ಎಂದು ಬಾಪೂಜಿ ಇಂಜಿನಿಯರಿಂಗ್‌ ಕಾಲೇಜಿನ ಪ್ರಾಚಾರ್ಯ ಡಾ| ಎಂ.ಸಿ.ನಟರಾಜ್‌ ಹೇಳಿದ್ದಾರೆ.

Advertisement

ಶುಕ್ರವಾರ, ಬಿ.ಐ.ಇ.ಟಿ. ಕಾಲೇಜಲ್ಲಿ ಯಾಂತ್ರಿಕ ವಿಭಾಗದ ವತಿಯಿಂದ ಆಯೋಜಿಸಿದ್ದ ವಿದ್ಯುಚ್ಚಾಲಿತ ವಾಹನಗಳ ವಿನ್ಯಾಸ ಮತ್ತು ತಯಾರಿಕೆ ಬಗ್ಗೆ ಮೂರು ದಿನಗಳ ಕಾರ್ಯಗಾರ ಉದ್ಘಾಟಿಸಿ, ಮಾತನಾಡಿದ ಅವರು, ಕೆಲವೇ ದಿನಗಳಲ್ಲಿ ವಿದ್ಯುಚ್ಚಾಲಿತ ವಾಹನಗಳ ಯುಗ ಪ್ರಾರಂಭವಾಗಲಿದೆ. ವಾಹನಗಳಿಗೆ ಬೇಕಾಗುವ ಇಂಧನ ಕೊರತೆ ಉಂಟಾಗಲಿದ್ದು, ಆಗ ಪರ್ಯಾಯ ವ್ಯವಸ್ಥೆಯಾಗಿ ವಿದ್ಯುಚ್ಚಾಲಿತ ವಾಹನಗಳೇ ಅನಿವಾರ್ಯವಾಗಲಿವೆ ಎಂದರು.

ಕಾಲೇಜಿನ ನಿರ್ದೇಶಕ ಪ್ರೊ| ವೈ. ವೃಷಬೇಂದ್ರಪ್ಪ ಮಾತನಾಡಿ, ಕಾಲಕಾಲಕ್ಕೆ ತಂತ್ರಜ್ಞಾನ ಬದಲಾವಣೆ ಸಾರಿಗೆ ವಾಹನಗಳಲ್ಲಿ ಆಗುತ್ತಿದೆ. ಆ ಬದಲಾವಣೆಗೆ ನಾವು ಹೊಂದಿಕೊಂಡು ಆವಿಷ್ಕಾರ ಮಾಡಬೇಕಿದೆ. ಬ್ಯಾಟರಿ ಚಾರ್ಜ್‌ ಮಾಡುವುದೇ ಈ ವಾಹನಗಳಲ್ಲಿ ಸವಾಲಿನ ಕೆಲಸವಾಗಿದೆ ಎಂದರು. ಯಾಂತ್ರಿಕ ವಿಭಾಗದ ಮುಖ್ಯಸ್ಥ ಡಾ| ಎಸ್‌ .ಕುಮಾರಪ್ಪ ಮಾತನಾಡಿ, ಲಿಥಿಯಂ ಬ್ಯಾಟರಿಗೆ ಬದಲಾಗಿ ಪರ್ಯಾಯ ತಂತ್ರಜ್ಞಾನ ಅಭಿವೃದ್ಧಿಪಡಿಸಲಾಗಿದೆ. ಮೊದಲು ಬ್ಯಾಟರಿ ಚಾರ್ಜ್‌ ಮಾಡಲು 2-3 ಗಂಟೆ ಬೇಕಾಗುತ್ತಿತ್ತು. ಇದೀಗ ಕೆಲವೇ ಸೆಕೆಂಡುಗಳಲ್ಲಿ ರೀಚಾರ್ಜ್‌ ಮಾಡಲು ಫ್ಲಾÂಷ್‌ ಚಾರ್ಜರ್‌ ಬಂದಿವೆ ಎಂದು ತಿಳಿಸಿದರು.

ಸಮಾರಂಭದಲ್ಲಿ ಮೆಕ್ಯಾನಿಕಲ್‌ ವಿದ್ಯಾರ್ಥಿ ವೇದಿಕೆಯ ಆಯೋಜಕ ಡಿ.ಇ.ಉಮೇಶ್‌, ಟಿ.ಆರ್‌.ಮೋಹನ್‌ ಕಾಲೇಜಿನ ಅಕಾಡೆಮಿಕ್‌ ಡೀನ್‌ ಡಾ| ಕೆ ಸದಾಶಿವಪ್ಪ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಮಂಜುಳಾ ಸ್ವಾಗತಿಸಿ, ರುಕಯ್ಯ ನಿರೂಪಿಸಿದರು. ನೇಹಾ ವಂದಿಸಿದರು.

ಕಾರ್ಯಗಾರ ಉದ್ದೇಶ: ಕೇಂದ್ರ ಸರ್ಕಾರ 2030ರ ವರೆಗೆ ದೇಶದಲ್ಲಿ ಸುಮಾರು ಶೇ. 30-40ರಷ್ಟು ವಿದ್ಯುತ್‌ ಚಾಲಿತ ವಾಹನಗಳನ್ನು ಉಪಯೋಗಿಸು ವಂತಾಗಬೇಕೆಂದು ನಿರ್ಧರಿಸಿದೆ. ಇದರಿಂದ ವಾಯು ಮತ್ತು ಶಬ್ದ ಮಾಲಿನ್ಯ ಕಡಿಮೆಗೊಳಿಸಬಹುದು.
ಮುಂದಿನ ದಿನಗಳಲ್ಲಿ ಸರಿಸುಮಾರು ಕನಿಷ್ಠ 50 ಲಕ್ಷ ಉದ್ಯೋಗ ಸೃಷ್ಟಿಯನ್ನು ಈ ಕ್ಷೇತ್ರದಲ್ಲಿ ನಿರೀಕ್ಷಿಸಬಹುದು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ವಿದ್ಯುಚ್ಚಾಲಿತ ವಾಹನಗಳ ವಿನ್ಯಾಸ ತಯಾರಿಕೆಗೆ ಬೇಕಾಗುವ ಕೌಶಲ್ಯಾಭಿವೃದ್ಧಿಗೆ ಮತ್ತು ಸ್ವಂತ ಉದ್ಯೋಗ ಪ್ರಾರಂಭಿಸುವುದಕ್ಕೆ ಪ್ರೋತ್ಸಾಹ ನೀಡುತ್ತಿದೆ. ಇದನ್ನು ಗಮನದಲ್ಲಿ ಇಟ್ಟುಕೊಂಡು
ಬಿಐಇಟಿ ಕಾಲೇಜಿನ ಯಾಂತ್ರಿಕ ವಿಭಾಗವು ವಿದ್ಯುಚ್ಚಾಲಿತ ವಾಹನಗಳ ತಯಾರಿಕೆಯ ಬಗ್ಗೆ ವಿದ್ಯಾರ್ಥಿಗಳಿಗೆ ಮೂರು ದಿನಗಳ ಕಾರ್ಯಾಗಾರ ಏರ್ಪಡಿಸಿದೆ.

Advertisement

ಸಂಪನ್ಮೂಲ ವ್ಯಕ್ತಿಗಳಾಗಿ ಬೆಂಗಳೂರಿನ ಡೆಸಿಬಲ್‌ ಲ್ಯಾಬ್‌ನ ಕಾರ್ಯನಿರ್ವಾಹಕ
ಸೂರಜ್‌ ಎಸ್‌.ಡಿ. ಮತ್ತು ತಂಡದವರು ವಿವಿಧ ವಿಷಯ ಬೋಧಿಸಿ, ಪ್ರಾಯೋಗಿಕವಾಗಿ ಎರಡು ವಾಹನಗಳನ್ನು ವಿದ್ಯಾರ್ಥಿಗಳಿಂದ ತಯಾರಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next