ದಾವಣಗೆರೆ: ರಾಷ್ಟ್ರೀಯ ಹಬ್ಬವಾದ ಗಣರಾಜ್ಯೋತ್ಸವ ಅರ್ಥಪೂರ್ಣವಾಗಿರಬೇಕು. ದೇಶದ ಗಣರಾಜ್ಯಕ್ಕಾಗಿ ಶ್ರಮಿಸಿದ ಎಲ್ಲಾ ಮಹನೀಯರನ್ನು ನೆನೆಯುವ ದಿನ ಇದಾಗಿದ್ದು, ಅವರ ಶ್ರಮ, ತ್ಯಾಗ, ಬಲಿದಾನಕ್ಕೆ ನಾವು ಗೌರವ ಸಮರ್ಪಿಸಬೇಕಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದ್ದಾರೆ.
ತಮ್ಮ ಕಚೇರಿ ಸಭಾಂಗಣದಲ್ಲಿ 71ನೇ ಗಣರಾಜ್ಯೋತ್ಸವ ಪೂರ್ವಸಿದ್ಧತೆ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜ.26ರಂದು ಬೆಳಗ್ಗೆ 9 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವರಿಂದ ಧ್ವಜಾರೋಹಣ ನೆರವೇರಲಿದೆ. ಎಲ್ಲ ಇಲಾಖೆ ಮುಖ್ಯಸ್ಥರು ತಮ್ಮ ತಮ್ಮ ಕಚೇರಿಗಳಲ್ಲಿ ಧ್ವಜಾರೋಹಣ ನೆರವೇರಿಸಿ. 9 ಗಂಟೆಯೊಳಗಾಗಿ ಕ್ರೀಡಾಂಗಣದಲ್ಲಿ ಹಾಜರಿರಬೇಕು. ಯಾವುದೇ ಕಾರಣಕ್ಕೂ ಸರ್ಕಾರಿ ಇಲಾಖೆ ಅ ಧಿಕಾರಿ ಮತ್ತು ಸಿಬ್ಬಂದಿ ರಜೆ ಎಂಬುದಾಗಿ ಭಾವಿಸದೇ ತಪ್ಪದೇ ಹಾಜರಿರಬೇಕು. ಹಾಜರಾಗದವರಿಗೆ ನೋಟಿಸ್ ನೀಡಲಾಗುವುದು ಎಂದರು.
10 ಸಾವಿರ ಜನರು ಕುಳಿತುಕೊಳ್ಳಲು ಸಾಮರ್ಥ್ಯದ ಕ್ರೀಡಾಂಗಣ ಅಂದು ತುಂಬಬೇಕು. ಅತಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸುವಂತೆ ಶಿಕ್ಷಣ ಇಲಾಖೆ ಕ್ರಮ ವಹಿಸಬೇಕು. ಮಕ್ಕಳಿಗೆ ಶುದ್ದ ಕುಡಿಯುವ ನೀರಿನ ವ್ಯವಸ್ಥೆ, ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಪೆರೇಡ್‌ನಲ್ಲಿ ಭಾಗವಹಿಸುವ ಮಕ್ಕಳಿಗೆ ಅಗತ್ಯ ಸೌಲಭ್ಯ ಕಲ್ಪಿಸಬೇಕು ಎಂದು ಸೂಚಿಸಿದರು. ಪ್ಲಾಸ್ಟಿಕ್ ಧ್ವಜ, ಪ್ಲಾಸ್ಟಿಕ್ ಹೂಗುಚ್ಚ ಮತ್ತು ನೀರಿನ ಬಾಟಲ್‌ಗಳನ್ನು ಯಾವುದೇ ಕಾರಣಕ್ಕೂ ತರುವಂತಿಲ್ಲ. ಅಪರ ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ, ತಹಶೀಲ್ದಾರ್, ಪೊಲೀಸ್ ಉಪ ಅಧೀಕ್ಷಕರು, ಮಹಾನಗರಪಾಲಿಕೆ ಆಯುಕ್ತರು ಕಾರ್ಯಕ್ರಮದ ಮೇಲುಸ್ತುವಾರಿ ವಹಿಸಿಕೊಂಡು ಸಹಕರಿಸಬೇಕು. ಎಲ್ಲಾ ಸರ್ಕಾರಿ ಇಲಾಖೆಗಳಲ್ಲಿ ಧ್ವಜ ಸಂಹಿತಿ ಕಾಪಾಡಬೇಕು. ಎಲ್ಲಾ ಶಾಲೆಗಳಲ್ಲಿ 7.30ಕ್ಕೆ ಧ್ವಜಾರೋಹಣಕ್ಕೆ ಕ್ರಮಕೈಗೊಳ್ಳುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯವರಿಗೆ ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ ಮಾತನಾಡಿ, ಗಣರಾಜ್ಯೋತ್ಸವ ಸಂಬಂಧ ಆಯಾ ಇಲಾಖೆಯವರು ತಮಗೆ ವಹಿಸಿರುವ ಜವಾಬ್ದಾರಿ ನಿರ್ವಹಿಸಬೇಕು. ಎಲ್ಲಾ ಸರ್ಕಾರಿ, ಅರೆ ಸರ್ಕಾರಿ ಹಾಗೂ ಪ್ರಮುಖ ಖಾಸಗಿ ಕಚೇರಿಗಳ ಮೇಲೆ ಜ.25 ಮತ್ತು 26 ರಂದು ವಿದ್ಯುತ್ ದೀಪಾಲಂಕಾರ ಮಾಡಿಸಬೇಕು. ಅಂದು ಸಂಜೆ ಕುವೆಂಪು ಕನ್ನಡ ಭವನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ವೇದಿಕೆ ನಿರ್ಮಾಣ, ಆಸನದ ವ್ಯವಸ್ಥೆ, ಧ್ವನಿ ವರ್ಧಕ, ವಿದ್ಯುತ್ ಪೂರೈಕೆ ಕುರಿತು ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕರು, ಕಾರ್ಯಪಾಲಕ ಅಭಿಯಂತರರು ಸಂಪೂರ್ಣ ಮೇಲುಸ್ತುವಾರಿ ನೋಡಿಕೊಳ್ಳಬೇಕು. ಕ್ರೀಡಾಂಗಣ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಪೊಲೀಸ್ ಇಲಾಖೆಯವರು ಭದ್ರತೆ ಮತ್ತು ಸುರಕ್ಷತೆ ಒದಗಿಸಬೇಕು. ಕ್ರೀಡಾಂಗಣದಿಂದ ಕೆಲವು ಶಾಲೆಗಳು ದೂರವಿದ್ದು, ಆರ್‌ಟಿಓ ಶಾಲಾ ಮಕ್ಕಳಿಗೆ ಬಸ್ ವ್ಯವಸ್ಥೆ ಕಲ್ಪಿಸಬೇಕು ಎಂದು ಹೇಳಿದರು. ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸರ್ಕಾರಿ ಅಧಿಕಾರಿ, ನೌಕರರಿಗೆ ಸರ್ವೋತ್ತಮ ಪ್ರಶಸ್ತಿ ನೀಡಿ, ಸನ್ಮಾನಿಸಲಾಗುವುದು ಎಂದು ಅವರು ತಿಳಿಸಿದರು.
ಸಭೆಯಲ್ಲಿ ಉಪ ವಿಭಾಗಾಧಿಕಾರಿ ಮಮತಾ ಹೊಸಗೌಡರ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ನಜ್ಮಾ.ಜಿ, ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.