ದಾವಣಗೆರೆ: ಅಯೋಧ್ಯೆಯ ರಾಮ ಜನ್ಮಭೂಮಿ ಸಂಬಂಧ ಸುಪ್ರೀಂಕೋರ್ಟ್ ಸಾಂವಿಧಾನಿಕ ಪೀಠ ನೀಡಿರುವ ತೀರ್ಪು ಅತ್ಯಂತ ಸ್ವಾಗತಾರ್ಹ ಎಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್ ಹೇಳಿದರು.
ನಗರದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶ್ರೀರಾಮ ಜನ್ಮಭೂಮಿ ಬಗೆಗಿನ ಹೋರಾಟ 500 ವರ್ಷಗಳದ್ದು. ಸರ್ವೋಚ್ಛ
ನ್ಯಾಯಾಲಯದ ತೀರ್ಪಿನಿಂದ ಈಗ ಶ್ರೀರಾಮನಿಗೆ ಮುಕ್ತಿ ಸಿಕ್ಕಿದೆ. ಕಳೆದ 500 ವರ್ಷಗಳ 76 ಸಂಘರ್ಷಗಳಲ್ಲಿ ಮಡಿದ 30 ಲಕ್ಷ ಜನರ ತ್ಯಾಗ-ಬಲಿದಾನಕ್ಕೆ ಇದೀಗ ನ್ಯಾಯ ದೊರೆತಿದೆ. ತೀರ್ಪಿನ ದಿನ ಭಾರತೀಯರಿಗೆ ಅತ್ಯಂತ ಸಂತಸದ ದಿನವಾಗಿದೆ. ಐತಿಹಾಸಿಕವಾಗಿ ಇದು ಶ್ರೇಷ್ಠ ದಿನ. ಲಕ್ಷಾಂತರ ಜನರ ಹೋರಾಟಕ್ಕೆ ಜಯ ಸಿಕ್ಕಿದೆ ಎಂದು ಬಣ್ಣಿಸಿದರು.
ನ್ಯಾಯಾಲಯದ ತೀರ್ಪಿನಿಂದಾಗಿ ಮುಂದಿನ ದಿನಗಳಲ್ಲಿ ಶ್ರೀರಾಮನ ಜನ್ಮಭೂಮಿಯಲ್ಲಿ ಭವ್ಯ ಮಂದಿರ ನಿರ್ಮಾಣವಾಗುವುದು ಖಚಿತ ಆಯಿತು. ಮುಸ್ಲಿಮರಿಗೂ ಜಾಗ ನೀಡಲು ನ್ಯಾಯಾಲಯ ಆದೇಶಿಸಿದೆ. ಅದು ಅವರಿಗೆ ಬಿಟ್ಟ ವಿಷಯ. ರಾಮನ ಮೂಲ ಸ್ಥಾನ ದಾಖಲೆ ಮೂಲಕ ಸಿಕ್ಕದ್ದು ನಮ್ಮ ವಿಜಯ ಎಂದು ಹೇಳಿದರು.
ರಾಮ ಮಂದಿರ ನಿರ್ಮಾಣದ ಬಗ್ಗೆ ವಿಶ್ವ ಹಿಂದೂ ಪರಿಷತ್ ನ ರಾಮ ಜನ್ಮಭೂಮಿ ನ್ಯಾಸ್ ಮಂಚ್ ಎಂಬ ಟ್ರಸ್ಟ್ ರಚನೆಯಾಗಿದೆ. ಈಗಾಗಲೇ ಮಂದಿರದ ನಿರ್ಮಾಣಕ್ಕಾಗಿ ಗೋಡೆ, ಮೇಲ್ಛಾವಣಿ, ಕಟ್ಟಡ ಸಿದ್ಧಗೊಂಡಿವೆ. 6 ತಿಂಗಳ ಒಳಗೆ ದೇವಸ್ಥಾನ ನಿರ್ಮಾಣವಾಗಲಿದೆ. ಕೇಂದ್ರ ಸರ್ಕಾರ ಮಂದಿರ ನಿರ್ಮಾಣ ಕಾರ್ಯವನ್ನು ಆ ಟ್ರಸ್ಟ್‌ಗೆ ವಹಿಸುವುದು ಸೂಕ್ತ ಎಂದು ಹೇಳಿದರು.