Advertisement

ಸಾಧಕ ವಿಕಲಚೇತನರೇ ಸ್ಫೂರ್ತಿಯಾಗಲಿ

11:54 AM Dec 04, 2019 | Naveen |

ದಾವಣಗೆರೆ: ದೇವರು ಎಲ್ಲ ಸೃಷ್ಟಿಯಲ್ಲೂ ಒಂದೊಂದು ವಿಶೇಷತೆ ನೀಡಿರುತ್ತಾನೆ. ಅಂತಹ ಪ್ರತಿಭೆ ಗುರುತಿಸಿ, ಪ್ರೋತ್ಸಾಹಿಸಬೇಕಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದ್ದಾರೆ. ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಕಾನೂನು ಸೇವಾ ಪ್ರಾ ಧಿಕಾರ ಮತ್ತು ವಿಕಲಚೇತನರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ನಗರದ ರೇಣುಕಾ ಮಂದಿರದಲ್ಲಿ ಏರ್ಪಡಿಸಿದ್ದ ವಿಶ್ವ ವಿಕಲಚೇತನರ ದಿನಾಚರಣೆಯಲ್ಲಿ ಅತಿಥಿಯಾಗಿ ಅವರು ಮಾತನಾಡಿದರು.

Advertisement

ವಿಕಲಚೇತನರನ್ನು ವಿಶೇಷಚೇತನರೆಂದು ಕರೆಯುವೆ. ವಿಕಲತೆ ಶಾಪ ಎಂಬುದಾಗಿ ಚಿಂತಿಸಬಾರದು. ಒಂದೇ ಕಾಲಿನಲ್ಲಿ ಮೌಂಟ್‌ಎವೆರೆಸ್ಟ್‌ ಶಿಖರ ಏರಿ ಸಾಧನೆ ಮಾಡಿದ ಮಹಿಳೆಯರಿದ್ದಾರೆ. ಅಂತಹವರ ಸಾಧನೆ ಸ್ಫೂತಿಯಾಗಬೇಕು. ಜೀವನದಲ್ಲಿ ನಾವು ಯಾರಿಗೂ ಹೊರೆಯಾಗಿರಬಾರದು ಎಂದು ನಿಮ್ಮ ಆಶಯ ನಮಗೆ ತಿಳಿಸಿದ್ದೀರಿ. ನಿಮ್ಮ ಜೊತೆಯಾಗಿ, ನಿಮ್ಮ ಕಷ್ಟಗಳಿಗೆ ಬೆನ್ನೆಲುಬಾಗಿ ಜಿಲ್ಲಾಡಳಿತ ಯಾವಾಗಲೂ ನಿಮ್ಮ ಜೊತೆ ಇರಲಿದೆ ಎಂದು ಅವರು ಭರವಸೆ ನೀಡಿದರು.

ಮುಖ್ಯ ಅತಿಥಿಗಳಾಗಿದ್ದ ಹಿರಿಯ ಸಿವಿಲ್‌ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರಭು ಎನ್‌.ಬಡಿಗೇರ್‌ ಮಾತನಾಡಿ, ಜಗತ್ತಿನ ಅದ್ಭುತ ಪ್ರತಿಭೆಗಳೆಂದರೆ ವಿಶೇಷಚೇತನರು. ಅವರು ಪ್ರತಿಭೆಗಳ ನಿಧಿಯೇ ಆಗಿದ್ದಾರೆ. ಶಾರದೆ ಅವರಿಗೆ ಒಲಿದಿದ್ದು, ಎಲ್ಲ ಕ್ಷೇತ್ರಗಳಲ್ಲಿ ಅವರು ತಮ್ಮ ಪ್ರತಿಭೆ ಹೊರ ಹೊಮ್ಮಿಸುತ್ತಿರುವುದನ್ನು ಕಾಣುತ್ತಿದ್ದೇವೆ. ವಿಶೇಷಚೇತನರು ಕೀಳರಿಮೆ ತೊರೆದು ಛಲದಿಂದ ಮುಂದೆ ಬರಬೇಕು ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ಜಿಪಂ ಅಧ್ಯಕ್ಷೆ ಯಶೋಧಮ್ಮ ಮರುಳಸಿದ್ದಪ್ಪ, ದಿವ್ಯಾಂಗರು ಸರ್ವಾಂಗರಿಗಿಂತ ಎಲ್ಲ ವಿಷಯಗಳಲ್ಲೂ ಮಿಗಿಲಾಗಿದ್ದಾರೆ. ಅಂಗವೈಕಲ್ಯತೆ ಶಾಪವಲ್ಲ. ಅವರು ವಿಶೇಷ ಪ್ರತಿಭೆಯಿಂದ ಎಲ್ಲ ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದು, ಅವರಲ್ಲಿ ಆತ್ಮವಿಶ್ವಾಸ ತುಂಬುವ ಅವಶ್ಯಕತೆ ಇದೆ ಎಂದರು.

ಸರ್ಕಾರಿ ಹೆಣ್ಣುಮಕ್ಕಳ ಅಂಧರ ಶಾಲೆಯ ವಿಧ್ಯಾರ್ಥಿ ಹಾಗೂ ಸರಿಗಮಪ ಸೀಸನ್‌ 16ರ ಸ್ಪರ್ಧಿಸಂಗೀತ ಮಾತನಾಡಿ, ಶಾಲೆಯಲ್ಲಿ ಸಂಗೀತವನ್ನು ಕಲಿಸಿದ ಹಿನ್ನೆಲೆಯಲ್ಲಿ ಹೆಚ್ಚಿನ ಆಸಕ್ತಿ ಮೂಡಿ ಸರಿಗಮಪ ಜ್ಯೂನಿಯರ್ಸ್‌ ಸೀಸನ್‌ 14ರ ಆಡಿಷನ್‌ ನಲ್ಲಿ ಭಾಗಿಯಾಗಿದ್ದೆ, ಆದರೆ, ಕಾರಣಾಂತರದಿಂದ ಅಲ್ಲಿ ಆಯ್ಕೆ ಆಗಲಿಲ್ಲ. ಸೀಸನ್‌ 16ಕ್ಕೆ ಆಯ್ಕೆ ಆಗಿ ಅಂತಿಮ ಹಂತದವರೆಗೆ ತಲುಪಿದೆ ಎಂದು ತಮ್ಮ ಸಾಧನೆ ಅನುಭವ ಹಂಚಿಕೊಂಡರು.

Advertisement

ಜಿಲ್ಲಾ ಅಂಗವಿಕಲ ಹಾಗೂ ಹಿರಿಯ ನಾಗರಿಕರ ಕಲ್ಯಾಣ ಇಲಾಖೆಯ ಅ ಧಿಕಾರಿ ಜಿ.ಎಸ್‌. ಶಶಿಧರ್‌ ಪ್ರಾಸ್ತಾವಿಕವಾಗಿ ಮಾತನಾಡಿ, ಎಲ್ಲರ ಆಶಯದಂತೆ ವಿಕಲಚೇತನರು ಎಂಬ ಪದವು ಮುಂದಿನ ದಿನಗಳಲ್ಲಿ ವಿಶೇಷ ಚೇತನರು ಎಂದು ಬದಲಾಗಲಿದೆ. ಜಿಲ್ಲೆಯಲ್ಲಿ 23900 ವಿಕಲಚೇತನರಿದ್ದು, ಇಲ್ಲಿಯವರೆಗೂ 12390 ವಿಕಲಚೇತನರು ಆನ್‌ಲೈನ್‌ ಅರ್ಜಿ ಸಲ್ಲಿಸಿ 2900 ಮಂದಿ ಯು.ಡಿ.ಐ.ಡಿ ಸ್ಮಾರ್ಟ್‌ ಕಾರ್ಡ್‌ ಪಡೆದಿದ್ದಾರೆ. 2020ರಿಂದ ಕೈಬರಹದ ಗುರುತಿನ ಚೀಟಿಗಳು ರದ್ದುಗೊಳ್ಳುತ್ತವೆ. ಆದ್ದರಿಂದ ಎಲ್ಲರೂ ಸಹ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ ಕಾರ್ಡ್‌ಗಳನ್ನು ಪಡೆದುಕೊಳ್ಳಬೇಕೆಂದು ಕೋರಿದರು.

53 ಕೆಜಿ ವಿಭಾಗದ ವೇಟ್‌ ಲಿಫ್ಟಿಂಗ್ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟದಲ್ಲಿ ಪ್ರಥಮ ಬಹುಮಾನ ಪಡೆದ ವಿಕಲಚೇತನ ಸುನಿಲ್‌ ಕುಮಾರ್‌, ಸರಿಗಮಪ ಜ್ಯೂನಿಯರ್ ಸ್ಪರ್ಧಿ ಸಂಗೀತ, ರಾಜ್ಯ ಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಅಂಧರ ಶಾಲೆಯ ವಿದ್ಯಾರ್ಥಿಗಳಾದ ಜಿ.ಟಿ.ಕಿರಣ್‌, ಬಿ.ಎನ್‌. ಮಂಜುಳ ಹಾಗೂ ಅಂತಾರಾಷ್ಟ್ರೀಯ ಈಜುಪಟು ಮುತ್ತೇಶ್‌ ಹಾಗೂ ಇತರೆ ಸಾಧಕ ಮಕ್ಕಳನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಜೊತೆಗೆ ವಿಕಲಚೇತನರ ವಿಶೇಷ ಶಾಲೆಗಳಲ್ಲಿ ಕಲಿಸುತ್ತಿರುವ ಶಿಕ್ಷಕರು, ಈ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ದುರುಗೇಶ್‌, ಜಯಾಬಾಯಿ, ಬಸವರಾಜ್‌ ಹಾಗೂ ಮಾರುತಿ, ಅಧಿಕಾರಿ ಜಿ.ಎಸ್‌.ಶಶಿಧರ್‌ ಇವರನ್ನು ಸಹ ಗೌರವಿಸಲಾಯಿತು. ಸಾರ್ವಜನಿಕ ಶಿಕ್ಷಣ ಇಲಾಖೆ ವಿಕಲಚೇತನ ಮಕ್ಕಳಿಗಾಗಿ ಏರ್ಪಡಿಸಿದ್ದ ವಿವಿಧ ಸ್ಪರ್ಧಾ ವಿಜೇತರಿಗೆ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಯಿತು.

ತಾಲೂಕು ಪಂಚಾಯ್ತಿ ಅಧ್ಯಕ್ಷೆ ಮಮತಾ ಮಲ್ಲೇಶಪ್ಪ, ಜಿಲ್ಲಾ ಅಂಗವಿಕಲರ ಶ್ರೇಯೋಭಿವೃದ್ಧಿ ಸಂಘದ ವೀರಯ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ವಿಜಯಕುಮಾರ್‌, ಆಶಾಕಿರಣ ಟ್ರಸ್ಟ್‌ ಅಧ್ಯಕ್ಷ ರಮಣ ರಾವ್‌, ಸಿಆರ್‌ಸಿ ನಿರ್ದೇಶಕ ಜ್ಞಾನವೇಲ್‌, ವಿವಿಧ ಸಂಘ ಸಂಸ್ಥೆಗಳ ಪದಾಧಿ ಕಾರಿಗಳು ಕಾರ್ಯಕ್ರಮದಲ್ಲಿದ್ದರು. ಚನ್ನಗಿರಿ ಎಂ.ಆರ್‌.ಡಬ್ಲ್ಯೂ ಸುಬ್ರಹ್ಮಣ್ಯ ಸ್ವಾಗತಿಸಿ, ನಿರೂಪಿಸಿದರು. ದಾವಣಗೆರೆ ಎಂ.ಆರ್‌.ಡಬ್ಲ್ಯೂ ಚನ್ನಪ್ಪ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next