Advertisement

ವಾಲ್ಮೀಕಿ ಜಾತ್ರೋತ್ಸವಕ್ಕೆ 4.47 ಕೋ. ಬಿಡುಗಡೆ

11:27 AM Jan 10, 2020 | Naveen |

ದಾವಣಗೆರೆ: ಹರಿಹರ ತಾಲೂಕು ರಾಜನಹಳ್ಳಿ ವಾಲ್ಮೀಕಿ ಗುರುಪೀಠದಲ್ಲಿ ಫೆ. 8 ಮತ್ತು 9ರಂದು ನಡೆಯಲಿರುವ 2ನೇ ವರ್ಷದ ವಾಲ್ಮೀಕಿ ಜಾತ್ರಾ ಮಹೋತ್ಸವಕ್ಕೆ ಮುಖ್ಯಮಂತ್ರಿಗಳು ಆಗಮಿಸುತ್ತಿದ್ದು, ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು.

Advertisement

ಗುರುವಾರ, ತಮ್ಮ ಕಚೇರಿ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಾತ್ರಾ ಸಿದ್ಧತೆಗಾಗಿ ರಾಜ್ಯ ಸರ್ಕಾರ ಈಗಾಗಲೇ 4 ಕೋಟಿ 47 ಲಕ್ಷ ರೂ.ಗಳನ್ನು ಜಿಲ್ಲಾಡಳಿತಕ್ಕೆ ಬಿಡುಗಡೆ ಮಾಡಿದೆ. ಈಗಾಗಲೇ ಆಡಳಿತಾತ್ಮಕ ಅನುಮೋದನೆ ನೀಡಲಾಗಿದ್ದು, ಸಿದ್ಧತಾ ಕಾರ್ಯ ಆರಂಭಗೊಂಡಿವೆ. ಮೂಲಭೂತ ಸೌಕರ್ಯಗಳ ಜೊತೆಗೆ ಸರ್ಕಾರದ ವಿವಿಧ ಇಲಾಖೆಗಳಿಂದ ಸಾರ್ವಜನಿಕರಿಗೆ ದೊರೆಯುವ ವಿವಿಧ ಸೌಲಭ್ಯಗಳು ಹಾಗೂ ಪರಿಶಿಷ್ಟ ಪಂಗಡದವರ ಕಲ್ಯಾಣ ಕಾರ್ಯಕ್ರಮಗಳನ್ನು ಪ್ರಮುಖವಾಗಿ ಬಿಂಬಿಸುವ ವಸ್ತು ಪ್ರದರ್ಶನ ಮಳಿಗೆಗಳನ್ನು ತೆರೆಯಲಾಗುವುದು ಎಂದರು.

ಎಲ್ಲಾ ಇಲಾಖಾ ಮುಖ್ಯಸ್ಥರು ತಮ್ಮ ತಮ್ಮ ಇಲಾಖೆಗಳಲ್ಲಿ ಲಭ್ಯವಿರುವ ಯೋಜನೆಗಳು, ಕಾರ್ಯಕ್ರಮ ಹಾಗೂ ಟಿ.ಎಸ್‌.ಪಿ. ಅಡಿ ದೊರೆಯುವ ಯೋಜನೆಗಳನ್ನು ಪ್ರದರ್ಶಿಸಲು ಗಮನಹರಿಸಬೇಕು. ಶ್ರೀ ಮಠದ ವತಿಯಿಂದ ಪ್ರಸಾದ ವಿನಿಯೋಗವಿದ್ದು, ಆಹಾರ ಸುರಕ್ಷತೆ ಇಲಾಖೆ ಅಧಿಕಾರಿಗಳು ಆಹಾರ ಪರೀಕ್ಷೆ ನಡೆಸಬೇಕು. ಕುಡಿಯುವ ನೀರು ಸರಬರಾಜು ಇಲಾಖೆಯವರು ಕುಡಿಯುವ ನೀರಿನ ವ್ಯವಸ್ಥೆ, ಮೊಬೈಲ್‌ ಶೌಚಾಲಯ ಸೇರಿದಂತೆ ಮೂಲಭೂತ ಸೌಕರ್ಯಗಳ ಬಗ್ಗೆ ನಿಗಾವಹಿಸಬೇಕು. ಶ್ರೀ ಮಠಕ್ಕೆ ತೆರಳುವ ದಾರಿ ಕಿರಿದಾಗಿದ್ದು ಅಕ್ಕಪಕ್ಕದ ಜಮೀನಿನ ರೈತರ ಮನವೊಲಿಸಿ ಮಠಕ್ಕೆ ಸಾಗಲು ರಸ್ತೆ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.

ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ ಮಾತನಾಡಿ, ರಾಜ್ಯದ 4ನೇ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ಸಮಾಜದ ಬಾಂಧವರು ಎಲ್ಲಾ ಜಿಲ್ಲೆಗಳಲ್ಲಿ ವಾಸಿಸುತ್ತಿದ್ದಾರೆ. ಇಷ್ಟೊಂದು ಜನಸಂಖ್ಯೆ ಹೊಂದಿರುವ ಸಮುದಾಯ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಹಾಗಾಗಿ ತಮ್ಮ ಹಕ್ಕೋತ್ತಾಯಗಳನ್ನು ಈ ಜಾತ್ರಾ ಕಾರ್ಯಕ್ರಮದ ಮೂಲಕ ರಾಜ್ಯ ಸರ್ಕಾರದ ಗಮನಕ್ಕೆ ತರಲಾಗುವುದು. 2 ದಿನದ ಜಾತ್ರೆಗೆ ರಾಜ್ಯದ ವಿವಿಧ ಮೂಲೆಗಳಿಂದ ಜನರು ಆಗಮಿಸುತ್ತಿದ್ದು, ಲಕ್ಷಾಂತರ ಜನ ಸೇರುವ ನಿರೀಕ್ಷೆ ಇದೆ ಎಂದರು.

ಈ ಸಂದರ್ಭವನ್ನು ಸದುಪಯೋಗ ಪಡಿಸಿಕೊಂಡು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜನಪ್ರಿಯ ಯೋಜನೆಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ದೊರೆಯುವಂತೆ ಮಾಡಲು ಹಾಗೂ ಎಲ್ಲಾ ಕಾರ್ಯಕ್ರಮಗಳ ಮಾಹಿತಿ ಎಲ್ಲರಿಗೂ ಸಿಗುವಂತೆ ಜಾಗೃತಿ ಮೂಡಿಸಲಾಗುವುದು. ಕಳೆದ ವರ್ಷದ ಬಜೆಟ್‌ನಲ್ಲಿ ಟಿಎಸ್‌ಪಿ ಯೋಜನೆಯಡಿಯಲ್ಲಿ 30 ಸಾವಿರ ಕೋಟಿ ಹಣ ಮೀಸಲಿಡಲಾಗಿತ್ತು, ಆದರೆ, ಖರ್ಚಾಗಿದ್ದು ಕೇವಲ 11 ಕೋಟಿ ಮಾತ್ರ. ಹಾಗಾಗಿ ಸರ್ಕಾರದ ಯೋಜನೆಗಳ ಅರಿವು ಮೂಡಿಸಿ ಹಣ ಸದ್ಬಳಕೆಗೆ ಅಗತ್ಯ ಮಾರ್ಗದರ್ಶನ ಮಾಡಲಾಗುವುದೆಂದರು.

Advertisement

ನಮ್ಮ ಸಮಾಜದ ಹೆಣ್ಣುಮಗಳು ಹಸು ಖರೀದಿಸಿದರೆ 45 ಸಾವಿರ ಸಬ್ಸಿಡಿ ಸಿಗುತ್ತದೆ. ಇಂತಹ ಮಾಹಿತಿ ಕೆಲವರಿಗೆ ತಿಳಿದಿಲ್ಲ. ವಿವಿಧ ಯೋಜನೆಗಳ ಸೌಲಭ್ಯ, ಸಬ್ಸಿಡಿ ಮುಂತಾದವುಗಳು ವಸ್ತು ಪ್ರದರ್ಶನದಲ್ಲಿ ಅನಾವರಣಗೊಳ್ಳಲಿದೆ ಎಂದ ಅವರು, ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿರುವ ಮುಖ್ಯ ಮಂತ್ರಿ ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿಗಳಾದ ಸಿದ್ದಾರಾಮಯ್ಯ ಮತ್ತು ಕುಮಾರಸ್ವಾಮಿಯವರ ಗಮನಕ್ಕೆ ಸಮಾಜದ ಬೇಡಿಕೆ ತರಲಾಗುವುದು ಎಂದು ಸ್ವಾಮೀಜಿ ಹೇಳಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ ಮಾತನಾಡಿ, ಕಳೆದ ವರ್ಷದ ಜಾತ್ರಾ ಭದ್ರತಾ ವ್ಯವಸ್ಥೆ ಪರಿಶೀಲಿಸಲಾಗಿದ್ದು, ಈ
ಬಾರಿ ಕೆಲವು ಸುಧಾರಣೆ ಮಾಡಿಕೊಳ್ಳಲಾಗುತ್ತಿದೆ. ಮಹಿಳೆಯರು ಮತ್ತು ಮಕ್ಕಳ ದೃಷ್ಟಿಯಿಂದ ಪೊಲೀಸ್‌ ಔಟ್‌ಪೋಸ್ಟ್‌ ತೆರೆಯಲಾಗುವುದು. ಅಗತ್ಯವಿರುವೆಡೆ ಸಿ.ಸಿ. ಕ್ಯಾಮೆರಾ ಅಳವಡಿಸುವುದರೊಂದಿಗೆ ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕರ ವಾಹನ ನಿಲುಗಡೆ ಹಾಗೂ ವಿಐಪಿಗಳ ವಾಹನ ನಿಲುಗಡೆಗೆ ಪ್ರತ್ಯೇಕ ಪಾರ್ಕಿಂಗ್‌ ವ್ಯವಸ್ಥೆ ಮಾಡಲಾಗುವುದು. ಪೊಲೀಸ್‌ ಇಲಾಖೆ ವತಿಯಿಂದ ಅಪರಾಧ ತಡೆಗಟ್ಟುವಿಕೆ, ಜಾಗೃತಿ ಮೂಡಿಸಲು ಕ್ರಮ ವಹಿಸಲಾಗುವುದು ಎಂದು ಹೇಳಿದರು.

ಜಿ.ಪಂ. ಸಿಇಒ ಪದ್ಮ ಬಸವಂತಪ್ಪ ಮಾತನಾಡಿ, ಜಿ.ಪಂ. ವ್ಯಾಪ್ತಿಯ ಎಲ್ಲಾ ಇಲಾಖೆಗಳು ತಮ್ಮ ತಮ್ಮ ಇಲಾಖೆಗಳ ಕಾರ್ಯಕ್ರಮಗಳನ್ನು ವಸ್ತು ಪ್ರದರ್ಶನದಲ್ಲಿ ಪ್ರದರ್ಶಿಸಲು ಈಗಾಗಲೇ ಸೂಚಿಸಲಾಗಿದೆ ಎಂದರು.

ಸಭೆಯಲ್ಲಿ ಜಿ.ಪಂ. ಸದಸ್ಯ ಕೆ.ಎಚ್‌.ಓಬಳಪ್ಪ, ಜಾತ್ರಾ ಮಹೋತ್ಸವ ಸಮಿತಿ ಸಂಚಾಲಕ ಜಿ.ಟಿ. ಚಂದ್ರಶೇಖರ್‌, ಅಪರ ಜಿಲ್ಲಾ ಧಿಕಾರಿ ಪೂಜಾರ ವೀರಮಲ್ಲಪ್ಪ, ಜಿಲ್ಲಾ ಪರಿಶಿಷ್ಠ ವರ್ಗಗಳ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಸುರೇಶ್‌ ರೆಡ್ಡಿ, ನಗರಾಭಿವೃದ್ಧಿ ಕೋಶದ ನಿರ್ದೇಶಕಿ ನಜ್ಮಾ.ಜಿ, ದೂಡ ಆಯುಕ್ತ ಬಿ.ಟಿ.ಕುಮಾರಸ್ವಾಮಿ, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ವಾಲ್ಮೀಕಿ ಸಮಾಜದ ಮುಖಂಡರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next