Advertisement

ಕೋವಿಡ್ ನಿಂದ ಸಾಮಾಜಿಕ ವ್ಯವಸ್ಥೆಯೇ ಬದಲು: ಪಾಟೀಲ್‌

11:47 AM May 22, 2020 | Naveen |

ದಾವಣಗೆರೆ: ಕೋವಿಡ್ ವೈರಾಣು ಜಗತ್ತಿನ ಎಲ್ಲ ವರ್ಗದ ಜನರ ಸಾಮಾಜಿಕ ವ್ಯವಸ್ಥೆಯನ್ನೇ ಬದಲಿಸಿದೆ ಎಂದು ಸಾಹಿತಿ ಡಾ| ಸಿದ್ದನಗೌಡ ಪಾಟೀಲ್‌ ಪ್ರತಿಪಾದಿಸಿದ್ದಾರೆ.

Advertisement

ದಾವಣಗೆರೆ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವತಿಯಿಂದ ಏರ್ಪಡಿಸಿದ್ದ ಸಾಮಾಜಿಕ ಸ್ಥಿತ್ಯಂತರ ಕುರಿತ ವಿಶೇಷ ಆನ್‌ಲೈನ್‌ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆರೋಗ್ಯ ಸಮಸ್ಯೆ ಮಂತ್ರದಿಂದ ರೋಗ ವಾಸಿಯಾಗುತ್ತೆ ಎಂಬ ನಂಬಿಕೆಯನ್ನು ಅಳಿಸಿ ವೈಜ್ಞಾನಿಕ ಸಮಾಜವನ್ನು ನಿರ್ಮಿಸಿದೆ ಎಂದರು.

ಕೋವಿಡ್ ವೈರಸ್‌ ಜನರಲ್ಲಿದ್ದ ಮೌಡ್ಯವನ್ನು ದೂರ ಮಾಡಿ ಸಾಮಾಜಿಕ ಬಾಂಧವ್ಯವನ್ನು ಹೆಚ್ಚಿಸಿದೆ. ದೇವರು, ಧರ್ಮ ಎಂಬ ಆಚರಣೆಗಳನ್ನು ಬದಿಗಿಟ್ಟು ಬದುಕಿನ ಸತ್ಯವನ್ನು ತಿಳಿಸಿಕೊಟ್ಟಿದೆ. ದೈಹಿಕ ಅಂತರ, ಮಾರುಕಟ್ಟೆ ಮಹತ್ವ, ಸಾಮಾಜಿಕ ಪ್ರಜ್ಞೆಯನ್ನು ಅರ್ಥೈಸಿ ಜನರ ಹಿತಕ್ಕಾಗಿ ಪ್ರಜಾಪ್ರಭುತ್ವಕ್ಕೆ ಯಾವ ರೀತಿಯ ಮುಂದಾಲೋಚನೆ ಬೇಕು ಎಂಬ ಹೊಸ ರಾಜಕೀಯ ಶಾಸ್ತ್ರವನ್ನು ತಿಳಿಸಿಕೊಟ್ಟಿದೆ. ಆರ್ಥಿಕ ಹಸಿವು, ಸಾಮಾಜಿಕ ಅಸ್ಪೃಶ್ಯತೆಯಿಂದ ಕಂಗೆಟ್ಟು ವಲಸೆ ಹೋಗಿದ್ದ ಕಾರ್ಮಿಕರು ವಾಪಸ್‌ ಬರುವಂತಾಗಿದೆ. ಅಸಂಖ್ಯಾತರು ಉದ್ಯೋಗವಿಲ್ಲದೆ ನಿರಾಶ್ರಿತರಾಗಿ ಸಂಕಷ್ಟಕ್ಕೀಡಾಗಿದ್ದಾರೆ. ಸರ್ಕಾರ ಅವರೆಲ್ಲರ ರಕ್ಷಣೆಯ ಮಾರ್ಗ ಕಂಡುಕೊಳ್ಳಲು ಮುಂದಾಗಬೇಕಾಗಿದೆ ಎಂದು ಒತ್ತಾಯಿಸಿದರು.

ವಿಶ್ವವಿದ್ಯಾಲಯದ ಕುಲಪತಿ ಪ್ರೊ| ಶರಣಪ್ಪ ವಿ. ಹಲಸೆ ಮಾತನಾಡಿ, ಸಮಸ್ಯೆಯನ್ನು ಸವಾಲಾಗಿ ಸ್ವೀಕರಿಸಿ, ನವ ಸಮಾಜ ನಿರ್ಮಾಣಕ್ಕೆ ಎಲ್ಲರೂ ಮುಂದಾಗಬೇಕು. ಸರ್ಕಾರದ ಜೊತೆ ನಿಂತು ಆತಂಕ ನಿವಾರಿಸಿ ದೇಶವನ್ನು ಸದೃಢಗೊಳಿಸಲು ಎಲ್ಲರ ಸಹಕಾರ ಮುಖ್ಯವಾಗಿದೆ ಎಂದು ತಿಳಿಸಿದರು. ಪತ್ರಿಕೋದ್ಯಮ ವಿಭಾಗದ ಅಧ್ಯಕ್ಷ ಶಿವಕುಮಾರ ಕಣಸೋಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಲಸಚಿವರಾದ ಪ್ರೊ| ಬಸವರಾಜ ಬಣಕಾರ, ಪ್ರೊ| ಎಚ್‌.ಎಸ್‌. ಅನಿತಾ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next