ದಾವಣಗೆರೆ: ಶಿಕ್ಷಣ ನಗರಿ ಖ್ಯಾತಿಯ ದಾವಣಗೆರೆ ತಾಲೂಕಿನಲ್ಲಿ 59 ಗ್ರಂಥಾಲಯಗಳಿವೆ. ಕಳೆದ ಆಗಸ್ಟ್‌ವರೆಗೆ ಗ್ರಂಥಾಲಯ ಇಲಾಖಾ ವ್ಯಾಪ್ತಿಯಲ್ಲಿದ್ದ ಗ್ರಂಥಾಲಯ, ವಾಚನಾಲಯಗಳು ಗ್ರಾಮ ಪಂಚಾಯತ್ ಅಧಿಕಾರ ವ್ಯಾಪ್ತಿಗೆ ಒಳಪಟ್ಟಿವೆ. ದಾವಣಗೆರೆ ತಾಲೂಕಿನ ಪ್ರಮುಖ ಹೋಬಳಿ ಕೇಂದ್ರ, ವಿಧಾನಸಭಾ ಕ್ಷೇತ್ರ ಮಾಯಕೊಂಡ ಗ್ರಾಮದಲ್ಲಿ ಕಳೆದ 6 ವರ್ಷದ ಹಿಂದೆ ನಿರ್ಮಾಣವಾಗಿರುವ ನೂತನ ಕಟ್ಟಡದಲ್ಲಿ ಗ್ರಂಥಾಲಯ ಕಾರ್ಯ ನಿರ್ವಹಿಸುತ್ತಿದೆ.
ಗ್ರಂಥಾಲಯಕ್ಕೆ ಬೆರಳಣಿಕೆಯ ದಿನಪತ್ರಿಕೆಗಳು ಮಾತ್ರ ಬರುತ್ತಿವೆ. ದಿನಪತ್ರಿಕೆಗಳ ಸಂಖ್ಯೆ ಕಡಿಮೆ ಆಗುತ್ತಿರುವುದು ಗ್ರಂಥಾಲಯಕ್ಕೆ ಬರುವಂತಹ ಓದುಗರ ಸಂಖ್ಯೆಯನ್ನೂ ಕಡಿಮೆ ಮಾಡುತ್ತಿದೆ. ಗ್ರಾಮೀಣ ಭಾಗದಲ್ಲಿ ಎಲ್ಲರೂ ಪತ್ರಿಕೆ ಕೊಂಡು ಓದುವುದು ಕಡಿಮೆ. ಮೇಲಾಗಿ ರೈತಾಪಿ ವರ್ಗವೇ ಹೆಚ್ಚಾಗಿ ಇರುವ ಕಾರಣಕ್ಕೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ದಿನಪತ್ರಿಕೆಗಳ ಸಂಖ್ಯೆ ಹೆಚ್ಚಿಸುವ ಅಗತ್ಯತೆ ಇದೆ. ಇಂದಿನ ಆಧುನಿಕ ಯುಗದಲ್ಲಿ ಅನೇಕರು ಸ್ಪರ್ಧಾತ್ಮಕ ಪರೀಕ್ಷೆಯತ್ತ ಗಮನ ನೀಡುವುದರಿಂದ ಗ್ರಂಥಾಲಯಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ಪೂರಕವಾದ ಪುಸ್ತಕಗಳಿಗೆ ಸಾಕಷ್ಟು ಬೇಡಿಕೆ ಇದೆ.
ಆದರೆ, ಗ್ರಂಥಾಲಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಪೂರಕವಾದ ಪುಸ್ತಕಗಳ ಕೊರತೆ ವಿದ್ಯಾರ್ಥಿಗಳು ಹಾಗೂ ಸ್ಪರ್ಧಾತ್ಮಕ ಪರೀಕ್ಷಾಕಾಂಕ್ಷಿಗಳನ್ನು ಕಾಡುತ್ತಿದೆ. ಕೆಲವಾರು ಕಡೆ ಗ್ರಂಥಾಲಯ ಕಡಿಮೆ ಸಮಯ ಮಾತ್ರ ತೆರೆದಿರುತ್ತದೆ ಎಂಬ ದೂರುಗಳು ಕೇಳಿ ಬರುತ್ತಿವೆ. ಗ್ರಾಮೀಣ ಭಾಗದಲ್ಲಿನ ಜನರು, ಓದುಗರು, ವಾಚನಾಸಕ್ತರಿಗೆ ಆನುಕೂಲ ಆಗುವಂತೆ ಸಮಯದಲ್ಲಿ ಬದಲಾವಣೆ ಮಾಡಿಕೊಂಡಲ್ಲಿ ಅನೇಕರಿಗೆ ಗ್ರಂಥಾಲಯದ ಉಪಯೋಗ ಆಗುತ್ತದೆ.
ಗ್ರಂಥಾಲಯದ ಮೂಲ ಉದ್ದೇಶವೂ ಈಡೇರಿದಂತಾಗುತ್ತದೆ. ಜಿಲ್ಲಾ ಪಂಚಾಯತಿ ಕ್ಷೇತ್ರ ಆನಗೋಡು ಗ್ರಾಮದಲ್ಲಿ ಉತ್ತಮ ಕಟ್ಟಡ ಹೊಂದಿರುವ ಗ್ರಂಥಾಲಯ ಇದೆ. ಇಲ್ಲಿಯೂ ದಿನಪತ್ರಿಕೆಗಳ ಕೊರತೆ ಇದೆ. ಅಲ್ಲದೆ ಕಾಲೇಜು ವಿದ್ಯಾರ್ಥಿಗಳಿಗೆ ಅನುಕೂಲಕರ ಸ್ಪರ್ಧಾತ್ಮಕ ಪರೀಕ್ಷೆಗಳ ಪುಸ್ತಕ ಪೂರೈಕೆ ಮಾಡಬೇಕು ಎಂಬ ಬೇಡಿಕೆ ಇದೆ. ನರಗನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಾಲ್ಕು ಗ್ರಾಮದಲ್ಲಿ ಗ್ರಂಥಾಲಯಗಳು ನಡೆಯುತ್ತಿವೆ. ಬಾಡ ಗ್ರಾಮದಲ್ಲಿ ಶಾಲಾ ಕಟ್ಟಡದಲ್ಲೇ ಗ್ರಂಥಾಲಯ ನಡೆಯುತ್ತಿದೆ. ಕೆಲವಾರು ಗ್ರಾಮಗಳಲ್ಲಿ ಗ್ರಾಮ ಪಂಚಾಯತಿ ಇಲ್ಲವೇ ಇತರೆ ಕಡೆ ಗ್ರಂಥಾಲಯಗಳು ನಡೆಯುತ್ತಿವೆ. ಸ್ವಂತ ಜಾಗ, ಕಟ್ಟಡ ಎಂಬ ಮಾತು ಗಾವುದ ದೂರ. ಇರುವುದರಲ್ಲೇ ನಡೆಯುತ್ತಿವೆ.
ಕೆಲವಾರು ಗ್ರಾಮಗಳಲ್ಲಿ ಗ್ರಂಥಾಲಯದ ಸುಳಿವೇ ಇಲ್ಲ ಎನ್ನುವುದು ಅಚ್ಚರಿಯಾದರೂ ಸತ್ಯ. ಮಂಡಲೂರು, ಗುಡಾಳ್, ಗುಮ್ಮನೂರು, ಹಾಲುವರ್ತಿ ಒಳಗೊಂಡಂತೆ ಕೆಲವಾರು ಗ್ರಾಮಗಳಲ್ಲಿ ಗ್ರಂಥಾಲಯ ಸೌಲಭ್ಯ ಮರೀಚಿಕೆ. ಸಾರ್ವಜನಿಕರು, ವಿದ್ಯಾರ್ಥಿ, ಯುವ ಸಮೂಹದಲ್ಲಿ ಜ್ಞಾನದ ಬೆಳಕು ಹರಿಸುವ ಗ್ರಂಥಾಲಯಗಳು ಗ್ರಾಮೀಣ ಭಾಗದಲ್ಲಿ ಹೆಚ್ಚಾಗಬೇಕು. ದಿನಪತ್ರಿಕೆ, ಮಾಸಿಕ, ಉಪಯುಕ್ತ ಪುಸ್ತಕಗಳು ಇಡುವ ಮೂಲಕ ಜನಸಾಮಾನ್ಯರು ಮಾಹಿತಿ ಪಡೆಯುವಂತಹ ಪೂರಕ ವಾತಾವರಣ ನಿರ್ಮಾಣವಾಗಬೇಕು.
ಗ್ರಾಮ ಪಂಚಾಯತ್‌ಗಳು ಸಹ ಗ್ರಂಥಾಲಯಕ್ಕೆ ವಿಶೇಷ ಗಮನ ನೀಡಬೇಕು. ಕೃಷಿ, ತೋಟಗಾರಿಕೆ, ರೇಷ್ಮೆ, ಇತರೆ ಬೆಳೆಗಳು, ಆಧುನಿಕ ಕೃಷಿ ಪದ್ಧತಿ ಪುಸ್ತಕಗಳು ದೊರೆಯುವಂತಾದಲ್ಲಿ ನಿಜಕ್ಕೂ ಸಾಕಷ್ಟು ಅನುಕೂಲ ಆಗುತ್ತದೆ ಎಂಬುದು ಅನೇಕರ ಅಭಿಪ್ರಾಯವಾಗಿದೆ.