Advertisement

ಮಹಿಷಿ ಪರಿಷ್ಕೃತ ವರದಿ ಜಾರಿಗೆ ಒತ್ತಾಯ

11:35 AM Feb 14, 2020 | Naveen |

ದಾವಣಗೆರೆ: ಡಾ| ಸರೋಜಿನಿ ಮಹಿಷಿ ಪರಿಷ್ಕೃತ ವರದಿ ಜಾರಿಗೆ ಒತ್ತಾಯಿಸಿ ಗುರುವಾರ ದಾವಣಗೆರೆ ಕನ್ನಡಪರ ಸಂಘಟನೆಗಳ ಒಕ್ಕೂಟದಿಂದ ಜಯದೇವ ವೃತ್ತದಲ್ಲಿ ವಿನೂತನ ಪ್ರತಿಭಟನೆ ನಡೆಸಲಾಯಿತು.

Advertisement

ಇಂಗ್ಲಿಷ್‌, ಹಿಂದಿ, ತೆಲುಗು, ತಮಿಳು, ಬಿಹಾರಿ, ನೇಪಾಳಿ.. ಭಾಷಿಕರ ವೇಷ ಧರಿಸಿದ್ದ ದಾವಣಗೆರೆ ಕನ್ನಡಪರ ಸಂಘಟನೆಗಳ ಒಕ್ಕೂಟದ ಕೆಲ ಪದಾಧಿಕಾರಿಗಳು ಅನ್ಯಭಾಷಿಕರ ಅಟ್ಟಹಾಸದಿಂದ ಕನ್ನಡಿಗರು ಯಾವುದೇ ಕೆಲಸ ಪಡೆಯದಂತಾಗುತ್ತಿರುವ ಪರಿಸ್ಥಿತಿಯ ಪ್ರಸ್ತುತಪಡಿಸಿದರು.

ಅನ್ಯಭಾಷಿಕರ ನಡುವೆ ಕನ್ನಡ ನೆಲದಲ್ಲಿ ಕನ್ನಡಿಗರೇ… ಕೆಲಸ ಇಲ್ಲದಂತಾಗಿ, ಅಸಹಾಯಕ ಸ್ಥಿತಿಯಲ್ಲಿ ಇರುವುದನ್ನ ಪ್ರತಿಬಿಂಬಿಸಲಾಯಿತು. 1986ರಿಂದ ಈವರೆಗೆ ಡಾ| ಸರೋಜಿನಿ ಮಹಿಷಿ ವರದಿ ಜಾರಿಗೆ ತರದ ಮುಖ್ಯಮಂತ್ರಿಗಳ ಭಾವಚಿತ್ರ ಪ್ರದರ್ಶಿಸುವ ಮೂಲಕ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಕೊಡಿ… ಕೊಡಿ… ಕನ್ನಡಿಗರಿಗೆ ಉದ್ಯೋಗ ಕೊಡಿ… ಕನ್ನಡ ನಾಡಿನಲ್ಲಿ ಕನ್ನಡಿಗರೇ ಸಾರ್ವಭೌಮರು ಎಂಬುದ ತೋರಿಸಿಕೊಡಿ… ಎಂದು ಘೋಷಣೆ ಕೂಗಿದರು. ಕನ್ನಡನಾಡಿನಲ್ಲಿ ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗವಕಾಶ ಕಲ್ಪಿಸುವ ಮಹತ್ತರ ಉದ್ದೇಶದಿಂದ ಡಾ| ಸರೋಜಿನಿ ಮಹಿಷಿಯವರು 1986ರಲ್ಲಿ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು.

ವರದಿ ಸಲ್ಲಿಸಿ ಈಗ್ಗೆ 34 ವರ್ಷ ಕಳೆದರೂ ಯಾವುದೇ ಮುಖ್ಯಮಂತ್ರಿಗಳಾಗಲಿ ಡಾ| ಸರೋಜಿನಿ ಮಹಿಷಿ ವರದಿ ಜಾರಿಗೆ ತರುವ ಕಿಂಚಿತ್ತೂ ಧೈರ್ಯ ತೋರಲಿಲ್ಲ. ಈಗಿನ ಸರ್ಕಾರವಾದರೂ ಡಾ| ಸರೋಜಿನಿ ಮಹಿಷಿ ಪರಿಷ್ಕೃತ ವರದಿ ಜಾರಿಗೆ ತರುವ ಮೂಲಕ ಐಟಿಬಿಟಿ- ಖಾಸಗಿ ಕಂಪನಿಗಳಲ್ಲಿನ ಶೇ.80 ರಷ್ಟು ಉದ್ಯೋಗಗಳು ಕನ್ನಡಿಗರಿಗೆ ದೊರೆಯುವಂತೆ ಮಾಡಬೇಕು. ಡಾ| ಸರೋಜಿನಿ ಮಹಿಷಿ ಪರಿಷ್ಕೃತ ವರದಿ ಜಾರಿಗೆ ತರುವ ಮುಖೇನ ಕನ್ನಡಿಗರಿಗೆ ಬಗೆಗಿನ ನಿಜವಾದ ಕಾಳಜಿ ಪ್ರದರ್ಶಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

Advertisement

ಕನ್ನಡನಾಡಿನಲ್ಲಿ ಇಂಗ್ಲಿಷ್‌, ಹಿಂದಿ, ತಮಿಳು, ಮಲಯಾಳಿ, ತೆಲುಗು… ಇತರೆ ಭಾಷಿಕರೇ ಎಲ್ಲಾ ಉದ್ಯೋಗ ಪಡೆಯುತ್ತಿದ್ದಾರೆ. ಕನ್ನಡ ನಾಡಿನಲ್ಲಿ ಕನ್ನಡಿಗರೇ ಸಾರ್ವಭೌಮರು… ಎಂಬ ಹೇಳಿಕೆಯನ್ನೇ ಅಣಕುವಾಡುವಂತೆ ಪರ ಭಾಷಿಕರ ಅಟ್ಟಹಾಸ ಕಂಡು ಬರುತ್ತಿದೆ. ಕನ್ನಡಿಗರು ಉದ್ಯೋಗ ಇಲ್ಲದೆ ನಿರುದ್ಯೋಗದ ಸುಳಿಯಲ್ಲಿ ಬೆಂದು ಹೋಗುತ್ತಿದ್ದಾರೆ.

ಕನ್ನಡಿಗರಿಗೆ ನ್ಯಾಯ ಒದಗಿಸಬೇಕಾದ ಸರ್ಕಾರ ಜಾಣ ಮೌನ ವಹಿಸಿದೆ ಎಂದು ದೂರಿದರು. ಡಾ| ಸರೋಜಿನಿ ಮಹಿಷಿ ವರದಿ ಜಾರಿಗೆ ಒತ್ತಾಯಿಸಿ ಕನ್ನಡಪರ ಸಂಘಟನೆಗಳು ನಿರಂತರ ಹೋರಾಟ ನಡೆಸುತ್ತಿವೆ. ಆದರೆ, ಯಾವುದೇ ಸರ್ಕಾರ ಈವರೆಗೆ ಉದ್ಯೋಗದಲ್ಲಿ ಸ್ಥಳೀಯ(ಮೀಸಲಾತಿ ಕಾನೂನು) ಜಾರಿಗೆ ತರಲು ಆಸಕ್ತಿ ತೋರದ ಕಾರಣ ಕನ್ನಡಿಗರಿಗೆ ದೊರೆಯಬೇಕಾದ ಉದ್ಯೋಗಗಳು ಪರ ರಾಜ್ಯದವರ ಪಾಲು ಆಗುತ್ತಿವೆ. ಲಕ್ಷಾಂತರ ವಿದ್ಯಾವಂತ ಯುವ ಸಮೂಹ ನ್ಯಾಯವಾಗಿ ದೊರೆಯಬೇಕಾದ ಉದ್ಯೋಗಗಳಿಂದ ವಂಚಿತರಾಗುತ್ತಿದ್ದಾರೆ. ಡಿ ಗ್ರೂಪ್‌, ಕಾವಲುಗಾರರ ಕೆಲಸವೂ ಪರ ರಾಜ್ಯ, ದೇಶದವರ ಪಾಲಾಗುತ್ತಿವೆ. ಪರ ರಾಜ್ಯದವರಿಗೆ ಉದ್ಯೋಗವಕಾಶ ಮಾಡಿಕೊಡುವರು ಅಲ್ಲಿಗೇ ಹೋಗಿ ಚುನಾವಣೆ ಎದುರಿಸಲಿ ಎಂದು ಒತ್ತಾಯಿಸಿದರು.

ಡಾ| ಸರೋಜಿನಿ ಮಹಿಷಿ ವರದಿಯಂತೆ ರಾಜ್ಯ, ಕೇಂದ್ರ ಸರ್ಕಾರಿ ವಲಯದ ಉದ್ಯಮ, ಕಚೇರಿ, ಬ್ಯಾಂಕ್‌ ಇತರೆ ಹಣಕಾಸು ಸಂಸ್ಥೆಯಲ್ಲಿ ಕನ್ನಡಿಗರಿಗೆ ಶೇ. 100 ರಷ್ಟು ಉದ್ಯೋಗವಕಾಶ ಮಾಡಿಕೊಡಲಿದೆ. ಖಾಸಗಿ ಕಾರ್ಖಾನೆ, ಐಟಿ-ಬಿಟಿ ಸಂಸ್ಥೆಗಳಲ್ಲಿ 3,4,5,6 ಗುಂಪಿನ, ಎ ದರ್ಜೆಯ ಉದ್ಯೋಗದಲ್ಲಿ ಕನ್ನಡಿಗರಿಗೆ ಶೇ.80 ರಷ್ಟು ಮೀಸಲು, ಉನ್ನತ ವೇತನ(ಎ ವರ್ಗ) ಹುದ್ದೆಗಳಿಗೆ ಎನ್‌ಇಎನ್‌ ಮೂಲಕ ಕೇಂದ್ರ ಸರ್ಕಾರ ಉದ್ಯಮಗಳಲ್ಲಿ ಶೇ. 65
ರಷ್ಟು ಕೊಡಬೇಕು ಎನ್ನುತ್ತದೆ. ಡಾ| ಸರೋಜಿನಿ ಮಹಿಷಿ ಪರಿಷ್ಕೃತ ವರದಿ ಜಾರಿಗೆ ಬಂದಲ್ಲಿ ಕನ್ನಡಿಗರು ಎದುರಿಸುತ್ತಿರುವ ನಿರುದ್ಯೋಗ ಸಮಸ್ಯೆ ಬಹುತೇಕ ಕಡಿಮೆ ಆಗಲಿದೆ. ಬಿಜೆಪಿ ಸರ್ಕಾರವಾದರೂ ಡಾ| ಸರೋಜಿನಿ ಮಹಿಷಿ ಪರಿಷ್ಕೃತ ವರದಿ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.

ಆಂಧ್ರ ಪ್ರದೇಶ, ತಮಿಳುನಾಡು, ಮಹಾರಾಷ್ಟ್ರ, ಒಡಿಶಾ ರಾಜ್ಯದಲ್ಲಿ ಸ್ಥಳೀಯರಿಗೆ ಶೇ.75 ಉದ್ಯೋಗ ಮೀಸಲು ಇಡುವ ಮೂಲಕ ಸ್ಥಳೀಯ ಭಾಷೆಯನ್ನ ಶ್ರೀಮಂತಗೊಳಿಸಿವೆ. ಅದೇ ಮಾದರಿಯಲ್ಲಿ ಕರ್ನಾಟಕ ಸರ್ಕಾರ ಡಾ| ಸರೋಜಿನಿ ಮಹಿಷಿ ಪರಿಷ್ಕೃತ ವರದಿ ಜಾರಿಗೆ ತರಬೇಕು ಎಂದು ಒಕ್ಕೊರಲಿನಿಂದ ಒತ್ತಾಯಿಸಿದರು.

ಜಯದೇವ ವೃತ್ತದಿಂದ ಉಪ ವಿಭಾಗಾಧಿಕಾರಿ ಕಚೇರಿಗೆ ತೆರಳಿ ಉಪವಿಭಾಗಾಧಿಕಾರಿ ಕಚೇರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಕನ್ನಡಪರ ಸಂಘಟನೆಗಳ ಒಕ್ಕೂಟದ ಕೆ.ಜಿ. ಯಲ್ಲಪ್ಪ, ಕೆ.ಜಿ. ಶಿವಕುಮಾರ್‌, ಎನ್‌.ಎಚ್‌. ಹಾಲೇಶ್‌, ಕೆ.ಬಿ. ರುದ್ರೇಶ್‌, ಸುವರ್ಣಮ್ಮ, ಶುಭಮಂಗಳ, ಸಂತೋಷ್‌ ದೊಡ್ಮನಿ, ಗೀತಾ, ವೀಣಾ, ಸುರೇಶ್‌ ಐಗೂರು, ಅರವಿಂದಾಕ್ಷ, ಎಂ. ರವಿ, ಬಾಬುರಾವ್‌, ಸುರೇಶ್‌ ಹಾದಿಮನಿ, ಮಂಜುನಾಥ್‌, ವೀರೇಶ್‌, ಮಹಾಂತೇಶ್‌, ಕೆ.ಎಂ. ನಿಂಗರಾಜ್‌, ನೂರುಲ್ಲಾ, ಜಯಲಕ್ಷ್ಮಿ, ಮಂಜುನಾಥ್‌ ಬಣಕಾರ್‌, ಶಿವಯ್ಯ, ಟಿ.ಎಸ್‌. ಶಿವಕುಮಾರ್‌, ಕರಿಯಪ್ಪ, ನಾಗರಾಜಪ್ಪ , ರೈತ ಸಂಘದ ರಾಜ್ಯ ಕಾರ್ಯದರ್ಶಿ ಬಲ್ಲೂರು ರವಿಕುಮಾರ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next