ದಾವಣಗೆರೆ: ಈ ವರ್ಷ ನನ್ನ ಟ್ಯಾಗ್ ಸ್ಪಿರಿಟ್ 2020. ಅಂದರೆ 2020ರ ಜ.1 ರಿಂದ ಡಿ.31ರ ವರೆಗೆ ಸ್ವಲ್ಪವೂ ಬೇಸರವಿಲ್ಲದೇ, ಚೈತನ್ಯ ಕಳೆದುಕೊಳ್ಳದೇ ಹುಮ್ಮಸ್ಸು, ಹುರುಪಿನಿಂದ ನಾನೂ ಸೇರಿದಂತೆ ಎಲ್ಲ ಇಲಾಖೆಗಳ ಅ ಧಿಕಾರಿಗಳೊಂದಿಗೆ ತಂಡದಂತೆ ಕೆಲಸ ನಿರ್ವಹಿಸುತ್ತೇವೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೇಳಿದ್ದಾರೆ.
ಬುಧವಾರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಏರ್ಪಡಿಸಿರುವ ಸರ್ಕಾರದ ನೂರು ದಿನಗಳ ಸಾಧನೆ ಮತ್ತು ನೆರೆ ಸಂತ್ರಸ್ತರ ಪರಿಹಾರಕ್ಕಾಗಿ ಕೈಗೊಂಡ ಕಾರ್ಯಕ್ರಮಗಳ ಬಿಂಬಿಸುವ ಛಾಯಾಚಿತ್ರ ಪ್ರದರ್ಶನ ಉದ್ಘಾಟನೆ ಕಾರ್ಯಕ್ರಮದ ನಂತರ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕಂದಾಯ ಇಲಾಖೆ ಚೈತನ್ಯದ ಆಗರ. ಸಾಮರ್ಥ್ಯದ ಸಾಗರ. ಸರ್ಕಾರ ಕಂದಾಯ ಇಲಾಖೆಯಿಂದ ಹೆಚ್ಚಿನ ನಿರೀಕ್ಷೆ ಹೊಂದಿದ್ದು, ಆ ನಿರೀಕ್ಷೆ ಮೀರಿ ಕೆಲಸ ಮಾಡುತ್ತೇವೆ. ನಮ್ಮ ಇಲಾಖೆ ಎಲ್ಲರಿಗೂ ಹತ್ತಿರ, ಎಲ್ಲರಿಗಾಗಿ ನಿತ್ಯ ನಿರಂತರವಾಗಿ ಎಲ್ಲರೂ ಕೆಲಸ ಮಾಡುತ್ತೇವೆ ಎಂದರು.
ಛಾಯಾಚಿತ್ರ ಪ್ರದರ್ಶನ: ಛಾಯಾಚಿತ್ರ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾಧಿಕಾರಿ, ಇತ್ತೀಚೆಗೆ ರಾಜ್ಯದ 103 ತಾಲೂಕುಗಳಲ್ಲಿ ಸಂಭವಿಸಿದ ಪ್ರವಾಹದಿಂದಾಗಿ ಹಾನಿಗೊಳಗಾದ ಪ್ರದೇಶದಲ್ಲಿ ರಸ್ತೆ, ಸೇತುವೆ ಪುನರ್ ನಿರ್ಮಾಣ ಕಾರ್ಯ ಕೈಗೊಳ್ಳಲಾಗಿದೆ. ನೆರೆ ಪೀಡಿತ ಪ್ರದೇಶಕ್ಕೆ ಕೇಂದ್ರ ಸರ್ಕಾರ 1200 ಕೋಟಿ ರೂ. ಪರಿಹಾರ ಬಿಡುಗಡೆ ಮಾಡಿದೆ. ರಾಜ್ಯ ಸರ್ಕಾರ ಸಹ 6,450 ಕೋಟಿ ರೂ. ಬಿಡುಗಡೆ ಮಾಡುವ ಮೂಲಕ ನೆರೆ ಸಂತ್ರಸ್ತರ ನೋವಿಗೆ ಮಿಡಿದಿದೆ ಎಂದರು.
ಪ್ರವಾಹದಿಂದ ಸಂಪರ್ಕ ಕಳೆದುಕೊಂಡಿದ್ದ 175 ರಸ್ತೆ ಹಾಗೂ ಸೇತುವೆಗಳ ಪೈಕಿ 142 ರಸ್ತೆ ಪುನರ್‌ನಿರ್ಮಾಣ ಕೈಗೊಳ್ಳಲಾಗಿದೆ. ಬೆಳೆ ನಷ್ಟ ಅನುಭವಿಸಿದ್ದ ರೈತರ ಖಾತೆಗೆ ನೇರವಾಗಿ ಹಣ ಜಮಾ ಮಾಡಲಾಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಯೋಜನೆಗಳು, ಎಸ್‌ಸಿಪಿ, ಟಿಎಸ್‌ಪಿ ಯೋಜನೆಯಡಿ 30,445 ಕೋಟಿ ಬಿಡುಗಡೆ, ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆಯಡಿ 23 ಲಕ್ಷ ಜನರಿಗೆ ಆರೋಗ್ಯ ಕಾರ್ಡ್ ವಿತರಣೆ, ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಅಭಿವೃದ್ಧಿಗೆ ಆದ್ಯತೆ, ಸುಸ್ಥಿರ ಮತ್ತು ರಚನಾತ್ಮಕ ಪ್ರವಾಸೋದ್ಯಮ ಅಭಿವೃದ್ಧಿಗೆ ಪ್ರೋತ್ಸಾಹ ಸೇರಿದಂತೆ ಹಲವಾರು ಯೋಜನೆಗಳನ್ನು ಪ್ರಸಕ್ತ ಸರ್ಕಾರ ಜಾರಿಗೆ ತಂದಿದ್ದು, ಈ ಕುರಿತಾಗಿ ಇಲ್ಲಿ ಪ್ರದರ್ಶಿಸಲಾಗಿರುವ ಛಾಯಾಚಿತ್ರಗಳು ಮಾಹಿತಿ ನೀಡಲಿವೆ ಎಂದು ಅವರು ಹೇಳಿದರು.
ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಸಿದ್ದೇಶ್ವರ್ ಹೆಬ್ಟಾಳ್, ಜಿಲ್ಲಾ ಪಂಚಾಯಿತಿ ಪಿಆರ್ ಇಡಿ ಇಂಜಿನಿಯರ್ ಪರಮೇಶ್ವರಪ್ಪ, ಪರಿಶಿಷ್ಟ ಜಾತಿ ನಿಗಮದ ವ್ಯವಸ್ಥಾಪಕ ಸುರೇಶ್ ರೆಡ್ಡಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ
ಸಹಾಯಕ ನಿರ್ದೇಶಕ ಡಿ. ಅಶೋಕ್‌ಕುಮಾರ್ ಈ ಸಂದರ್ಭದಲ್ಲಿದ್ದರು.