ದಾವಣಗೆರೆ: “ಅವರಂತಹ ದೊಡ್ಡ ಸ್ವಾಮಿ ನಮ್ಮಂತಹವರ ಮನೆಗೆ ಬಂದಿದ್ದು, ಅವರು ಬಂದ ಮೇಲೆ ನಮಗೆ ಒಳ್ಳೆಯದ್ದಾಗಿರೋದೇ ನಮ್ಮ ಪುಣ್ಯ. ಅವರು ಇಲ್ಲ ಎನ್ನುವುದೇ ಬಹಳ ಬೇಸರದ ವಿಷಯ…
ಇದು 2015ರ ಅ.22 ರಂದು ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳು ಭೇಟಿ ನೀಡಿದ್ದ ಮನೆಯ ಮಾಲೀಕ ಮಂಜಪ್ಪನ ನೋವಿನ ಮಾತು. ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳು ತಮ್ಮ 5ನೇ ಪರ್ಯಾಯದ ಪೂರ್ವಭಾವಿ ಸಂಚಾರದ ಅಂಗವಾಗಿ 2015ರ ಅ.22 ಮತ್ತು 23 ರಂದು ದಲಿತರ ಕಾಲೋನಿಗಳಲ್ಲಿ ಸಂಚರಿಸಿ ಹಲವು ಮನೆಗೆ ಭೇಟಿ ನೀಡಿದ್ದರು. ಅದರಂತೆಯೇ ನಿಟುವಳ್ಳಿಯ ದಲಿತ ಕಾಲೋನಿಯ ಮಂಜಪ್ಪನ ಮನೆಗೆ ಭೇಟಿ ನೀಡಿ, ಪಾದ ಪೂಜೆ ಮಾಡಿಸಿಕೊಂಡಿದ್ದರು.
“ಉಡುಪಿ ಸ್ವಾಮೀಜಿಗಳು ನಮ್ಮ ಮನೆಗೆ ಬರುತ್ತಾರೆ ಎಂದು ಒಂದು ವಾರದ ಮುಂಚೆ ಹೇಳಿದಾಗ ನನಗೆ ಮತ್ತು ನಮ್ಮ ಮನೆಯವರಿಗೆ ತುಂಬಾ ಸಂತೋಷ ಆಗಿತ್ತು. ಅವರಂತಹ ದೊಡ್ಡ ಸ್ವಾಮಿಯವರು ನಮ್ಮಂತಹವರ ಮನೆಗೆ ಬರುತ್ತಾರೆ ಎಂದರೆ ಯಾರು ಬೇಡ ಅನ್ನುತ್ತಾರೆ. ಬರಲಿ ಬಿಡಿ ಅಂದಿದ್ದೆವು’ ಎಂದು ಮಂಜಪ್ಪ ಸ್ಮರಿಸುತ್ತಾರೆ.
ದಸರಾ ಹಬ್ಬದ ಹಿಂದೆ-ಮುಂದೆ ಉಡುಪಿ ಸ್ವಾಮಿಯವರು ಮನೆಗೆ ಬಂದಾಗ ಮನೆಯವರು ಅವರ ಪಾದಪೂಜೆ ಮಾಡಿ, ಹಣ್ಣಿನ ಬುಟ್ಟಿ ಕೊಟ್ಟು, ನಮಸ್ಕಾರ ಮಾಡಿದ್ದೆವು. ನಾವೇನು ಕೊಟ್ಟಿದ್ದೆವೆಯೋ ಅದೇ ಪುಟ್ಟಿಯಲ್ಲಿನ ಎಲ್ಲಾ ಹಣ್ಣುಗಳನ್ನು ನಮ್ಮ ಮನೆಯವರಿಗೆ ನೀಡಿ, ಒಳ್ಳೆಯದಾಗುತ್ತದೆ…ಎಂದು ಆಶೀರ್ವಾದ ಮಾಡಿದ್ದರು. ನಿಜಕ್ಕೂ ಅವರು ನಮ್ಮ ಮನೆಗೆ ಬಂದು ಹೋದ ಮೇಲೆ ಬಹಳ ಒಳ್ಳೆಯದ್ದಾಗಿದೆ. ಅಂತಹವರು ಇಲ್ಲ ಎಂದು ಕೇಳಿಯೇ ನಮ್ಮ ಮನೆಯವರಿಗೆ ಬಹಳ ಬೇಸರವಾಗಿದೆ ಎಂದು ದುಖಃ ಹಂಚಿಕೊಂಡರು.
ನಿಮಗೆ, ನಿಮ್ಮ ಕುಟುಂಬಕ್ಕೆ ಏನೇ ಸಮಸ್ಯೆ ಇದ್ದರೂ ಬಂದು ನನ್ನನ್ನು ಕಾಣಿ… ಎಂದು ಸ್ವಾಮೀಜಿ ಹೇಳಿ ಹೋಗಿದ್ದರು. ಒಂದು ಸಾರಿ ಉಡುಪಿಗೆ ಹೋಗಿದ್ದೇವು. ಆದರೆ, ಅವರು ಬೆಂಗಳೂರಿಗೆ ಹೋಗಿದ್ದರು. ಹಾಗಾಗಿ ನಮಗೆ ಸಿಗಲಿಲ್ಲ. ಆಮೇಲೆ ನಮಗೂ ಹೋಗೋಕೆ ಆಗಲೇ ಇಲ್ಲ. ಈಗ ಅವರೇ ಇಲ್ಲದಂತಾಗಿದೆ. ಅಂತಹವರು ನಮ್ಮ ಮನೆಗೆ ಬಂದಿದ್ದರು ಎನ್ನುವುದೇ ಪುಣ್ಯ…
ಎಂದು ಮಂಜಪ್ಪ ಸ್ಮರಿಸುತ್ತಾರೆ. ನಮ್ಮ ಮನೆಗೆ ಬಂದಂತೆ ಸುಬ್ಬಣ್ಣ, ರಾಜಣ್ಣ ಎಂಬುವವರ ಮನೆಗೂ ಹೋಗಿ, ಪಾದಪೂಜೆ ಮಾಡಿಸಿಕೊಂಡಿದ್ದರು. ಮಾಚೆಂಗೆಮ್ಮ(ಗಲ್ಲಿ ದುರುಗಮ್ಮ) ದೇವಸ್ಥಾನ ಸಮಿತಿಯವರ ಜೊತೆಗೆ ಮಾತನಾಡಿದ್ದರು.
ದೇವಸ್ಥಾನದ ಅಭಿವೃದ್ಧಿಗೆ ಹಣದ ನೆರವು ನೀಡುವ ಮಾತು ಕೊಟ್ಟಿದ್ದರು. ನಮ್ಮ ಸಮಾಜದವರಿಗೆ ಏನೇ ಕಷ್ಟ ಬಂದರೂ ಬಂದು ಕಾಣಿ.. ಎಂದು ಹೇಳಿ ಹೋಗಿದ್ದರು. ದೇವಸ್ಥಾನ ಸಮಿತಿಯವರು ಉಡುಪಿಗೆ ಹೋದಾಗ ಅವರು ಸಿಕ್ಕಿಲಿಲ್ಲ. ಆಮೇಲೆ ಸಮಿತಿಯವರಿಗೂ ಹೋಗಲಿಕ್ಕೆ ಆಗಲೇ ಇಲ್ಲ ಎಂದು ಮಂಜಪ್ಪ ತಿಳಿಸಿದರು.