Advertisement

ಹಳೆ ಚಾಳಿ ಬಿಡಬೇಕು, ಇಲ್ಲ ಅಂದ್ರೆ ಕಷ್ಟವಾಗುತ್ತೆ

03:54 PM Aug 28, 2019 | Naveen |

ದಾವಣಗೆರೆ: ಏನ್‌ ನಿನ್‌ ಹೆಸರು, ಹಳೆ ಚಾಳಿ ಬಿಟ್ಟಿದ್ದೀಯಾ ಹೆಂಗೆ, ಈಗ ಏನ್‌ ಮಾಡ್ತಿದಿಯಾ, ಹಳೆ ಚಾಳಿ ಬಿಡಬೇಕು, ಇಲ್ಲ ಅಂದ್ರೆ ನಿಂಗೆ ಕಷ್ಟವಾಗುತ್ತೆ. ಇಲ್ಲಿ ಸುಮ್ನೆ ಇರೋಂಗೆ ಇದ್ದು, ಹೋದ ಮೇಲೆ ಏನಾದ್ರೂ ಬಾಲ ಬಿಚ್ಚಿದ್ರೆ ಬೇರೆನೇ ಅಸ್ತ್ರ ಬಳಸಬೇಕಾಗುತ್ತೆ…

Advertisement

ಇದು ಮಂಗಳವಾರ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಆವರಣದಲ್ಲಿ ನಡೆದ ರೌಡಿಶೀಟರ್‌ಗಳ ಪೆರೇಡ್‌ನ‌ಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಹನುಮಂತರಾಯ ಕೆಲವರಿಗೆ ನೀಡಿದ ಖಡಕ್‌ ವಾರ್ನಿಂಗ್‌.

ಹಳೆ ಚಟುವಟಿಕೆ ಬಿಟ್ಟು ಮರ್ಯಾದೆಯಿಂದ ಇರಬೇಕು. ಮತ್ತೆ ಏನಾದರೂ ಹಳೆ ಚಟುವಟಿಕೆ ಮಾಡಿದ್ದು ಗೊತ್ತಾದರೆ ಸಾಕು. ಇಲಾಖೆ ಏನು ಮಾಡಬೇಕೋ ಅದನ್ನು ಖಂಡಿತವಾಗಿಯೂ ಮಾಡುತ್ತದೆ ಎಂದು ಕೆಲವರಿಗೆ ನೇರವಾಗಿಯೇ ಎಚ್ಚರಿಕೆ ನೀಡಿದರು.

ಪೆರೇಡ್‌ನ‌ಲ್ಲಿ ವಿದ್ಯಾರ್ಥಿಯೊಬ್ಬ ಇರುವುದನ್ನ ಕಂಡು, ಏನು ಕೇಸ್‌ ಇದೆ. ಯಾಕೆ ಗಲಾಟೆ ಮಾಡಿದ್ದೆ. ರೌಡಿ ಶೀಟರ್‌ ಪಟ್ಟಿಯಲ್ಲಿ ಇದ್ದರೆ ಮುಂದೆ ಎಲ್ಲದಕ್ಕೂ ತೊಂದರೆ ಆಗುತ್ತದೆ. ಗೊತ್ತಾಯ್ತಾ. ಎಲ್ಲಾ ಬಿಟ್ಟು ಒಳ್ಳೆಯವನಾಗಿ ಇರಬೇಕು ಎಂದು ಸಲಹೆ ನೀಡಿದರು.

ಕೆಲವರು ನಮ್ಮ ಮೇಲೆ ಹಳೆಯ ಕೇಸ್‌ ಇವೆ. ಈಗ ಎಲ್ಲವನ್ನೂ ಬಿಟ್ಟು ಕೆಲಸ ಮಾಡಿಕೊಂಡು ಇದೀವಿ. ಯಾವ ಗಲಾಟೆಗೂ ಹೋಗೋದಿಲ್ಲ ಎಂದರು. ಇಲ್ಲಿ ಬಹಳ ಸೈಲೆಂಟ್ ಆಗಿ ಇದ್ದು, ಹೋದ ಮೇಲೆ ಮತ್ತೆ ಅದೇ ಹಳೆಯ ಕೆಲಸ ಮಾಡಬಾರದು ಎಂದು ಎಚ್ಚರಿಸಿದರು.

Advertisement

16 ವರ್ಷದ ಹಿಂದೆ ಹೋಳಿ ಟೈಮಲ್ಲಿ ಹೆಣ್ಣು ಮಕ್ಕಳ ಮೇಲೆ ಬಣ್ಣ ಹಾಕಿರೋ ಕೇಸ್‌ ಇದೆ. ನಮ್‌ ತಾಯಾಣೆ ಅವತ್ತಿನಿಂದ ಯಾರ ತಂಟೆಗೂ ಹೋಗಿಲ್ಲ, ಹಳೆಯ ಕೇಸ್‌ ಕ್ಲೋಸ್‌ ಮಾಡಿಸಿ ಸರ್‌ ಎಂದು ಒಬ್ಟಾತ ಕೇಳಿಕೊಂಡಾಗ ನೋಡೋಣ ಎಂದು ಹೇಳಿದರು.

ವಯೋವೃದ್ಧರೊಬ್ಬರು ಸಹ ರೌಡಿ ಪೆರೇಡ್‌ನ‌ಲ್ಲಿ ಇರುವುದನ್ನ ಕಂಡು, ವಯಸ್ಸಾಗಿದೆ. ಇನ್‌ ಮೇಲಾದ್ರೂ ಚೆನ್ನಾಗಿ ಇರೋದು ಕಲೀಬೇಕು. ಗೊತ್ತಾಯ್ತ ಎಂದು ತಿಳಿಸಿದ ಜಿಲ್ಲಾ ರಕ್ಷಣಾಧಿಕಾರಿ ಸಂಬಂಧಿತ ಪ್ರಕರಣದ ಬಗ್ಗೆ ಮಾಹಿತಿ ಪಡೆದುಕೊಂಡರು.

ಗಾಂಧಿನಗರ ಪೊಲೀಸ್‌ ಠಾಣಾ ವ್ಯಾಪ್ತಿಯ ರೌಡಿಶೀಟರ್‌ನೊಬ್ಬನ ಮೊಬೈಲ್ ಪಡೆದುಕೊಂಡು ಪರಿಶೀಲನೆ ನಡೆಸಿದರು. ಯಾವ ಯಾವ ಆ್ಯಪ್‌ ಹಾಕೊಂಡಿದಿಯಾ ಎಂದು ಪ್ರಶ್ನಿಸಿದರು.

ಜೂಜಾಟದ ಪ್ರಕರಣ ಒಳಗೊಂಡಂತೆ ಇತರೆ ಕೇಸ್‌ ಹೊಂದಿರುವನಿಗೆ ಇನ್ನೂ ಜೂಜು ಆಡ್ತಿದಿಯಾ, ಇಲ್ಲ ಬಿಟ್ಟಿದಿಯಾ. ಎಲ್ಲನೂ ಬಿಡಬೇಕು ಎಂದರು.

ದಾವಣಗೆರೆಯಲ್ಲಿ ನಡೆದ ಕೊಲೆಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವರು ಪೆರೇಡ್‌ನ‌ಲ್ಲಿ ಇದ್ದರು. ಇನ್ನು ಮೇಲೆ ಸುಮ್ಮನೆ, ಮರ್ಯಾದೆಯಿಂದ ಇರಬೇಕು. ಇಲ್ಲ ಎಂದರೆ ನಿಮಗೆ ಕಷ್ಟ. ಮತ್ತೆ ಒಳಕ್ಕೆ ಕಳಿಸುತ್ತೇವೆ ಎಂದು ಎಚ್ಚರಿಕೆ ನೀಡಿದ ಜಿಲ್ಲಾ ರಕ್ಷಣಾಧಿಕಾರಿ ಹನುಮಂತರಾಯ, ಪೆರೇಡ್‌ ನಂತರ ಪುನಃ ಕಚೇರಿಗೆ ಕರೆದುಕೊಂಡು ಬರುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಹೆಚ್ಚುವರಿ ಪೊಲೀಸ್‌ ಅಧೀಕ್ಷಕ ಎಂ. ರಾಜೀವ್‌, ಗ್ರಾಮಾಂತರ ಉಪ ವಿಭಾಗ ಉಪಾಧೀಕ್ಷಕ ಮಂಜುನಾಥ್‌ ಕೆ. ಗಂಗಲ್, ಡಿಸಿಐಬಿ ಇನ್ಸ್‌ಪೆಕ್ಟರ್‌ ಲಕ್ಷ್ಮಣ್‌ನಾಯ್ಕ, ವಿವಿಧ ಠಾಣಾ ಪಿಎಸ್‌ಐಗಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next