Advertisement

ಓಪಿಡಿ ಬಂದ್‌ ಮಾಡಿ ವೈದ್ಯರ ಪ್ರತಿಭಟನೆ

09:56 AM Aug 01, 2019 | Team Udayavani |

ದಾವಣಗೆರೆ: ಕೇಂದ್ರ ಸರ್ಕಾರ ರಾಷ್ಟ್ರೀಯ ವೈದ್ಯಕೀಯ ಆಯೋಗ ವಿಧೇಯಕ ಅಂಗೀಕಾರ ಮಾಡಿರುವುದನ್ನು ಖಂಡಿಸಿ ಬುಧವಾರ ಭಾರತೀಯ ವೈದ್ಯಕೀಯ ಸಂಘದ ಪದಾಧಿಕಾರಿಗಳು 24 ಗಂಟೆಗಳ ಕಾಲ ಹೊರ ರೋಗಿ ವಿಭಾಗ ಬಂದ್‌ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು.

Advertisement

ಭಾರತೀಯ ವೈದ್ಯಕೀಯ ಮಂಡಳಿ ಸ್ಥಾನದಲ್ಲಿ ರಾಷ್ಟ್ರೀಯ ವೈದ್ಯಕೀಯ ಆಯೋಗ ತರುವ ವಿಧೇಯಕ ಅಂಗೀಕಾರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿ ಹೊರ ರೋಗಿಗಳ ವಿಭಾಗವನ್ನು ಸಂಪೂರ್ಣವಾಗಿ ಬಂದ್‌ ಮಾಡಿ ವೈದ್ಯರು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಹೊರ ರೋಗಿಗಳು ತೊಂದರೆ ಅನುಭವಿಸುವಂತಾಯಿತು.

ದಾವಣಗೆರೆಯಲ್ಲಿನ 68ಕ್ಕೂ ಹೆಚ್ಚು ನರ್ಸಿಂಗ್‌ ಹೋಂಗಳಲ್ಲಿ ಹೊರ ರೋಗಿಗಳ ವಿಭಾಗ ಕಾರ್ಯ ನಿರ್ವಹಿಸದ ಕಾರಣ ದೂರದ ಊರುಗಳಿಂದ ಬಂದಂತವರು ಸರ್ಕಾರಿ ಆಸ್ಪತ್ರೆ ಮೊರೆ ಹೋದರು. ಅಲ್ಲಿಯೂ ಸಾಕಷ್ಟು ಸಂಖ್ಯೆಯಲ್ಲಿ ಹೊರ ರೋಗಿಗಳು ಇದ್ದ ಕಾರಣಕ್ಕೆ ಸಲಹೆ, ಚಿಕಿತ್ಸೆಗೆ ಬಹಳ ಹೊತ್ತು ಕಾಯಬೇಕಾಯಿತು. ಕೆಲವರು ಬಂದ ದಾರಿಗೆ ಸುಂಕ ಇಲ್ಲ ಎನ್ನುವಂತೆ ವಾಪಸ್ಸಾದರೆ. ಇನ್ನು ಕೆಲವರು ಸಲಹೆ, ಚಿಕಿತ್ಸೆ ಪಡೆದು ಕೊಂಡು ಮರಳುವುದು ಸಾಮಾನ್ಯವಾಗಿತ್ತು.

ಬಾಪೂಜಿ ಆಸ್ಪತ್ರೆ ಮುಂದೆ ಪ್ರತಿಭಟನೆ ನಡೆಸಿದ ಭಾರತೀಯ ವೈದ್ಯಕೀಯ ಸಂಘದ ಪದಾಧಿಕಾರಿಗಳು, ರಾಷ್ಟ್ರೀಯ ವೈದ್ಯಕೀಯ ಆಯೋಗ ಪ್ರಾರಂಭವನ್ನು ಖಂಡಿಸಿದರು. 1956 ರಲ್ಲಿ ಪ್ರಾರಂಭವಾದ ಭಾರತೀಯ ವೈದ್ಯಕೀಯ ಮಂಡಳಿಯ ಬದಲಿಗೆ ರಾಷ್ಟ್ರೀಯ ವೈದ್ಯಕೀಯ ಆಯೋಗ ಪ್ರಾರಂಭಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಲು ಮುಂದಾಗುತ್ತಿರುವುದು ಖಂಡನೀಯ. ಒಂದೊಮ್ಮೆ ಆ ಕಾಯ್ದೆ ಜಾರಿಗೆ ಬಂದಲ್ಲಿ ಅದು ವೈದ್ಯಕೀಯ ಕ್ಷೇತ್ರದಲ್ಲಿ ಕರಾಳ ದಿನ. ಹಾಗಾಗಿ ರಾಷ್ಟ್ರೀಯ ವೈದ್ಯಕೀಯ ಆಯೋಗ ಪ್ರಸ್ತಾಪವನ್ನೇ ಕೈ ಬಿಡಬೇಕು ಎಂದು ಒತ್ತಾಯಿಸಿದರು.

ಗುಣಮಟ್ಟದ ವೈದ್ಯಕೀಯ ಶಿಕ್ಷಣಕ್ಕಾಗಿ ಕೆಲವಾರು ಕಾನೂನಾತ್ಮಕ ಬದಲಾವಣೆಗೆಳ ಅವಶ್ಯಕತೆ ಇದೆ. ಈಗಿರುವ ಭಾರತೀಯ ವೈದ್ಯಕೀಯ ಮಂಡಳಿ ಕಾಯ್ದೆಯಲ್ಲೇ ಕೆಲವಾರು ಮಾರ್ಪಾಡು ಮಾಡುವ ಮೂಲಕ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಬಹುದು. ಆದರೆ, ಈಗಿರುವ ಕಾಯ್ದೆಯ ಬದಲಿಗೆ ಮತ್ತೂಂದು ಕಾಯ್ದೆ ಜಾರಿಗೆ ತರುವಂತದ್ದು ಖಂಡನೀಯ ಎಂದು ದೂರಿದರು.

Advertisement

ಉದ್ದೇಶಿತ ಕಾಯ್ದೆ ವೈದ್ಯಕೀಯ ಶಿಕ್ಷಣದ ಗುಣಮಟ್ಟವನ್ನೇ ಪ್ರಪಾತಕ್ಕೆ ತಳ್ಳಲಿದೆ. ವೈದ್ಯರು ಮತ್ತು ವೈದ್ಯಕೀಯ ವಿದ್ಯಾರ್ಥಿಗಳ ಆತ್ಮವಿಶ್ವಾಸವನ್ನೇ ಕಿತ್ತುಕೊಳ್ಳಲಿದೆ. ನೂತನ ಕಾಯ್ದೆ ಪ್ರಕಾರ 64 ಸದಸ್ಯರ ಬದಲಿಗೆ ವಿವಿಧ ವಿಭಾಗಗಳ 5 ಸದಸ್ಯರು ಮಾತ್ರ ಚುನಾಯಿತ ಸದಸ್ಯರಾಗಿರುತ್ತಾರೆ. ಇನ್ನುಳಿದ ಸದಸ್ಯರನ್ನು ಕೇಂದ್ರ ಸರ್ಕಾರ ನಾಮ ನಿರ್ದೇಶನ ಮಾಡುತ್ತದೆ. ಇದು ಪ್ರಜಾತಂತ್ರ ವ್ಯವಸ್ಥೆಗೆ ಕೊಡಲಿ ಪೆಟ್ಟು ಎಂದು ದೂರಿದರು.

ಪ್ರಸ್ತಾಪಿತ ಕಾಯ್ದೆಯಿಂದ ವೈದ್ಯಕೀಯ ಶಿಕ್ಷಣ ಮಟ್ಟ ಹಾಳಾಗಲಿದೆ. ಈಗಾಗಲೇ ರಾಜ್ಯದಲ್ಲಿ ಶೇ.80 ರಷ್ಟು ವೈದ್ಯಕೀಯ ಸೀಟುಗಳ ಶುಲ್ಕವನ್ನು ನಿಯಂತ್ರಿಸುವ ಹಕ್ಕನ್ನು ರಾಜ್ಯ ಸರ್ಕಾರ ಉಳಿಸಿಕೊಂಡಿದೆ. ಕಾಯ್ದೆ ಜಾರಿಯಾದಲ್ಲಿ ಶೇ.40 ರಷ್ಟು ಸೀಟುಗಳಿಗೆ ಇಳಿಯಲಿದೆ. ಶೇ.60 ರಷ್ಟು ಸೀಟುಗಳ ಶುಲ್ಕ ನಿಗದಿಯ ಅವಕಾಶವನ್ನು ಖಾಸಗಿ ಕಾಲೇಜು ಆಡಳಿತ ಮಂಡಳಿ ಪಡೆದುಕೊಳ್ಳುತ್ತವೆ. ಆಗ ವೈದ್ಯಕೀಯ ಶಿಕ್ಷಣ ಎಂಬುದು ಬಡ, ಸಾಮಾನ್ಯ ವರ್ಗದ ಪ್ರತಿಭಾವಂತರಿಗೆ ಗಗನಕುಸುಮ ಆಗಲಿದೆ. ಅವರು ವೈದ್ಯಕೀಯ ಶಿಕ್ಷಣ ಪಡೆಯುವುದು, ವೈದ್ಯರಾಗುವುದು ಅಕ್ಷರಶಃ ಕನಸಾಗಲಿದೆ. ಹಾಗಾಗಿ ರಾಷ್ಟ್ರೀಯ ವೈದ್ಯಕೀಯ ಆಯೋಗ ಕಾಯ್ದೆ ಬೇಡವೇ ಬೇಡ ಎಂದು ಒತ್ತಾಯಿಸಿದರು.

ಭಾರತೀಯ ವೈದ್ಯಕೀಯ ಸಂಘದ ದಾವಣಗೆರೆ ಘಟಕ ಅಧ್ಯಕ್ಷ ಡಾ| ಗಣೇಶ್‌ ಇಡಗುಂಜಿ, ಡಾ| ರವಿಕುಮಾರ್‌, ಡಾ| ಎಸ್‌.ಎಂ.ಬ್ಯಾಡಗಿ, ಡಾ| ಸಂಜೀವ್‌ ಶೆಟ್ಟಿ, ಡಾ| ಹರೀಶ್‌, ಡಾ| ರವಿ, ಡಾ| ಶುಕ್ಲಾಶೆಟ್ಟಿ, ಡಾ| ಬಂದಮ್ಮ, ಡಾ| ಸವಿತಾ ಮಹೇಶ್‌, ಡಾ| ಮಹೇಶ್‌, ಡಾ| ಬಿ.ಎಸ್‌. ನಾಗಪ್ರಕಾಶ್‌, ಡಾ| ಪ್ರಸನ್ನ ಕುಮಾರ್‌, ಡಾ| ರುದ್ರಮುನಿ ಅಂದನೂರು, ಡಾ| ವಸುಧೇಂದ್ರ, ಡಾ| ಅನಿತಾ ರವಿ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next